ಆಲಮಟ್ಟಿ: ಆ.21ರಂದು ಸಿಎಂ ಕೃಷ್ಣೆಗೆ ಬಾಗಿನ
* ಭರದಿಂದ ಆರಂಭಗೊಂಡಿರುವ ಸಿದ್ಧತೆ
* ಮೂರು ಬಾರಿ ನಡೆದಿಲ್ಲ ಬಾಗಿನ
* ಸಭೆ ನಡೆಸುವರೇ ಸಿಎಂ ಬೊಮ್ಮಾಯಿ?
ಗಂಗಾಧರ ಹಿರೇಮಠ
ಆಲಮಟ್ಟಿ(ಆ.18): ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ.21ರಂದು ಬೆಳಗ್ಗೆ 11ಕ್ಕೆ ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಅಧಿಕೃತ ಪ್ರವಾಸ ಪಟ್ಟಿಕೂಡ ಪ್ರಕಟಗೊಂಡಿದೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿಯಲ್ಲಿ ಬಾಗಿನದ ಸಿದ್ಧತಾ ಕಾರ್ಯಗಳು ಭರದಿಂದ ಆರಂಭಗೊಂಡಿವೆ.
ಆ.21ರಂದು ಬಾಗಿನ ಅರ್ಪಣೆ ಮಾಡಲಿರುವ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ತಾತ್ಕಾಲಿಕ ಪಟ್ಟಿಸಿದ್ಧವಾಗಿದೆ. ಅದಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಪೂರಕ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆಮಂತ್ರಣ ಪತ್ರಿಕೆಯ ಮುದ್ರಣ, ಹೆಲಿಪ್ಯಾಡ್ ಸಿದ್ಧತೆ, ಪ್ರವಾಸಿ ಮಂದಿರ ಹಾಗೂ ಸಭೆಗಾಗಿ ಕೆಬಿಜೆಎನ್‌ಎಲ್ ಎಂಡಿ ಕಚೇರಿಯ ಸಭಾಂಗಣ ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸಾಂಪ್ರದಾಯಿಕವಾಗಿ ಬಾಗಿನಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳು ಮಂಗಳವಾರದಿಂದಲೇ ಆರಂಭಗೊಂಡಿವೆ.
ಮಾಹಿತಿಯ ಪ್ರಕಾರ ಕೃಷ್ಣೆಯ ಜಲಧಿಗೆ ಆ.21ರಂದು ಬೆಳಗ್ಗೆ 8ರಂದು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು, ಬೆ.9.30ಕ್ಕೆ ಬಳ್ಳಾರಿಯ ಜಿಂದಾಲ್ ಏರ್‌ಸ್ಟ್ರಿಪ್‌ಗೆ ಆಗಮಿಸಲಿದ್ದಾರೆ. ನಂತರ 10ಕ್ಕೆ ಅಲ್ಲಿಂದ ಹೊರಟು 11ಕ್ಕೆ ಆಲಮಟ್ಟಿಗೆ ಆಗಮಿಸಲಿದ್ದಾರೆ. ನಂತರ ಬಾಗಿನ ಅರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಜನಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ ಉಪಸ್ಥಿತರಿರಲಿದ್ದು, ಶಾಸಕ ಶಿವಾನಂದ ಪಾಟೀಲ ಕೂಡ ಅಧ್ಯಕ್ಷತೆ ವಹಿಸಲಿದ್ದಾರೆ. ಅವಳಿ ಜಿಲ್ಲೆಯ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು, ಸಂಸದರು, ಆಲಮಟ್ಟಿಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ ಇತರರು ಇರಲಿದ್ದಾರೆ.
ಕಳೆದ ವರ್ಷದಿಂದ ಸಿಎಂ ಜತೆ ಬಾಗಿನ ಕಾರ‍್ಯಕ್ರಮದಲ್ಲಿ ಭಾಗವಹಿಸುವ ಅಧಿಕಾರಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಅರ್ಚಕರು, ಪೊಲೀಸರು, ಅಧಿಕಾರಿಗಳು, ಪ್ರವಾಸಿ ಮಂದಿರದ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ವರ್ಷವೂ ಕೋವಿಡ್ ಪರೀಕ್ಷೆ ಮುಂದುವರಿಯಲಿದೆ.
'ಆಲಮಟ್ಟಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿ'
ಸಭೆ ನಡೆಸುವರೇ ಬೊಮ್ಮಾಯಿ?:
ಜಲಸಂಪನ್ಮೂಲ ಸಚಿವರಾದ ನಂತರ ಆಲಮಟ್ಟಿಗೆ ಅವರು ಮೊದಲ ಬಾರಿಗೆ ಬಂದಾಗ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜತೆ ಸುದೀರ್ಘ ಸಭೆಯನ್ನು ತಡರಾತ್ರಿಯವರೆಗೂ ನಡೆಸಿದ್ದರು. ಈ ಬಾರಿ ಮುಖ್ಯಮಂತ್ರಿಯಾಗಿ ಆಲಮಟ್ಟಿಗೆ ಬರುತ್ತಿದ್ದು, ಕೆಬಿಜೆಎನ್‌ಎಲ್ ಯೋಜನೆಯ ಪ್ರಗತಿ ಪರಿಶೀಲನೆ, ಬಾಕಿ ಕೆಲಸ, ಅದಕ್ಕೆ ಉಂಟಾಗಿರುವ ಅಡೆತಡೆ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸುವರೇ? ಎಂಬುದನ್ನು ಕಾದು ನೋಡಬೇಕಿದೆ.
ಬಾಗಿನ ಅರ್ಪಣೆಯ ಇತಿಹಾಸ:
2002ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾ ಮೊದಲ ಬಾರಿಗೆ ಆಲಮಟ್ಟಿಯಲ್ಲಿ ಬಾಗಿನ ಅರ್ಪಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅಲ್ಲಿಂದ ಆರಂಭಗೊಂಡ ಈ ಬಾಗಿನ ಸಂಪ್ರದಾಯ ಪ್ರತಿ ವರ್ಷ ಮುಂದುವರೆದಿದೆ. 2007ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗಳ ಬದಲಾಗಿ ಆಗಿನ ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಬಾಗಿನ ಅರ್ಪಿಸಿದ್ದರು. ಜಲಾನಯನದಲ್ಲಿ ಮಳೆಯ ಕೊರತೆಯ ಕಾರಣ 2015ರಲ್ಲಿ ಆಲಮಟ್ಟಿ ಜಲಾಶಯ ಭರ್ತಿಯೇ ಆಗಲಿಲ್ಲ. 2016ರಲ್ಲಿ ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ ನಿಧನದ ಹಿನ್ನಲೆಯಲ್ಲಿ 2015 ಮತ್ತು 2016 ಎರಡು ವರ್ಷ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿಲ್ಲ. 2018ರಲ್ಲಿ ಬಾಗಿನ ಅರ್ಪಣೆಯ ಕಾರ‍್ಯಕ್ರಮ ಸಿದ್ಧಗೊಂಡಿದ್ದರೂ, ಹವಾಮಾನ ವೈಪರಿತ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಗೆ ಬಂದಿದ್ದ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಆಲಮಟ್ಟಿಗೆ ಬರಲಿಲ್ಲ. ಹೀಗಾಗಿ ಒಟ್ಟಾರೇ ಮೂರು ಬಾರಿ ಇಲ್ಲಿ ಬಾಗಿನ ಅರ್ಪಣೆ ಕಾರ್ಯ ನಡೆದಿಲ್ಲ.