Asianet Suvarna News Asianet Suvarna News

ಏಕಕಾಲಕ್ಕೆ 108 ನಮ್ಮ ಕ್ಲಿನಿಕ್‌’ಗೆ ಇಂದು ಬೊಮ್ಮಾಯಿ ಚಾಲನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿರುವ ಉಳಿದ 107 ಕ್ಲಿನಿಕ್‌ಗಳಿಗೂ ಚಾಲನೆ ನೀಡಲಾಗುತ್ತದೆ. ಬಳಿಕ ಈ ಆರೋಗ್ಯ ಕೇಂದ್ರಗಳು ಜನ ಸೇವೆಗೆ ಮುಕ್ತವಾಗಲಿವೆ.

CM Basavaraj Bommai Will be Drive to Namma Clinic on Feb 7th in Bengaluru grg
Author
First Published Feb 7, 2023, 4:17 AM IST

ಬೆಂಗಳೂರು(ಫೆ.07):  ಆರೋಗ್ಯ ವಲಯದ ಮೂಲ ಸೌಕರ್ಯ ವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 108 ‘ನಮ್ಮ ಕ್ಲಿನಿಕ್‌’ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಮಂಗಳವಾರ) ಚಾಲನೆ ನೀಡಲಿದ್ದಾರೆ.

ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿಪುರ ವಾರ್ಡ್‌ನಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್‌ ಅನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುತ್ತಿದೆ. ಇದೇ ವೇಳೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿರುವ ಉಳಿದ 107 ಕ್ಲಿನಿಕ್‌ಗಳಿಗೂ ಚಾಲನೆ ನೀಡಲಾಗುತ್ತದೆ. ಬಳಿಕ ಈ ಆರೋಗ್ಯ ಕೇಂದ್ರಗಳು ಜನ ಸೇವೆಗೆ ಮುಕ್ತವಾಗಲಿವೆ.

Ayushmati Clinic: ಸ್ತ್ರೀಯರಿಗೆ ಪ್ರತ್ಯೇಕ ‘ಆಯುಷ್ಮತಿ’ ಕ್ಲಿನಿಕ್‌: ಸಚಿವ ಸುಧಾಕರ್‌

ಕಳೆದ ಡಿ.14 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಧಾರವಾಡದ ಬೈರಿದೇವರ ಕೊಪ್ಪದಲ್ಲಿ ನಮ್ಮ ಕ್ಲಿನಿಕ್‌ ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ಏಕಕಾಲಕ್ಕೆ 100 ನಮ್ಮ ಕ್ಲಿನಿಕ್‌ಗಳಿಗೆ ವರ್ಚುವಲ… ಮೂಲಕ ಚಾಲನೆ ನೀಡಿದ್ದರು.

ಯಾವೆಲ್ಲಾ ಸೇವೆ ?:

ನಮ್ಮ ಕ್ಲಿನಿಕ್‌ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ ದರ್ಜೆ ನೌಕರರು ಇರಲಿದ್ದಾರೆ. ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್‌ ಇಲ್ಲಿ ಲಭ್ಯವಿದ್ದು, ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ರಕ್ಷಣೆ, ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆ, ಬಾಯಿ ಆರೋಗ್ಯ ಸೇವೆಗಳು, ನೇತ್ರ ಹಾಗೂ ಕಿವಿ, ಮೂಗು, ಗಂಟಲು ಆರೋಗ್ಯ ಆರೈಕೆ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ, ವೃದ್ಧಾಪ್ಯ ಆರೈಕೆ, ಉಪಶಮನಕಾರಿ ಆರೈಕೆ ಸೇವೆ, ಸುಟ್ಟಗಾಯಗಳು, ಅಪಘಾತ, ಮತ್ತಿತರ ಗಾಯಗಳು ಸೇರಿದಂತೆ ತುರ್ತು ವ್ಯೆದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ, ಪ್ರಯೋಗ ಶಾಲಾ ಸೇವೆಗಳು ಮತ್ತು ಚಿಕಿತ್ಸೆ ದೊರೆಯಲಿದೆ. ಟೆಲಿ ಕನ್ಸಲ್ಟೇಷನ್‌ ಸೇವೆ, ಕ್ಷೇಮ ಚಟುವಟಿಕೆ, ಉಚಿತ ರೆಫರಲ್‌ ಸೇವೆಗಳು ಸಹ ದೊರೆಯಲಿವೆ. ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios