ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಒಂದು ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುವ ಚಿಂತನೆ ಪ್ರಸ್ತಾಪಿಸಿದ ಸಿಎಂ ನನ್ನ ತಾಯಿಗೂ ಕ್ಯಾನ್ಸರ್ ಇತ್ತು ಎಂದು ನೆನೆಸಿಕೊಂಡ ಸಿಎಂ ಬೊಮ್ಮಾಯಿ ನೋವು ತೋಡಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು (ಆ.24): ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ (ಕ್ಯಾನ್ಸರ್) ಮಾದರಿಯಲ್ಲೇ ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಒಂದು ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುವ ಹಾಗೂ ರಾಜ್ಯಾದ್ಯಂತ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಕಡಿಮೆ ದರದಲ್ಲಿ ಔಷಧಿ ಒದಗಿಸಲು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ವ್ಯವಸ್ಥೆ ಮಾಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇಸ್ಫೋಸಿಸ್ ವತಿಯಿಂದ ನಿರ್ಮಿಸಿರುವ ಹೊರ ರೋಗಿಗಳ ವಿಭಾಗದ ಕಟ್ಟಡ ಹಾಗೂ ಹಲವು ವಿಶೇಷ ಸೌಲಭ್ಯಗಳನ್ನು ಸೋಮವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನನ್ನ ತಾಯಿಗೂ ಕ್ಯಾನ್ಸರ್ ಇತ್ತು : ಸಿಎಂ
ನನ್ನ ತಾಯಿಗೂ ಕ್ಯಾನ್ಸರ್ ಇತ್ತು. ಕ್ಯಾನ್ಸರ್ ಬಂದರೆ ಚಿಕಿತ್ಸೆ ಕೊಡಿಸಬೇಕೋ ಬೇಡವೋ ಎನಿಸಿಬಿಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೋವು ತೋಡಿಕೊಂಡರು.
ಕ್ಯಾನ್ಸರ್ ಚಿಕಿತ್ಸೆ ಕೊಟ್ಟರೂ ಬದುಕುತ್ತಾರೋ ಇಲ್ಲ ಎಂಬ ಭಯ ಹುಟ್ಟುತ್ತದೆ. ನನ್ನ ತಾಯಿಗೆ ಕ್ಯಾನ್ಸರ್ ಆದಾಗಿನ ಅವಧಿಗಿಂತ ಈಗ ವೈದ್ಯಕೀಯ ವಿಜ್ಞಾನ ಮುಂದುವರೆದಿದೆ. ಪ್ರಥಮ ಹಾಗೂ ದ್ವಿತೀಯ ಹಂತದಲ್ಲೇ ಪತ್ತೆ ಮಾಡಿದರೆ ರೋಗಿಗಳನ್ನು ಬದುಕಿಸಬಹುದು. ಕ್ಯಾನ್ಸರ್ ಬಂದರೆ ಸಾವು ನಿಶ್ಚಿತ ಎಂಬ ಮಾನಸಿಕ ಒತ್ತಡದಿಂದ ರೋಗಿಗಳನ್ನು ಹೊರ ತರಬೇಕು ಎಂದರು.
