‘ಬಿ ಖಾತಾ ಆಸ್ತಿ ‘ಎ’ ಖಾತಾಗೆ ಸಿಎಂ ಬೊಮ್ಮಾಯಿ ಮರುಜೀವ: ಯೋಜನೆ ಅನುಷ್ಠಾನಕ್ಕೆ ಸಿದ್ಧತೆ
ಕಳೆದೊಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರಿನ ಸುಮಾರು 6 ಲಕ್ಷ ‘ಬಿ ಖಾತಾ ಆಸ್ತಿಗಳನ್ನು ಎ’ ಖಾತಾ ಆಗಿ ಬದಲಾವಣೆಗೆ ರಾಜ್ಯ ಸರ್ಕಾರವು ಮೊದಲ ಹೆಜ್ಜೆ ಇಟ್ಟಿದೆ, 2,400 ಚದರ ಅಡಿ ಒಳಗಿನ ಖಾಲಿ ನಿವೇಶನಗಳಿಗೆ ‘ಎ’ ಖಾತಾ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಫೆ.02): ಕಳೆದೊಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರಿನ ಸುಮಾರು 6 ಲಕ್ಷ ‘ಬಿ ಖಾತಾ ಆಸ್ತಿಗಳನ್ನು ಎ’ ಖಾತಾ ಆಗಿ ಬದಲಾವಣೆಗೆ ರಾಜ್ಯ ಸರ್ಕಾರವು ಮೊದಲ ಹೆಜ್ಜೆ ಇಟ್ಟಿದೆ, 2,400 ಚದರ ಅಡಿ ಒಳಗಿನ ಖಾಲಿ ನಿವೇಶನಗಳಿಗೆ ‘ಎ’ ಖಾತಾ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ 2022-23ನೇ ಸಾಲಿನ ಆಯವ್ಯಯದಲ್ಲಿ ಬಿಬಿಎಂಪಿ ವ್ಯಾಪ್ತಿಯ ‘ಬಿ ಖಾತಾ ಆಸ್ತಿಗಳನ್ನು ‘ಎ’ ಖಾತಾ ಆಗಿ ಬದಲಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೀಗ ರಾಜ್ಯದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಬದಲಾವಣೆಗೆ ಸಂಬಂಧಿಸಿದಂತೆ ತಯಾರಿ ಆರಂಭಿಸಿದೆ.
ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಳೆದ ಜೂನ್-ಜುಲೈನಲ್ಲಿ ನಡೆದ ಈ ಕುರಿತ ಮೊದಲ ಸಭೆಯಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಬದಲಾವಣೆಗೆ ಇರುವ ತೊಡಕುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಸೂಚಿಸಿದ್ದರು. ಜತೆಗೆ, ಯಾವುದೇ ಒಂದು ವರ್ಗಕ್ಕೆ ಅನುಕೂಲವಾಗಿ ಮತ್ತೊಂದು ವರ್ಗಕ್ಕೆ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಲು ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದರು. ಜತೆಗೆ ಈ ಬಗ್ಗೆ ಅಟಾರ್ನಿ ಜನರಲ್ ಹಾಗೂ ತಜ್ಞರಿಂದ ಕಾನೂನು ಸಲಹೆ ಪಡೆಯುವಂತೆ ಸೂಚಿಸಿದ್ದರು.
ಬಡವರು ಸೈಟ್ ಖರೀದಿಗೆ ಸರಳ ಕಾನೂನು: ಸಿಎಂ ಬೊಮ್ಮಾಯಿ ಭರವಸೆ
2,400 ಚ.ಅಡಿ ನಿವೇಶನ ಮಿತಿ: ಇದೀಗ ಮತ್ತೆ ಬಿಬಿಎಂಪಿಯ ಅಧಿಕಾರಿಗಳೊಂದಿಗೆ ಸಭೆ ನಡೆದ ಮುಖ್ಯಮಂತ್ರಿಗಳು 2,400 ಚದರ ಅಡಿ ಒಳಗಿನ ಬಿ ಖಾತಾ ನಿವೇಶನಗಳನ್ನು ಎ ಖಾತಾಗೆ ಪರಿವರ್ತನೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ತ್ವರಿತವಾಗಿ ಈ ಕಾರ್ಯ ಮುಗಿಸುವಂತೆ ಸೂಚಿಸಿದ್ದಾರೆ.
ಖಾಲಿ ನಿವೇಶನ ಮಾತ್ರ: ಮುಖ್ಯಮಂತ್ರಿಗಳು ಸ್ಪಷ್ಟವಾಗಿ 2,400 ಚ.ಅಡಿ ವಿಸ್ತೀರ್ಣ ಇರುವ ನಿವೇಶನಗಳನ್ನು ಮಾತ್ರ ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ ಮಾಡುವಂತೆ ನಿರ್ದೇಶಿಸಿದ್ದಾರೆ. ಕಟ್ಟಡ, ಶೆಡ್ ಯಾವುದೂ ಇರಬಾರದು. ಈ ಬಗ್ಗೆ ಜಾಗೃತಿವಹಿಸುವಂತೆ ತಿಳಿಸಿದ್ದಾರೆ. ಜತೆಗೆ, ನಗರದಲ್ಲಿ ಇರುವ 6 ಲಕ್ಷಕ್ಕೂ ಅಧಿಕ ಬಿ ಖಾತಾ ಆಸ್ತಿಗಳ ಪೈಕಿ ಎಷ್ಟುಖಾಲಿ ನಿವೇಶನ ಇವೆ. ಅದರಲ್ಲಿ 2,400 ಚ.ಅಡಿಗಿಂತ ಕಡಿಮೆ ಅಳತೆಯ ನಿವೇಶನಗಳು ಎಷ್ಟುಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಆರಂಭಿಸುತ್ತಿದ್ದಾರೆ.
ಇನ್ನು ಮಾನದಂಡ ಸಿದ್ಧವಾಗಬೇಕು: ನಗರದಲ್ಲಿರುವ 2400 ಚ.ಅಡಿಯ ಆಸ್ತಿಗಳ ಪೈಕಿ ಯಾವ ದಿನಾಂಕಕ್ಕಿಂತ ಹಿಂದೆ ನೋಂದಣಿ ಆಗಿರುವ ಆಸ್ತಿಗಳನ್ನು ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಬೇಕು. ಯಾವ ಅಳತೆಯ ನಿವೇಶನಕ್ಕೆ ಎಷ್ಟುಶುಲ್ಕ ವಿಧಿಸಬೇಕು ಸೇರಿದಂತೆ ವಿವಿಧ ಅಂಶಗಳ ಕುರಿತು ವಿಸ್ತೃತವಾದ ಮಾನದಂಡ ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸಿ ಕೊಡಬೇಕಿದೆ. ಅಂತಿಮವಾಗಿ ಸರ್ಕಾರ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿದ ಬಳಿಕ ಬಿ ಖಾತಾ ನಿವೇಶನವನ್ನು ಎ ಖಾತಾಗೆ ಬದಲಾವಣೆ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.
ರಿಯಲ್ ಎಸ್ಟೇಟ್‌ಗೆ ಬೂಸ್ಟರ್?: ರಾಜ್ಯ ಸರ್ಕಾರವು 2,400 ಚ.ಅಡಿಗಿಂತ ಕಡಿಮೆ ಅಳತೆಯ ಬಿ ಖಾತಾ ನಿವೇಶನಗಳಿಗೆ ಎ ಖಾತಾ ಮಾನ್ಯತೆ ನೀಡಿದರೆ, ಸಿಲಿಕಾನ್ ಸಿಟಿಯ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗಲಿದೆ. ಬಿ ಖಾತಾ ನಿವೇಶನಗಳ ಬೆಲೆ ದುಪಟ್ಟು ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.
ಎ ಖಾತಾ ಲಾಭ ಏನು?: ಕೃಷಿ ಭೂಮಿಯನ್ನು ವಸತಿ ಬಳಕೆಗೆ ಭೂ ಪರಿವರ್ತನೆ ಮಾಡದೇ ಮತ್ತು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆಯದೇ ಇರುವ ಆಸ್ತಿಗಳನ್ನು ಬಿ ಖಾತಾ ಆಸ್ತಿಗಳು ಎನ್ನಲಾಗುತ್ತದೆ. ಬಿ ಖಾತಾ ಆಸ್ತಿಗಳಿಗೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ. ಆಸ್ತಿ ತೆರಿಗೆ ಸಂಗ್ರಹದ ಏಕೈಕ ಉದ್ದೇಶದಿಂದ ಬಿ ಖಾತಾ ನೀಡಲಾಗಿರುತ್ತದೆ. ಈ ಆಸ್ತಿ ಮಾಲಿಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗೆ ನಿವೇಶನ ಆಧಾರವಾಗಿಟ್ಟುಕೊಂಡು ಯಾವುದೇ ಸಾಲ ಸೌಲಭ್ಯ ನೀಡುವುದಿಲ್ಲ.
ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ
ಮಾರಾಟದ ವೇಳೆ ಈ ಆಸ್ತಿಗಳ ಬೆಲೆಯೂ ಕಡಿಮೆ ಇದರಲಿದೆ. ಇನ್ನು ಬಿಬಿಎಂಪಿಗೂ ಈ ಆಸ್ತಿ ಮಾಲಿಕರು ಯಾವುದೇ ಅಭಿವೃದ್ಧಿ ಶುಲ್ಕ ಪಾವತಿಸಿರುವುದಿಲ್ಲ. ಆದರೂ ಮೂಲಸೌಕರ್ಯ ಒದಗಿಸಬೇಕಾಗಲಿದೆ. ನಗರದ 6 ಲಕ್ಷ ಬಿ ಖಾತಾ ಆಸ್ತಿಗಳನ್ನು ಕಾನೂನಾತ್ಮಕವಾಗಿ ಎ ಖಾತಾಗೆ ಬದಲಾವಣೆ ಮಾಡಿದರೆ ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಕನಿಷ್ಠ 1 ಸಾವಿರ ಕೋಟಿ ಆದಾಯ ಬದಲಿದೆ ಎಂಬ ಲೆಕ್ಕಚಾರವಿದೆ. ಆಸ್ತಿ ಮಾಲಿಕರಿಗೆ ಕಾನೂನಾತ್ಮಕ ಬಲ ನೀಡುವುದರೊಂದಿಗೆ ಸಂಪನ್ಮೂಲ ಕ್ರೂಢೀಕರಣದ ಉದ್ದೇಶದಿಂದ ಸರ್ಕಾರ ಖಾತಾ ಬದಲಾವಣೆಗೆ ಕೈ ಹಾಕಿದೆ.