ವಿವಾದಿತ ಮಳಲಿ ಮಸೀದಿಯಲ್ಲಿ ದೈವಿ ಶಕ್ತಿ ಪತ್ತೆ ಕಾರ್ಯಕ್ಕೆ ಸಿದ್ಧತೆ: ಬಿಜೆಪಿ ಶಾಸಕರು ಭಾಗಿ..!
* ಮಸೀದಿ ತಾಂಬೂಲ ಪ್ರಶ್ನೆಯಲ್ಲಿ ಬಿಜೆಪಿ ಶಾಸಕರು ಭಾಗಿ
* ಮಸೀದಿಯ 250 ಮೀ. ದೂರದಲ್ಲಿ ದೈವಿ ಶಕ್ತಿ ಪತ್ತೆ ಕಾರ್ಯಕ್ಕೆ ತಯಾರಿ
* ಮಸೀದಿಯಲ್ಲಿ ಹಿಂದೂ ದೈವ ಶಕ್ತಿ ಪತ್ತೆಗಾಗಿ ನಡೆಯುವ ತಾಂಬೂಲ ಪ್ರಶ್ನೆ
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಮೇ.24): ಮಂಗಳೂರಿನ ವಿವಾದಿತ ಮಳಲಿ ಮಸೀದಿಯ ಅನತಿ ದೂರದಲ್ಲೇ ನಾಳೆ ತಾಂಬೂಲ ಪ್ರಶ್ನೆ ನಡೆಯಲಿದೆ. ಮಂಗಳೂರಿನ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯ ಕೆಲವೇ ಮೀಟರ್ ದೂರದ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆಗೆ ಸಿದ್ಧತೆ ನಡೆದಿದೆ.
ಮಸೀದಿಯ 250 ಮೀ. ದೂರದಲ್ಲಿ ದೈವಿ ಶಕ್ತಿ ಪತ್ತೆ ಕಾರ್ಯಕ್ಕೆ ತಯಾರಿ ನಡೆದಿದ್ದು, ಬೆಳಿಗ್ಗೆ ಕೇರಳ ಮೂಲದ ಪೊದುವಾಲ್ ರಿಂದ ತಾಂಬೂಲ ಪ್ರಶ್ನೆ ನಡೆಯಲಿದೆ. ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ತಾಂಬೂಲ ಪ್ರಶ್ನೆಯಲ್ಲಿ ಭಾಗಿಯಾಗಲಿದ್ದು, ಮೊದಲಿಗೆ ಮಸೀದಿ ಸುತ್ತಮುತ್ತ ದೈವ ಶಕ್ತಿ ಇದ್ಯಾ ಎಂಬ ಬಗ್ಗೆ ಪ್ರಶ್ನೆಗೆ ಉತ್ತರ ಸಿಗಲಿದೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವಿ ಶಕ್ತಿ ಪತ್ತೆ ಕಾರ್ಯ ನಡೆಯಲಿದ್ದು, ನಾಳೆ ಬೆ. 8 ರಿಂದ ಕೇರಳದ ಪೊದುವಾಳ್ ಗಳು ತಾಂಬೂಲ ಪ್ರಶ್ನೆ ಇಡಲಿದ್ದಾರೆ.
ಮಂಗಳೂರು ಮಸೀದಿಯಲ್ಲಿ ದೇವರ ಅಸ್ತಿತ್ವ ಪತ್ತೆಗೆ ತಾಂಬೂಲ ಪ್ರಶ್ನೆಗೆ ಮುಂದಾದ VHP
ಮಸೀದಿ ತಾಂಬೂಲ ಪ್ರಶ್ನೆಯಲ್ಲಿ ಬಿಜೆಪಿ ಶಾಸಕರು ಭಾಗಿ!
ಮಳಲಿ ಮಸೀದಿ ವಿವಾದ ಸಂಬಂಧ ವಿಎಚ್‌ಪಿ ತಾಂಬೂಲ ಪ್ರಶ್ನೆಯಲ್ಲಿ ಕರಾವಳಿಯಇಬ್ಬರು ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭಾಗಿಯಾಗಲಿದ್ದು, ನಾಳೆ(ಬುಧವಾರ) ಬೆಳಿಗ್ಗೆ 8 ಗಂಟೆಗೆ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಶುರುವಾಗಲಿದೆ. ವಿಎಚ್‌ಪಿ ಪ್ರಮುಖರು, ಗ್ರಾಮಸ್ಥರ ಜೊತೆ ಶಾಸಕರು ಭಾಗಿಯಾಗಲಿದ್ದು, ಮಸೀದಿಯಲ್ಲಿ ಹಿಂದೂ ದೈವ ಶಕ್ತಿ ಪತ್ತೆಗಾಗಿ ನಡೆಯುವ ತಾಂಬೂಲ ಪ್ರಶ್ನೆಗೆ ಸಾಕ್ಷಿಯಾಗಲಿದ್ದಾರೆ.
ತಾಂಬೂಲ ಪ್ರಶ್ನೆ ಹೇಗೆ ನಡೆಯುತ್ತೆ?
ತಾಂಬೂಲ ಪ್ರಶ್ನೆ ಇಡುವ ತಂಡ ಮೊದಲಿಗೆ ಪ್ರಖ್ಯಾತ ಜ್ಯೋತಿಷ್ಯರನ್ನು ಹುಡುಕಬೇಕು. ಮಳಲಿ ಮಸೀದಿ ವಿವಾದ ಸಂಬಂಧ ವಿಶ್ವ ಹಿಂದೂ ಪರಿಷತ್ ಕೇರಳದ ಪೊದುವಾಳ್ ಒಬ್ಬರ ಮೂಲಕ ತಾಂಬೂಲ ಪ್ರಶ್ನೆ ಇಡಲಿದೆ. ಅದರಂತೆ ತಾಂಬೂಲ ಪ್ರಶ್ನೆ ಇಡುವವರು ವೀಳ್ಯದೆಳೆಗಳನ್ನ ತೆಗೆದುಕೊಂಡು ಹೋಗಿ ಜ್ಯೋತಿಷ್ಯರಿಗೆ ನೀಡಬೇಕು. ಆ ವೀಳ್ಯದೆಳೆಗಳ ಲೆಕ್ಕಾಚಾರದ ಆಧಾರದಲ್ಲಿ ಅವರು ಮೊದಲಿಗೆ ಶುಭ ಮತ್ತು ಅಶುಭ ಫಲಗಳನ್ನು ಸ್ಥಳದಲ್ಲೇ ನಿರ್ಧರಿಸ್ತಾರೆ. ಅದರಂತೆ ತಾಂಬೂಲ ಪ್ರಶ್ನೆ ಇಡಬೇಕಾದ ಜಾಗಕ್ಕೆ ಬಂದು ಒಂದು ದಿನದ ತಾಂಬೂಲ ಪ್ರಶ್ನೆ ಇಡಲಾಗುತ್ತದೆ. ಬೆಳಿಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ತಾಂಬೂಲ ಪ್ರಶ್ನೆ ಇಡಲಾಗುತ್ತದೆ. ಓರ್ವ ಪ್ರಮುಖ ಜೋಯಿಷರು ಸೇರಿ ಇಬ್ಬರು ಅಥವಾ ಹೆಚ್ಚು ಸಹಾಯಕ ಜ್ಯೋತಿಷ್ಯರು ಇರ್ತಾರೆ. ಪ್ರಶ್ನೆ ಇಡೋರು ಕೊಟ್ಟ ವೀಳ್ಯದೆಲೆಗಳ ಲೆಕ್ಕಾಚಾರದಲ್ಲಿ ಗ್ರಹಗತಿಗಳು ತಿಳಿಯುತ್ತದೆ. ಆ ಶಾಸ್ತ್ರದ ಪ್ರಕಾರ ಯಾವ ಗ್ರಹ ಎಲ್ಲಿದೆ ಅನ್ನೋದರ ಮೇಲೆ ಒಂದು ಗ್ರಹಗತಿ ಗೊತ್ತಾಗುತ್ತದೆ. ವೀಳ್ಯದೆಲೆ ಸಂಖ್ಯೆಯ ಆಧಾರದಲ್ಲಿ ಶುಕ್ರ ಗ್ರಹದ ಬಗ್ಗೆ ಬಂದರೆ ಆ ಜಾಗದಲ್ಲಿ ದೇವಿ ಸಾನಿಧ್ಯ, ರವಿಯ ಬಗ್ಗೆ ಬಂದರೆ ಶಿವನ ಸಾನಿಧ್ಯ ಅಂತ ಹೇಳಲಾಗುತ್ತದೆ. ಆ ಬಳಿಕ ಹೆಚ್ಚಿನ ಪ್ರಶ್ನಾ ಚಿಂತನೆ ನಡೆಸಿ ಯಾವ ದಿಕ್ಕಿನಲ್ಲಿ ದೈವ ಸಾನಿಧ್ಯವಿದೆ ಅಂತ ನಿಖರವಾಗಿ ಹೇಳುವುದೇ ತಾಂಬೂಲ ಪ್ರಶ್ನೆಯಾಗಿದೆ.