ಬೆಂಗಳೂರು(ಫೆ.07): ರಾಜ್ಯದಲ್ಲಿ ಐದು ವರ್ಷಗಳ ಹಿಂದೆ ಭಾರಿ ಸಂಚಲನ ಮೂಡಿಸಿದ್ದ ಅಕ್ರಮ ಒಂದಂಕಿ ಲಾಟರಿ ಹಗರಣದಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಕ್ಲೀನ್‌ಚೀಟ್‌ ನೀಡಿರುವ ಸಿಬಿಐ, ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ನಿವೃತ್ತ ಐಜಿಪಿ ಸೇರಿದಂತೆ ಹತ್ತು ಮಂದಿ ಪೊಲೀಸರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

ಲಾಟರಿ ದಂಧೆಕೋರ ಪಾರಿರಾಜನ್‌ಗೆ ಸಹಕರಿಸಿದ ಆರೋಪಕ್ಕೆ ತುತ್ತಾಗಿದ್ದ ಪೊಲೀಸರ ವಿರುದ್ಧ ಸುದೀರ್ಘವಾಗಿ ತನಿಖೆ ನಡೆಸಿದ ಸಿಬಿಐ, ಕಳೆದ ಜ.22ರಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಮಾರು 60 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ ಪಾರಿರಾಜನ್‌ ಮನೆಯಲ್ಲಿ ತಾವೇ ಲಾಟರಿ ಟಿಕೆಟ್‌ಗಳನ್ನು ಇಟ್ಟು ಅಂದಿನ ಲಾಟರಿ ನಿಷೇಧ ದಳದ (ಈಗ ಆ ದಳ ರದ್ದಾಗಿದೆ) ನಿವೃತ್ತ ಐಜಿಪಿ ಬಿ.ಎ. ಪದ್ಮನಯನ ಹಾಗೂ ಅವರ ತಂಡ ಅಸತ್ಯದ ಕತೆ ಹೆಣೆದಿತ್ತು ಎಂದು ಆರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮೂಲಕ ಅಂದು ಲಾಟರಿ ದಂಧೆಕೋರನ ಜತೆ ಸ್ನೇಹದ ಕಳಂಕ ಹೊತ್ತು ಅಮಾನತು ಶಿಕ್ಷೆಗೊಳಗಾಗಿದ್ದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಹಾಗೂ ಎಸ್ಪಿ ಧರಣೇಂದ್ರ ದೋಷಮುಕ್ತರಾಗಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿದ ಆರೋಪದಲ್ಲಿ ಪದ್ಮನಯನ ಹಾಗೂ ಆರು ಇನ್ಸ್‌ಪೆಕ್ಟರ್‌ಗಳು ಸೇರಿ 10 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಟರಿ ಟಿಕೆಟ್‌ ಇಟ್ಟಿದ್ದ ಪೊಲೀಸರು:

2015ರ ಏಪ್ರಿಲ್‌ನಲ್ಲಿ ಕೆಜಿಎಫ್‌ ನಿವಾಸಿ ಪಾರಿರಾಜನ್‌ ಎಂಬಾತ ಅಕ್ರಮ ಲಾಟರಿ ಮಾರಾಟದಲ್ಲಿ ತೊಡಗಿರುವ ಬಗ್ಗೆ ಬಂಗಾರಪೇಟೆ ಪಿಎಸ್‌ಐ ಪ್ರಕಾಶ್‌ ಅವರಿಗೆ ಮಾಹಿತಿ ಸಿಕ್ಕಿತು. ಕೂಡಲೇ ಈ ಬಗ್ಗೆ ಲಾಟರಿ ನಿಷೇಧ ಘಟಕದ ಐಜಿಪಿ ಪದ್ಮನಯನ ಅವರಿಗೆ ಪಿಎಸ್‌ಐ ವಿಷಯ ತಿಳಿಸಿದ್ದರು. ಐಜಿ ಸೂಚನೆ ಮೇರೆಗೆ ತನಿಖೆ ಆರಂಭವಾಯಿತು. ಅಷ್ಟರಲ್ಲಿ ಸುವರ್ಣ ನ್ಯೂಸ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪಾರಿರಾಜನ್‌, ತನಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸ್ನೇಹವಿದೆ ಎಂಬುದಾಗಿ ಹೇಳಿದ್ದ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಲಾಟರಿ ನಿಷೇಧ ದಳದ ಅಧಿಕಾರಿಗಳು, ಅದೇ ವರ್ಷದ ಮೇ 1ರಂದು ಎಫ್‌ಐಆರ್‌ ದಾಖಲಿಸಿ ತನಿಖೆ ಶುರು ಮಾಡಿದ್ದರು.

ಕನಕಲಕ್ಷ್ಮೇ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಯಿತು. ಪಾರಿರಾಜನ್‌ ಮನೆಯಲ್ಲಿ ಕಂಪ್ಯೂಟರ್‌, ಲಾಟರಿ ಟಿಕೆಟ್‌ಗಳು, ಹಾರ್ಡ್‌ ಡಿಸ್ಕ್‌ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡರು. ಆದರೆ ಈ ದಾಖಲೆಗಳು ಹಾಗೂ ಪೊಲೀಸರ ನಡವಳಿಕೆ ಬಗ್ಗೆ ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಯಿತು. ಮೇ 1ರಂದು ಪಾರಿರಾಜನ್‌ ಮನೆ ಮೇಲೆ ಪದ್ಮನಯನ ಹಾಗೂ ಇನ್ಸ್‌ಪೆಕ್ಟರ್‌ ಕನಕಲಕ್ಷ್ಮೇ ಸೇರಿ ಇತರರು ದಾಳಿ ನಡೆಸಿದ್ದರು. ಆಗ ಪಾರಿರಾಜನ್‌ ಪುತ್ರಿಯ ಬೆಡ್‌ ರೂಮ್‌ಗೆ ತೆರಳಿದ ಕನಕಲಕ್ಷ್ಮೇ, ತಾವು ಬ್ಯಾಗ್‌ನಲ್ಲಿ ತಂದಿದ್ದ ಲಾಟರಿ ಟಿಕೆಟ್‌ಗಳನ್ನು ಇಟ್ಟು ಹೊರ ಬಂದರು. ಕೆಲ ಹೊತ್ತಿನ ನಂತರ ಪೊಲೀಸರು, ಮೂವರು ಪ್ರತ್ಯದರ್ಶಿಗಳ ಸಮ್ಮುಖದಲ್ಲಿ ಲಾಟರಿ ಟಿಕೆಟ್‌ಗಳನ್ನು ಜಪ್ತಿ ಮಾಡಿದಂತೆ ನಟಿಸಿ ಸಹಿ ಪಡೆದಿದ್ದರು. ಆದರೆ ಪಾರಿರಾಜನ್‌ ಮನೆಯಲ್ಲಿ ಜಪ್ತಿಯಾಗಿತ್ತು ಎನ್ನಲಾದ ಹಾರ್ಡ್‌ಡಿಸ್ಕ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿರಲಿಲ್ಲ ಎಂದು ಸಿಬಿಐ ಹೇಳಿದೆ.

ಲಾಟರಿ ನಿಷೇಧ ಘಟಕ ಸಂಗ್ರಹಿಸಿದ ದಾಖಲೆಗಳನ್ನು ಆಧರಿಸಿ ಮುಂದೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಪಾರಿರಾಜನ್‌ ಮೇಲೆ ಆರೋಪಪಟ್ಟಿಸಹ ದಾಖಲಿಸಿದ್ದರು. ಈ ಕುರಿತು ಕೂಲಂಕಷವಾದ ತನಿಖೆಯಲ್ಲಿ ಸತ್ಯ ಗೊತ್ತಾಯಿತು. ಇದೊಂದು ಪೂರ್ವನಿಯೋಜಿತ ಸಂಚಿನ ಕೂಡಿದ ಕೃತ್ಯವಾಗಿದೆ ಎಂದು ಸಿಬಿಐ ಹೇಳಿದೆ.

ಯಾರ‌್ಯಾರ ಮೇಲೆ ಆರೋಪ?

ನಿವೃತ್ತ ಐಜಿಪಿ ಬಿ.ಎ. ಪದ್ಮನಯನ ಅವರು ಮೊದಲ ಆರೋಪಿ ಆಗಿದ್ದಾರೆ. ನಂತರದ ಸಾಲಿನಲ್ಲಿ ಇನ್ಸ್‌ಪೆಕ್ಟರ್‌ಗಳಾದ ಬಿ.ಎಂ. ಕನಕಲಕ್ಷ್ಮೇ, ಜಿ.ಟಿ.ಸ್ವಾಮಿ, ಸಿ.ಆರ್‌. ರಂಗನಾಥ್‌, ಎಂ.ಜೆ. ಲೋಕೇಶ್‌, ಬಿ.ಎನ್‌. ಶ್ರೀಕಾಂತ್‌, ಆರ್‌. ರವಿಪ್ರಕಾಶ್‌, ಸಬ್‌ ಇನ್ಸ್‌ಪೆಕ್ಟರ್‌ ಬಿ.ಎಂ. ತಿಪ್ಪೇಸ್ವಾಮಿ, ಹೆಡ್‌ ಕಾನ್‌ಸ್ಟೇಬಲ್‌ ಬಿ.ಎಸ್‌. ವೇಣುಗೋಪಾಲ್‌, ಸಬ್‌ ಇನ್ಸ್‌ಪೆಕ್ಟರ್‌ ಡಿ.ರವಿಕುಮಾರ್‌.

ಏನಿದು ಪ್ರಕರಣ?

2015ರಲ್ಲಿ ಕನ್ನಡಪ್ರಭದ ಸೋದರ ಸಂಸ್ಥೆ ಸುವರ್ಣ ನ್ಯೂಸ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಒಂದಂಕಿ ಲಾಟರಿ ಹಗರಣ ಬೆಳಕಿಗೆ ಬಂದಿತ್ತು. ಈ ದಂಧೆಯ ಪ್ರಮುಖ ಆರೋಪಿ ಪಾರಿರಾಜನ್‌ಗೆ ಪೊಲೀಸರ ಶ್ರೀ ರಕ್ಷೆ ಇದೆ ಎಂಬ ಆರೋಪ ಕೇಳಿ ಬಂದಿದ್ದವು. ಬಳಿಕ ಪ್ರಕರಣವು ರಾಜಕೀಯ ರಂಗು ಬಳಿದುಕೊಂಡು ಅಂದಿನ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಹಾಗೂ ವಿಪಕ್ಷಗಳ ಮಧ್ಯೆ ಕದನಕ್ಕೆ ಎಡೆ ಮಾಡಿಕೊಟ್ಟಿತ್ತು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಲಾಟರಿ ಹಗರಣದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾಜ್‌ರ್‍, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು. ಮೊದಲು ಸಿಐಡಿ ತನಿಖೆಗೆ ವಹಿಸಿದ ಸರ್ಕಾರವು, ಕೊನೆಗೆ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ತನಿಖೆಯನ್ನು ಸಿಬಿಐಗೆ ನೀಡಿ ಆದೇಶ ಹೊರಡಿಸಿತು.

ಆರೋಪಕ್ಕೊಳಗಾಗಿದ್ದ ಎಡಿಜಿಪಿ ಅಲೋಕ್‌ ಕುಮಾರ್‌ ಅಮಾನತುಗೊಂಡು ಇಲಾಖಾ ವಿಚಾರಣೆಗೆ ಎದುರಿಸಿದರು. ಲಾಟರಿ ನಿಷೇಧ ಘಟಕವನ್ನು ರದ್ದುಗೊಳಿಸಿದ ಸರ್ಕಾರವು, ಪದ್ಮನಯನ ಸೇರಿದಂತೆ ಪೊಲೀಸರನ್ನು ಬೇರೆಡೆ ವರ್ಗಾವಣೆಗೊಳಿಸಿತ್ತು.