ಬೆಳಗಾವಿ(ಅ.16): ಮುಂದೆ ಚಲಿಸುತ್ತಿದ್ದ ಕಾರಿಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಚಾಲಕ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಎರಡು ಕುಟುಂಬಸ್ಥರ ನಡುವೆ ಹೊಡೆದಾಟ ನಡೆದಿದ್ದು, ಎರಡೂ ಕುಟುಂಬಸ್ಥರಿಂದ ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಕ್ರಾಸ್‌ ಹತ್ತಿರ ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಹುಕ್ಕೇರಿ ವೃತ್ತ ಪೊಲೀಸ್‌ ನಿರೀಕ್ಷಕ ಗುರುರಾಜ್‌ ಕಲ್ಯಾಣಶೆಟ್ಟಿ ಅವರ ಸಂಬಂಧಿಕರು ಹಾಗೂ ಅಪಘಾತ ನಡೆಸಿದ ನಗರದ ಶಹಾಪುರದ ಕುರಣಕರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ಇದರಿಂದ ಎರಡೂ ಕಡೆಯವರಿಗೆ ಗಾಯಗಳಾಗಿವೆ. 

ಕುರಕರಣ ಕುಟುಂಬ ಸದಸ್ಯರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಖಾನಾಪೂರ ತಾಲೂಕಿನ ಕುಸಮಳ್ಳಿಯಲ್ಲಿರುವ ಖಾಸಗಿ ಹೋಟೆಲ್‌ಗೆ ತೆರಳಿ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಬೆಳಗಾವಿಗೆ ರಾತ್ರಿ 11.15 ಗಂಟೆಗೆ ಸುಮಾರಿಗೆ ಆಗಮಿಸುತ್ತಿದ್ದರು. ಇದೇ ವೇಳೆ ಹುಕ್ಕೇರಿ ಸಿಪಿಐ ಜಿ.ಬಿ.ಕಲ್ಯಾಣಶೆಟ್ಟಿ ಕುಟುಂಬ ಸದಸ್ಯರ ಜನ್ಮ ದಿನ ಇದ್ದುದ್ದರಿಂದ, ಕುಟುಂಬಸ್ಥರು ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದರು. ಈ ವೇಳೆ ಕಲ್ಯಾಣಶೆಟ್ಟಿ ಕುಟುಂಬಸ್ಥರಿಗೆ ಸೇರಿದ ಕಾರ್‌, ಮುಂದೆ ಸಂಚರಿಸುತ್ತಿತ್ತು. ಹಿಂಬದಿಯಿಂದ ಬರುತ್ತಿದ್ದ ಕುರಣಕರ ಕುಟುಂಬಸ್ಥರ ವಾಹನ ಮುಂದೆ ಚಲಿಸುತ್ತಿದ್ದ ಕಾರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎರಡು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ವಾಗ್ವಾದ ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿದ್ದರಿಂದ ಎರಡು ಕುಟುಂಬದ ಕೆಲವು ಸದಸ್ಯರಿಗೆ ಗಾಯವಾಗಿದೆ. ಅಲ್ಲದೆ ವಾಹನ ಗಾಜು ಒಡೆಯಲಾಗಿದೆ ಎಂದು ತಿಳಿದು ಬಂದಿದೆ.

ತುಂಬಿ ತುಳುಕಿದ ಡ್ಯಾಂ : ಉಕ್ಕಿ ಅಬ್ಬರಿಸಿ ಮೇಲೇರಿದ ನದಿ

ಆದರೆ ಕುರಕರಣ ಕುಟುಂಬಸ್ಥರು, ಸಿಪಿಐ ಗುರುರಾಜ್‌ ಕಲ್ಯಾಣ ಶೆಟ್ಟಿ ಅವರು ಹಲ್ಲೆ ಮಾಡಿದ್ದಲ್ಲದೇ ಸರ್ವಿಸ್‌ ರಿವಲ್ವಾರ್‌ನಿಂದ ಜೀವ ಬೇದರಿಕೆ ಹಾಕಿದ್ದಾರೆ. ಅಲ್ಲದೇ ಮಹಿಳೆಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಪ್ರತಿದೂರು ಸಲ್ಲಿಸಿದ ಕಲ್ಯಾಣ ಶೆಟ್ಟಿ ಕುಟುಂಬಸ್ಥರು, ನಮ್ಮ ಕಾರಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದಲ್ಲದೇ ಹಲ್ಲೆ ಮಾಡಿದ್ದಾರೆ. ಜತೆಗೆ ಮಹಿಳೆಯರ ಬಟ್ಟೆ ಹಿಡಿದು ಎಳೆದಾಡಿದ್ದಾರೆ ಎಂದು ಪ್ರತಿದೂರು ಸಲ್ಲಿಸಿದ್ದಾರೆ. ಈ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎರಡು ಕುಟುಂಬಸ್ಥರ ನಡುವೆ ನಡೆದ ಗಲಾಟೆ ಪ್ರಕರಣ ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವುದರಿಂದ ದೂರು, ಪ್ರತಿದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತನಿಖೆಯ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.