ಬೆಂಗಳೂರು[ಜ.12]:  ಮೆಜೆಸ್ಟಿಕ್‌ನಲ್ಲಿ ಭಿಕ್ಷೆ ಬೇಡುವ ವಿಚಾರಕ್ಕೆ ಮಂಗಳ ಮುಖಿಯರ ಎರಡು ಗುಂಪಿನ ನಡುವೆ ಮಾರಾಮಾರಿ ಘಟನೆ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರ ಮುದಲ್‌ಪಾಳ್ಯದ ನಿವಾಸಿ ಮಂಗಳಮುಖಿ ಅರ್ಚನಾ ಎಂಬುವರು ಹಲ್ಲೆಗೊಳಗಾದವರು. ಅರ್ಚನಾ ಕೊಟ್ಟದೂರಿನ ಮೇರೆಗೆ ಮಂಗಳಮುಖಿಯರಾದ ಭಾಗ್ಯ, ಪ್ರೇಮಾ, ಭೂಮಿಕಾ, ನಯನಾ ಹಾಗೂ ಕಾಂಚನಾ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳು ಜಾಮೀನಿನ ಬಿಡುಗಡೆ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯನಗರದ ಅರ್ಚನಾ ಹಾಗೂ ಸಂಜನಾ ಮತ್ತು ದಾಕ್ಷಾಯಿಣಿ ಎಂಬುವರು ಜ.9ರಂದು ರಾತ್ರಿ 10.30ರಲ್ಲಿ ಎಸ್‌.ಸಿ ರಸ್ತೆಯ ಮೂವಿಲ್ಯಾಂಡ್‌ ಚಿತ್ರಮಂದಿರದ ಬಳಿ ಭಿಕ್ಷೆ ಬೇಡುತ್ತಿದ್ದರು. ಈ ವೇಳೆ ಅವರಿದ್ದ ಸ್ಥಳಕ್ಕೆ ಬಂದ ಭಾಗ್ಯ, ಪ್ರೇಮಾ, ಭೂಮಿಕಾ, ನಯನಾ ಹಾಗೂ ಕಾಂಚನಾ ಭಿಕ್ಷೆ ಬೇಡುತ್ತಿರುವುದನ್ನು ಪ್ರಶ್ನಿಸಿ ಅರ್ಚನಾ ಬಳಿ ಗಲಾಟೆ ತೆಗೆದಿದ್ದಾರೆ. ಇನ್ನು ಮುಂದೆ ಮೆಜೆಸ್ಟಿಕ್‌ ಸುತ್ತಮುತ್ತಲಿನ ಸ್ಥಳದಲ್ಲಿ ಭಿಕ್ಷೆ ಬೇಡದಂತೆ ಎಚ್ಚರಿಕೆ ನೀಡಿ, ಅವಾಚ್ಯವಾಗಿ ನಿಂದಿಸಿದ್ದರು. ಇದೇ ವಿಚಾರಕ್ಕೆ ಅರ್ಚನಾ ಕಡೆಯ ಗುಂಪು ಆಕ್ರೋಶಗೊಂಡಿದ್ದು, ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದ್ದು ಕೈ-ಕೈ ಮೀಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಪೊಲೀಸರಿಗೆ ಮಾಹಿತಿ ಕೊಟ್ಟ ಮುಸ್ಲಿಂ ವ್ಯಕ್ತಿ: ಬೆಂಗಳೂರಲ್ಲಿ ಅಕ್ರಮ ಗೋ ಸಾಗಾಟ ಪತ್ತೆ...

ಜಗಳದಲ್ಲಿ ಅರ್ಚನಾ ಗಾಯಗೊಂಡು, ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.