ಬಂಗಾರಪೇಟೆ(ಜು.06): ಶವ ಸಂಸ್ಕಾರ ಮಾಡಲು ಸ್ಮಶಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಡ್ಡಿ ಪಡಿಸಿದ್ದರಿಂದ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಗಂಭೀರ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ.

ತಾಲೂಕಿನ ಹುಲಿಬೆಲೆ ಗ್ರಾಪಂ ಅತ್ತಿಗಿರಿಕೊಪ್ಪ ಹಾಗೂ ಕದಿರೇನಹಳ್ಳಿ ಗ್ರಾಮಗಳಿಗೆ ಒಂದೇ ಕಡೆ ಸ್ಮಶಾನ ಇತ್ತು. ಹೀಗಾಗಿ ಪೂರ್ವ ಕಾಲದಿಂದಲೂ ಎರಡೂ ಗ್ರಾಮಗಳಲ್ಲಿ ಯಾರಾದರೂ ಮೃತಪಟ್ಟರೆ ಒಂದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಆದರೆ ಭಾನುವಾರ ಕದಿರೇನಹಳ್ಳಿ ಗ್ರಾಮದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದು ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಅತ್ತಿಗಿರಿಕೊಪ್ಪದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಬೆಂಗ್ಳೂರು ಬಿಟ್ಟು ಹಳ್ಳಿ ಸೇರಿ ನೇಗಿಲು ಹಿಡಿದ ಮಾಜಿ ಶಾಸಕ..!

ಪ್ರತ್ಯೇಕ ಸ್ಥಳ ನಿಗದಿ:

ಇತ್ತೀಚೆಗೆ ಸರ್ಕಾರದ ಆದೇಶದಂತೆ ಸ್ಮಶಾನಗಳ ಒತ್ತುವರಿ ತೆರವುಗೊಳಿಸಲು ಸೂಚನೆ ಮೇರೆಗೆ ತಹಸಿಲ್ದಾರ್‌ ಚಂದ್ರಮೌಳೇಶ್ವರ ರವರು ಅತ್ತಿಗಿರಿಕೊಪ್ಪದ ಗ್ರಾಮದ ಸೇರಿದ ಸರ್ವೇ ನಂಬರ್‌ ನಲ್ಲಿ ಕದಿರೇನಹಳ್ಳಿ ಗ್ರಾಮಸ್ಥರು ವಶ ಸಂಸ್ಕಾರ ಮಾಡಬಾರದು ಅವರಿಗೆ ಪ್ರತ್ಯೇಕ ಸ್ಥಳ ನಿಗದಿಗೊಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು ಎನ್ನಲಾಗಿದೆ. ಇದಕ್ಕೆ ಕದಿರೇನಹಳ್ಳಿ ಗ್ರಾಮದವರೂ ಪ್ರತಿವಿರೋಧ ಮಾಡಿ ತಹಸಿಲ್ದಾರ್‌ ನಮಗೆ ಇನ್ನೂ ಸ್ಮಶಾನ ನಿಗದಿಮಾಡಿಲ್ಲ. ಅಲ್ಲಿಯವರೆಗೂ ಇಲ್ಲೇ ಶವ ಸಂಸ್ಕಾರ ಮಾಡುವೆವು ಎಂದಾಗ ಅದಕ್ಕೆ ಒಪ್ಪದಿದ್ದಾಗ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಪೊಲೀಸರ ಮಧ್ಯ ಪ್ರವೇಶ:

ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೊದಲು ಶವ ಸಂಸ್ಕಾರ ನಡೆಯಲಿ ಸೋಮವಾರ ತಹಸಿಲ್ದಾರ್‌ ರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸಮಸ್ಯೆಗೆ ತಾತ್ಕಾಲಿಕ ಬ್ರೇಕ್‌ ಹಾಕಿದ್ದಾರೆ.