ಚಿಕ್ಕ​ಬ​ಳ್ಳಾ​ಪು​ರ (ಫೆ.24): ಹಿರೇ​ನಾ​ಗ​ವೇಲಿ ಕ್ವಾರಿ ದುರಂತಕ್ಕೆ ಕಾರಣವಾದವರು ಯಾವುದೇ ಪಕ್ಷಕ್ಕೆ ಸೇರಿರಲಿ, ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗು​ವುದು. ದುರಂತದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕ್ವಾರಿಗಾಗಿ ಸಂಗ್ರ​ಹಿ​ಸಿ​ಟ್ಟಿದ್ದ ಅಕ್ರಮ ಸ್ಫೋಟಕ ಸ್ಫೋಟಿಸಿ ಸಂಭ​ವಿ​ಸಿದ ದುರಂತ​ದ​ಲ್ಲಿ ಆರು ಮಂದಿ ಮೃತ​ಪಟ್ಟಘಟನಾ ಸ್ಥಳ ಹಿರೇನಾಗವೇಲಿಗೆ ಮಂಗ​ಳ​ವಾರ ಭೇಟಿ ನೀಡಿ ಮಾತ​ನಾ​ಡಿ​ದರು. ಸ್ಫೋಟಕ ಸಾಗಿಸುವ ವೇಳೆ ದುರಂತ ಸಂಭವಿಸಿ ಮೃತ​ಪಟ್ಟಆರೂ ಮಂದಿಯ ಮೃತದೇಹಗಳು ಛಿದ್ರಛಿದ್ರವಾಗಿವೆ. ಮೃತ​ದೇಹಗಳು ಬಹು​ದೂ​ರದವರೆಗೆ ಹೋಗಿ ಬಿದ್ದಿ​ರು​ವುದು ಸ್ಫೋಟದ ಭೀಕರತೆ ಸೂಚಿಸುತ್ತದೆ ಎಂದರು.

ಗುಡಿಬಂಡೆ ಕ್ರಷರ್ ಜಿಲೆಟಿನ್ ಬ್ಲಾಸ್ಟ್: ಸ್ಥಳಕ್ಕೆ ಸುಧಾಕರ್ ಭೇಟಿ ..

ಪೆಟ್ರೋ​ಲಿಯಂ ಜೆಲ್‌ ಮತ್ತು ಅಮೋ​ನಿಯಂ ನೈಟ್ರೇ​ಟ್‌​ನಿಂದ ಸ್ಫೋಟ ಸಂಭ​ವಿ​ಸಿ​ರ​ಬ​ಹುದು ಎಂದು ತಜ್ಞರು ಪ್ರಾಥ​ಮಿಕ ಮಾಹಿತಿ ನೀಡಿ​ದ್ದಾರೆ. ಅಕ್ರಮ ಸ್ಫೋಟಕ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿರಲಿ ಅವರ ವಿರುದ್ಧ ಕ್ರಮ ಕೈಗೊ​ಳ್ಳು​ತ್ತೇವೆ. ನನಗಿರುವ ಮಾಹಿತಿ ಪ್ರಕಾರ ಮೂರ್ನಾಲ್ಕು ವರ್ಷ​ದಿಂದ ಗಣಿಗಾರಿಕೆ ನಡೆಯುತ್ತಿ​ದೆ. ದುರಂತಕ್ಕೆ ಕಾರಣಿವಾಗಿರುವ ಮೂರು ಮಂದಿ ಗಣಿ​ಮಾ​ಲೀ​ಕ​ರನ್ನು ಬಂಧಿಸಲು ಮೂರು ಮಂದಿ ವಿಶೇಷ ತಂಡ ರಚ​ನೆಗೆ ಸೂಚಿ​ಸ​ಲಾ​ಗಿ​ದೆ. ಈ ಪ್ರಕರಣವನ್ನು ಸಹ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಹೇಗೆ ಆಯಿತು, ಸ್ಫೋಟಕ ಎಲ್ಲಿಂದ ಬಂತು, ಆಂಧ್ರದಿಂದ ಪೂರೈಕೆ ಆಗಿದೆಯೇ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗು​ವುದು. ಸ್ಥಳೀಯ ಪೊಲೀಸರಿಂದ ತನಿಖೆ ಆದರೆ ನಿಷ್ಪಕ್ಷಪಾತ ತನಿಖೆ ಸಾಧ್ಯ​ವಾ​ಗು​ವು​ದಿಲ್ಲ ಎನ್ನುವ ಕಾರ​ಣಕ್ಕೆ ಪ್ರಕ​ರ​ಣದ ತನಿ​ಖೆ​ಯನ್ನು ಸಿಐ​ಡಿಗೆ ವಹಿ​ಸ​ಲಾಗುವುದು. ಈ ದುರಂತ​ದಲ್ಲಿ ಪೊಲೀಸ್‌ ಅಧಿಕಾರಿಗಳ ಲೋಪದ ಬಗ್ಗೆ 24 ಗಂಟೆಯಲ್ಲಿ ವರದಿ ನೀಡುವಂತೆ ಎಡಿಜಿಪಿ ಅವ​ರಿಗೆ ಆದೇಶಿಸಲಾಗಿದೆ. ತಪ್ಪಿ​ತ​ಸ್ಥರು ಎಷ್ಟೇ ದೊಡ್ಡ​ವ​ರಾ​ಗಿ​ದ್ದರೂ ಎಸ್‌ಪಿಯಿಂದ ಹಿಡಿದು ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಯಾರೇ ಆದರೂ ಶಿಸ್ತು ಕ್ರಮ ಕೈಗೊಳ್ಳಲಾ​ಗು​ವುದು ಎಂದು ಬಸ​ವ​ರಾಜ ಬೊಮ್ಮಾಯಿ ತಿಳಿ​ಸಿ​ದ​ರು.

ಫೆ.7ರಂದೇ ರೈಡ್‌ ಆಗಿತ್ತು:  ಸ್ಫೋಟ ಸಂಭವಿಸಿರುವ ಕ್ವಾರಿ ಮೇಲೆ ಫೆ.7ರಂದೇ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದರು. ಅದಕ್ಕೂ ಮೊದಲು ಎಸ್ಪಿ ಕೂಡ ದಾಳಿ ನಡೆಸಿದ್ದರು. ಫೆ.7 ರಂದು ವಾಹನವೊಂದನ್ನು ಜಪ್ತಿ ಮಾಡಿದ್ದರು. ತಮ್ಮ ಕ್ವಾರಿಯಲ್ಲಿ ಸ್ಫೋಟಕ ಸಿಕ್ಕರೆ ದೊಡ್ಡ ಕೇಸ್‌ ಆಗುತ್ತದೆಯೆಂಬ ಕಾರಣಕ್ಕೆ ಸ್ಫೋಟಕಗಳನ್ನು ಹೂತುಹಾಕಲು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ. ಅನುಭವ ಇಲ್ಲದ ವ್ಯಕ್ತಿಗಳ ಕೈಯಲ್ಲಿ ಈ ಕೆಲಸ ಮಾಡಿಸಿರುವುದರಿಂದ ದುರಂತ ಸಂಭವಿಸಿದೆ ಎಂದರು.