ಭದ್ರೆಗಾಗಿ ಚಿತ್ರದುರ್ಗ ಬಂದ್ ಬಹುತೇಕ ಯಶಸ್ವಿ: ವ್ಯಾಪಕ ಬೆಂಬಲ
ಭದ್ರಾ ಮೇಲ್ದಂಡೆ ಕಾಮಗಾರಿ ವಿಚಾರದಲ್ಲಿ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ವಿರೋಧಿಸಿ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳು ರಸ್ತೆಗಿಳಿದು ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಮಾಲೀಕರಿಗೆ ಮನವಿ ಮಾಡಿದರು. ಇದರಿಂದ ಯಾವುದೇ ಅಂಗಡಿಗಳು ತೆರೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜ.23): ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಇಂದು(ಮಂಗಳವಾರ) ಕರೆ ನೀಡಿದ್ದ ಚಿತ್ರದುರ್ಗ ಬಂದ್ ಬಹುತೇಕ ಯಶಸ್ವಿಯಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ವಿಚಾರದಲ್ಲಿ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ವಿರೋಧಿಸಿ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳು ರಸ್ತೆಗಿಳಿದು ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಮಾಲೀಕರಿಗೆ ಮನವಿ ಮಾಡಿದರು. ಇದರಿಂದ ಯಾವುದೇ ಅಂಗಡಿಗಳು ತೆರೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.
ಆಟೋ ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಮಾಲೀಕರ ಸಂಘದವರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ ಗಳು ಊರಿನ ಒಳಗೆ ಪ್ರವೇಶಿಸದೆ ಹೊರಗೆ ಸಂಚರಿಸಿದವು.
ಚಿತ್ರದುರ್ಗ: ಹೋಟೆಲ್‌ಗೆ ಬೆಂಕಿ; ಘಟನೆ ನೋಡಲು ಹೋದ ಮಹಿಳೆ ಸಿಲಿಂಡರ್ ಸ್ಫೋಟಕ್ಕೆ ಬಲಿ!
ಸರ್ಕಾರಿ ಶಾಲಾ ಕಾಲೇಜುಗಳನ್ನು ಹೊರತುಪಡಿಸಿ ಖಾಸಗಿ ಶಾಲಾ ಕಾಲೇಜುಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ಮನೆಯಲ್ಲೇ ರಜೆಯ ಮಜಾ ಮಾಡಿದರು. ಸಿನಿಮಾ ಮಂದಿರದ ಮಾಲೀಕರು ಗಾರ್ಮೆಂಟ್ಸ್, ವಾಹನ ಶೋ ರೂಂ, ಬಟ್ಟೆ ಅಂಗಡಿಗಳು, ಬಂಗಾರದ ವ್ಯಾಪಾರಿಗಳು, ಪತ್ರಿಕಾ ಹಂಚಿಕೆದಾರರ ವಿತರಕರ ಸಂಘ, ಬೀದಿ ಬದಿ ವ್ಯಾಪಾರಿಗಳು, ಎಪಿಎಂಸಿ ವರ್ತಕರು ಹಮಾಲರು, ಕನ್ನಡ ಪರ ಸಂಘಟನೆಗಳು, ಕಟ್ಟಡ ಕಾರ್ಮಿಕ ಸಂಘಟನೆಗಳು, ಟೈಲ್ಸ್ ಮತ್ತು ಗ್ರಾನೈಟ್ ಸಂಘಟನೆ ಮುಖ್ಯಸ್ಥರು ಹಾಗೂ ಹೊಟೇಲ್ ಮಾಲೀಕರು ಬಂದ್ ಗೆ ಬೆಂಬಲ ಸೂಚಿಸಿ ಯಾವುದೇ ವಹಿವಾಟನ್ನು ನಡೆಸದೆ ತಟಸ್ಥರಾಗಿದ್ದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಪ್ರಾರಂಭದ ಭದ್ರಾ ಮೋಲ್ದಂಡೆ ಯೋಜನೆ ಇದುವರೆಗೂ ಕೂಡ ಕುಂಠುತ್ತಾ ಸಾಗಿದೆ. ಅಲ್ಲಿ ಬಂದಂತಹ ಸರ್ಕಾರಗಳು ಅಲ್ಪ ಪ್ರಮಾಣದ ಹಣವನ್ನು ಇಟ್ಟು ಜಿಲ್ಲೆಯ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಭದ್ರಾ ನೀರನ್ನೇ ನೆಚ್ಚಿಕೊಂಡಿರುವ ಜಿಲ್ಲೆಯ ಜನರು ಆಶಾವಾದಿಗಳಾಗಿದ್ದು, ಕೌತಕದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಹಾಗೂ ಇಲ್ಲಿನ ಜನರ ಅಭಿವೃದ್ದಿ ಆಗಬೇಕಾದರೆ ಜಿಲ್ಲೆಗೆ ಭದ್ರಾ ನೀರು ಶೀಘ್ರವಾಗಿ ಬರಬೇಕು ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ: ಕಾಟಯ್ಯನ ಕೆರೆ ಒತ್ತುವರಿ ತೆರವಿಗೆ ಅಪ್ಪರಸನಹಳ್ಳಿ ಗ್ರಾಮಸ್ಥರ ಆಗ್ರಹ
ಕೇಂದ್ರ ಮತ್ತು ರಾಜ್ಯ ಸರ್ಕಾರ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಅನ್ನದಾತರ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಸ್ಪಂದಿಸಬೇಕು. ನಿರ್ಲಕ್ಷ್ಯ ತೋರಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ವಹಿಸಿದ್ದು, ಚಿಕ್ಕಪ್ಪನಹಳ್ಳಿ ಷಣ್ಮುಖ, ರುದ್ರಸ್ವಾಮಿ, ಧನಂಜಯ, ನಾಗರಾಜ್, ಮಲ್ಲಿಕಾರ್ಜುನ್, ಕರವೇ ರಮೇಶ್, ಪ್ರವೀಣ್, ವಿಜಯಕುಮಾರ್ ಸೇರದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.