ಬೆಂಗಳೂರು [ಜ.30]:  ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕ್ರೈಂ ಆಧಾರಿತ ಧಾರಾವಾಹಿ ನೋಡಿ ಹಣಕ್ಕಾಗಿ ವ್ಯಾಪಾರಿಯೊಬ್ಬರ ನಾಲ್ಕು ವರ್ಷದ ಪುತ್ರನನ್ನು ಅಪಹರಿಸಿದ್ದ ಕಿಡಿಗೇಡಿಯನ್ನು ಕೃತ್ಯ ನಡೆದ ಕೆಲವೇ ತಾಸಿನೊಳಗೆ ಸಿನಿಮೀಯ ಶೈಲಿಯಲ್ಲಿ ಕಾಟನ್‌ಪೇಟೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

"

ಬಸವಗುಡಿಯ ಚಿರಾಗ್‌ ಆರ್‌.ಮೆಹ್ತಾ ಬಂಧಿತ. ಪಿಯುಸಿ ಓದಿರುವ ಚಿರಾಗ್‌, ಕೆಲಸವಿಲ್ಲದೆ ಅಲೆಯುತ್ತಿದ್ದ. ಆತನ ತಂದೆ ಪೇಪರ್‌ ಮಾರಾಟ ಮಳಿಗೆ ಹೊಂದಿದ್ದು, ಬಸವನಗುಡಿಯಲ್ಲಿ ನೆಲೆಸಿದ್ದಾರೆ. ಹಣಕ್ಕಾಗಿ ಮನೆ ಮತ್ತು ಅಂಗಡಿಯಲ್ಲಿ ಪೋಷಕರಿಗೆ ಗೊತ್ತಾಗದಂತೆ ಚಿರಾಗ್‌ ಕಳ್ಳತನ ಮಾಡುತ್ತಿದ್ದ. ಮಗನ ವರ್ತನೆಗೆ ಬೇಸತ್ತ ಆತನ ತಂದೆ, ಕೊನೆಗೆ ಪುತ್ರನನ್ನು ಮನೆಯಿಂದ ಹೊರ ಹಾಕಿದ್ದರು. ಇತ್ತ ಐಷರಾಮಿ ಜೀವನ ಪ್ರಭಾವಕ್ಕೊಳಗಾಗಿದ್ದ ಆತ, ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕ್ರೈಂ ಪೆಟ್ರೋಲ್‌’ ಧಾರಾವಾಹಿ ನೋಡಿ ಮಕ್ಕಳ ಅಪಹರಣಕ್ಕೆ ಸಂಚು ರೂಪಿಸಿದ್ದ.

ಕಾಟನ್‌ಪೇಟೆ ಮುಖ್ಯರಸ್ತೆಯ ಖಾಸಗಿ ಶಾಲೆ ಬಳಿ ಹೊಂಚು ಹಾಕಿದ್ದ ಆತ, ಮಂಗಳವಾರ ಮಧ್ಯಾಹ್ನ 3ಕ್ಕೆ ಶಾಲೆ ಮುಗಿಸಿ ಮನೆಗೆ ಹೊರಟ್ಟಿದ್ದ ಎಲೆಕ್ಟ್ರಾನಿಕ್‌ ವ್ಯಾಪಾರಿ ಪುತ್ರ, ನಾಲ್ಕನೇ ತರಗತಿ ವಿದ್ಯಾರ್ಥಿ ಸುಮನ್‌ನನ್ನು (ಹೆಸರು ಬದಲಾಯಿಸಲಾಗಿದೆ) ಅಡ್ಡಗಟ್ಟಿದ್ದಾನೆ. ‘ನನ್ನ ತಮ್ಮ ಕಾಣೆಯಾಗಿದ್ದಾನೆ. ಆತನ ಫೋಟೋ ತೋರಿಸುತ್ತೇನೆ. ನಿನಗೆ ಗೊತ್ತಿದ್ದರೆ ಹೇಳಿ ಸಹಾಯವಾಗುತ್ತದೆ’ ಎಂದಿದ್ದಾನೆ. ಆದ್ರ್ರತೆ ತುಂಬಿದ್ದ ಕಪಟನ ಮಾತಿಗೆ ಮರುಳಾದ ಸುಮನ್‌, ಚಿರಾಗ್‌ ಜೊತೆ ಹೊರಟ್ಟಿದ್ದಾನೆ. ಶಾಲೆಯಿಂದ ಸ್ವಲ್ಪ ದೂರದಲ್ಲಿ ಬಾಲಕನನ್ನು ನಿಲ್ಲಿಸಿಕೊಂಡು ಚಿರಾಗ್‌, ಯಾವುದೋ ಫೋಟೋ ತೋರಿಸಿದ್ದಾನೆ. ಬಳಿಕ ಬೌನ್ಸ್‌ ಸ್ಕೂಟರ್‌ನಲ್ಲಿ ಬಾಲಕನನ್ನು ಬಲವಂತವಾಗಿ ಕೂರಿಸಿಕೊಂಡು ಹೊರಟಿದ್ದಾನೆ.

ನಂತರ ಕಬ್ಬನ್‌ ಪಾರ್ಕ್ ಸುತ್ತಾಡಿಸಿ ಆತ, ಕೊನೆಗೆ ಲ್ಯಾವೆಲ್ಲಿ ರಸ್ತೆಯ ಹೋಟೆಲ್‌ಗೆ ತೆರಳಿದ್ದಾನೆ. ಅಲ್ಲಿ ಬಾಲಕನಿಂದ ಆತನ ತಂದೆ ಮೊಬೈಲ್‌ ನಂಬರ್‌ ಪಡೆದು ಕರೆ ಮಾಡಿದ ಆರೋಪಿ, ‘ನಿನ್ನ ಮಗನನ್ನು ಅಪಹರಿಸಿದ್ದೇನೆ. ನನಗೆ .5 ಲಕ್ಷ ನೀಡಿದರೆ ಬಿಡುಗಡೆಗೊಳಿಸುತ್ತೇನೆ’ ಎಂದಿದ್ದ. ಈ ಕರೆಯಿಂದ ಭಯಗೊಂಡ ಬಾಲಕನ ತಂದೆ, ತಕ್ಷಣವೇ ಕಾಟನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು, ಮೊಬೈಲ್‌ ಕರೆ ಆಧರಿಸಿ ಲೋಕೇಷನ್‌ ಪತ್ತೆ ಹಚ್ಚಿದ್ದಾರೆ. ಅಷ್ಟರಲ್ಲಿ ಮತ್ತೆ ಬಾಲಕನ ತಂದೆ ಕರೆ ಮಾಡಿದ ಚಿರಾಗ್‌, ‘ಇನ್ನೊಂದು ತಾಸಿನೊಳಗೆ ಹಣ ಸಿದ್ಧ ಮಾಡಿರು. ನಾನೇ ಹೇಳಿದ ಜಾಗಕ್ಕೆ ಬರಬೇಕು. ಪೊಲೀಸರಿಗೆ ಹೇಳಿದರೆ ನಿನ್ನ ಮಗನಿಗೆ ವಿಷ ಕುಡಿಸುವೆ. ನಿನ್ನ ಮಗಳಿಗೆ ಆ್ಯಸಿಡ್‌ ಹಾಕುವೆ’ ಎಂದು ಬೆದರಿಸಿದ್ದ. ಅಷ್ಟರಲ್ಲಿ ಮೊಬೈಲ್‌ ಕರೆ ಆಧರಿಸಿ ಯುಬಿ ಸಿಟಿ ಬಳಿಗೆ ತನಿಖಾ ತಂಡ ತೆರಳಿತ್ತು.

ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮೈ, ಕೈ ಮುಟ್ಟೋ ಮುಖ್ಯ ಶಿಕ್ಷಕ, ಸೆಲ್ಫೀ ತೆಗೆದು ಅಪ್ಲೋಡ್...

ಲ್ಯಾವೆಲ್ಲಿ ರಸ್ತೆಯಲ್ಲಿ ಪೊಲೀಸರಿಗೆ ಅಲ್ಲಿನ ಹೋಟೆಲ್‌ ಹೊರಗೆ ಅಳುತ್ತ ನಿಂತಿದ್ದ ಸುಮನ್‌ ಕಂಡಿದ್ದಾನೆ. ಕೂಡಲೇ ಫೋಟೋದಿಂದ ಆತನ ಗುರುತು ಪತ್ತೆಹಚ್ಚಿದ ಪೊಲೀಸರು, ಬಾಲಕನನ್ನು ರಕ್ಷಿಸಿದ್ದಾರೆ. ಆಗ ನಿನ್ನ ಕರೆ ತಂದ ಆಂಕಲ್‌ ಎಲ್ಲಿ ಎಂದಿದ್ದಾರೆ. ಬಾಲಕನ ಮಾತನಾಡಿಸುವ ವೇಳೆಗೆ ಆರೋಪಿ ಸಹ ಹೋಟೆಲ್‌ನಿಂದ ಹೊರ ಬಂದಿದ್ದಾನೆ. ಪೊಲೀಸರನ್ನು ನೋಡಿದ ಆತ ಕಾಲಿಗೆ ಬುದ್ಧಿ ಹೇಳಿದ್ದಾನೆ. ಕೂಡಲೇ ಚುರುಕಾದ ಪೊಲೀಸರು, ಕೆಲ ದೂರ ಬೆನ್ನಹತ್ತಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

15 ದಿನಗಳ ತಯಾರಿ

ಮನೆಯಿಂದ ತಂದೆ ಹೊರ ಹಾಕಿದ ಬಳಿಕ ಚಿರಾಗ್‌, ಹಣಕ್ಕಾಗಿ ಮಕ್ಕಳ ಅಪಹರಣಕ್ಕೆ ಸಂಚು ರೂಪಿಸಿದ್ದ. ಇದಕ್ಕಾಗಿ ತಾನೇ ಓದಿದ್ದ ಕಾಟನ್‌ಪೇಟೆ ಮುಖ್ಯರಸ್ತೆಯ ಬಳಿಗೆ ಬಂದ ಆತ, ಹದಿನೈದು ದಿನಗಳಿಂದ ಅಪಹರಣಕ್ಕೆ ಹೊಂಚು ಹಾಕಿದ್ದ. ಆತನ ಸಂಚು ಮಂಗಳವಾರ ಕಾರ್ಯರೂಪಕ್ಕೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿನಿಮಾ ಶೂಟಿಂಗ್‌ ಎಂದು ತಿಳಿದಿದ್ದ ಜನ:

ಯುಬಿ ಸಿಟಿ ಸಮೀಪ ಚಿರಾಗ್‌ ಬಂಧನವನ್ನು ಪೊಲೀಸರು ಯಾವುದೋ ಸಿನಿಮಾ ಶೂಟಿಂಗ್‌ ಎಂದೂ ಭಾವಿಸಿದ್ದರಂತೆ. ಯುಬಿ ಸಿಟಿ ಸಮೀಪ ಹೋಟೆಲ್‌ನಿಂದ ಹೊರ ಬಂದ ಚಿರಾಗ್‌, ತನ್ನ ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ. ಆಗ ಆತನನ್ನು ಸಬ್‌ ಇನ್‌ಸ್ಪೆಕ್ಟರ್‌ ಮೂರ್ತಿ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ ಚೇಸ್‌ ಮಾಡಿದ್ದಾರೆ. ಈ ವೇಳೆ ಪೊಲೀಸರು, ಸಿನಿಮಾ ಶೂಟಿಂಗ್‌ ನಡೆದಿದೆ ಎಂದು ಚಪ್ಪಾಳೆ ತಟ್ಟುತ್ತ ಬೆರಗಾಗಿ ನೋಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.