ಆಂಜನೇಯ ದೇವಸ್ಥಾನಕ್ಕೆ ಬಂದ ದಲಿತರಿಗೆ ₹2.5 ಲಕ್ಷ ದಂಡ ಹಾಕಿದ ಗ್ರಾಮಸ್ಥರು; ಎಲ್ಲಿದೆ ಸರ್ಕಾರ, ಎಲ್ಲಿದೆ ಸಂವಿಧಾನ?
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ದಲಿತರು ದೇವಸ್ಥಾನದ ಆವರಣ ಪ್ರವೇಶಿಸಿದ್ದಕ್ಕೆ ಸವರ್ಣೀಯರು ₹2.5 ಲಕ್ಷ ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು (ಡಿ.19): ನಮ್ಮ ದೇಶದಲ್ಲಿ ಸಂವಿಧಾನವನ್ನು ಜಾರಿಗೊಳಿಸಿ ಇದೀಗ 75 ವರ್ಷಗಳಾಗುತ್ತಾ ಬಂದಿದೆ. ಆದರೂ, ಅಸ್ಪೃಶ್ಯತೆ, ಕೀಳಿರಿಮೆ, ಜಾತೀಯತೆ ಆಚರಣೆ ಮಾತ್ರ ನಿಂತಿಲ್ಲ. ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಪ್ರವೇಶ ಮಾಡಿದ್ದಕ್ಕೆ ಗ್ರಾಮದ ಸವರ್ಣೀಯರು ದಲಿತ ಕುಟುಂಬಕ್ಕೆ ಬರೋಬ್ಬರಿ 2.5 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಲಿತರು ದೇವಸ್ಥಾನದ ಕಾಂಪೌಂಡ್ ಒಳ ಹೋಗಿದ್ದಕ್ಕೆ ದಂಡ ವಿಧಿಸಿದ್ದಾರೆ. ಈ ದಲಿತ ಬಡ ಕುಟುಂಬಕ್ಕೆ ಗ್ರಾಮದ ಸವರ್ಣೀಯರು ಬರೋಬ್ಬರಿ 2.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈವರೆಗೆ ಈ ಗ್ರಾಮಕ್ಕೆ ಸರ್ಕಾರದ ಯಾವುದೇ ಪ್ರತಿನಿಧಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮುಂದಾಗಿಲ್ಲ.
ಇನ್ನು ದಲಿತರು ದೇವಾಲಯದ ಕಾಂಪೌಂಡ್ ಒಳಗೆ ಪ್ರವೇಶ ಮಾಡಿದ್ದಾರೆಂದು ದೇವಸ್ಥಾನದಲ್ಲಿ ಪೂಜೆ ನಿಲ್ಲಿಸಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇನ್ನು ದೇವಸ್ಥಾನದಲ್ಲಿ ಪೂಜೆ ನಡೆಯಬೇಕೆಂದರೆ ಗರ್ಭಗುಡಿ-ಕಾಂಪೌಂಡ್ ಶುದ್ಧಿಕರಿಸಬೇಕು. ಇದಕ್ಕಾಗಿ ಲಕ್ಷಾಂತರ ರೂ. ಹಣ ಬೇಕಾಗುತ್ತದೆ. ಆದ್ದರಿಂದ ದೇವಾಲಯದ ಕಾಂಪೌಂಡ್ ಒಳಗೆ ಪ್ರವೇಶ ಮಾಡಿದ ದಲಿತರಿಂದ 2.5 ಲಕ್ಷ ರೂ. ದಂಡ ಪಾವತಿಸಿದಲ್ಲಿ ಅವರ ಹಣದಿಂದ ಶುದ್ಧೀಕರಣ ಮಾಡಿ ದೇವಸ್ಥಾನದಲ್ಲಿ ಪೂಜೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಜೊತೆಗೆ, ನೀವು ದಲಿತರು ದೇವಸ್ಥಾನದ ಶುದ್ಧೀಕರಣಕ್ಕೆ 2.5 ಲಕ್ಷ ರೂ. ಹಣ ನೀಡಿ ನಂತರ ದೇವಾಲಯದ ಕಾಂಪೌಂಡ್ ಹೊರನಿಂತು ಪೂಜೆ ಮಾಡಿಸಿಕೊಳ್ಳಿ ಎಂದು ಸವರ್ಣೀಯರು ಆಂಜನೇಯನ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ. ಒಟ್ಟು 160 ಕುಟುಂಬಗಳಿರೋ ಬಿ.ಕೋಡಿ ಹಳ್ಳಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ ಎಂದು ಮಂಜಪ್ಪ ಎಂಬುವವರು ಕಡೂರು ತಾಲೂಕಿನ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಸಾರಂಗಿ ಮಾತ್ರವಲ್ಲ ಸಂಸದ ಮುಖೇಶ್ ರಜಪೂತ್‌ಗೂ ಗಾಯ, 'ಇದು ಸಂಸತ್ತು, ಕುಸ್ತಿ ವೇದಿಕೆಯಲ್ಲ..' ಎಂದ ಬಿಜೆಪಿ!
ಸಮಾನತೆಯೇ ಬಂದಿಲ್ಲ ಮೀಸಲಾತಿ ತೆಗೆಯುವುದೇಗೆ?
ನಮ್ಮ ದೇಶದಲ್ಲಿ ಸಮಾನತೆ ತರಬೇಕೆಂದು ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೆಲವು ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಿದರು. ದೇಶದ ಜನರಲ್ಲಿ ಸಮಾನತೆ, ಜಾತ್ಯಾತೀತತೆ, ಅಸ್ಪೃಶ್ಯತೆ, ಕೀಳರಿಮೆ ಹೋದ ಕೆಲವು ವರ್ಷಗಳ ತರುವಾಯ ಮೀಸಲಾತಿ ತೆರವುಗೊಳಿಸುವುದಕ್ಕೂ ಅವಕಾಶ ನೀಡಿದ್ದರು. ಆದರೆ, ಇನ್ನೂ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ ಎಲ್ಲವೂ ಉಳಿದುಕೊಂಡಿವೆ. ಸಮಾನತೆಯನ್ನು ಸಾಧಿಸಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ತಮ್ಮ ರಾಜಕಾರಣಕ್ಕಾಗಿ ಜಾತಿಗಳ ನಡುವೆ ಜಾತಿಗಳನ್ನು, ಧರ್ಮಗಳ ನಡುವೆ ಅಂತರ ಇರುವಂತೆ ವಿಷ ಬೀಜ ಬಿತ್ತುತ್ತಾ ಬಂದಿವೆ. ಇದರ ಪರಿಣಾಮವಾಗಿ ಇನ್ನೂ ಅಸ್ಪೃಶ್ಯತೆ, ಜಾತೀಯತೆ ಆಚರಣೆ ಜೀವಂತವಾಗಿ ಉಳಿದುಕೊಂಡಿದೆ. ಅಂಬೇಡ್ಕರ್ ಅವರು ಹೇಳಿದಂತೆ ಮೀಸಲಾತಿ ತೆಗೆಯಬೇಕಿದ್ದ ಸರ್ಕಾರ ಇನ್ನೂ ಸಮಾನತೆಯನ್ನು ಸಾಧಿಸಲು ಶ್ರಮಿಸದೇ ಜಾತಿ, ಜಾತಿಗಳಿಗೆ, ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುತ್ತಿದ್ದಾರೆ. ಇದೀಗ ದಲಿತರಿಗೆ ದಂಡ ವಿಧಿಸುತ್ತಿರುವ ಸವರ್ಣೀಯರೇ ಮೀಸಲಾತಿಗೆ ಆಗ್ರಹಿಸಿ ಉಗ್ರ ಹೋರಾಟವನ್ನೂ ಮಾಡುತ್ತಿದ್ದಾರೆ.