ಚಿಕ್ಕಮಗಳೂರು(ಆ.16): ಕಡೂರು ಪ್ರವಾಹಪೀಡಿತ ನೆರೆ ಸಂತ್ರಸ್ತರಿಗೆ ತಾಲೂಕಿನ ಜಿ.ಯರದಕೆರೆ ಗ್ರಾಮಸ್ಥರಿಂದ 7 ಸಾವಿರ ಚಪಾತಿ ಮತ್ತಿತರ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯಕ್ಕೆ ಶಾಸಕ ಬೆಳ್ಳಿ ಪ್ರಕಾಶ್‌ ಗುರುವಾರ ಚಾಲನೆ ನೀಡಿದರು.

ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಿಂದ ಹಾನಿಗೀಡಾಗಿ ಸಂತ್ರಸ್ತರಾಗಿರುವ ನಿರಾಶ್ರಿತರಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ತಾಲೂಕಿನ ಜಿ.ಯರದಕೆರೆ ಗ್ರಾಮಸ್ಥರು ಪ್ರತಿ ಮನೆಗಳಿಂದ ಚಪಾತಿ ತಯಾರಿಸಿದ್ದಾರೆ. ಚಪಾತಿ ಹಾಗೂ ಕೆಂಪು ಚಟ್ನಿಯನ್ನು ಸಂತ್ರಸ್ತರ ಹಸಿವು ನೀಗಿಸುವ ಕಾರ್ಯಕ್ಕೆ ಸಾಗಿಸಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್‌ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಬೆಳ್ಳಿ ಪ್ರಕಾಶ್‌, ತಹಸೀಲ್ದಾರ್‌ ಉಮೇಶ್‌, ಜಿ.ಪಂ ಸದಸ್ಯ ಮಹೇಶ್‌ ಒಡೆಯರ್‌ ಸಮ್ಮುಖದಲ್ಲಿ ಆಹಾರ ತುಂಬಿದ ವಾಹನಕ್ಕೆ ಚಾಲನೆ ನೀಡುವ ಮೂಲಕ ಬೆಳಗಾವಿಗೆ ಗ್ರಾಮದ ಯುವಕರ ತಂಡವು ಕೊಂಡೊಯ್ಯುವ ಕಾರ್ಯ ಮಾಡಲಾಯಿತು.

ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

ಜಿ.ಯರದಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳೂ ಸೇರಿ ಚಪಾತಿಯನ್ನು ತಯಾರಿಸಿದರ ಬಗ್ಗೆ ಶಾಸಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಚಪಾತಿಯ ಜೊತೆಗೆ 4 ಕಿಂಟ್ವಲ್‌ ಅಕ್ಕಿ, ಹತ್ತು ಚೀಲ ಮಂಡಕ್ಕಿ, ಕುಡಿಯುವ ನೀರಿನ ಬಾಟಲ್‌ಗಳು ಹಾಗೂ ಚಾಪೆ ಮುಂತಾದ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಅನೂಪ್‌ ಪಾಟೀಲ್‌ ಮಾಹಿತಿ ನೀಡಿದರು.

ಮಗುವಿನೊಂದಿಗೆ ಮನೆ ಮಂದಿ ರಕ್ಷಿಸಿದ ಗಟ್ಟಿಗಿತ್ತಿ!

ತಹಸೀಲ್ದಾರ್‌ ಉಮೇಶ್‌, ತಾ.ಪಂ. ಇಒ ದೇವರಾಜ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಯರದಕೆರೆ ರಾಜಪ್ಪ, ಗ್ರಾಮದ ಯುವಕರಾದ ಸತೀಶ್‌, ರಂಗನಾಥ್‌, ಗಿರೀಶ್‌, ರಂಗನಾಥ್‌, ದೇವರಾಜ್‌, ಕೃಷ್ಣಮೂರ್ತಿ, ಲೋಹಿತ್‌ ಮತ್ತಿತರರು ಇದ್ದರು.