Chikkamagaluru: ಶೋಕಿಲಾಲ ಅಧ್ಯಕ್ಷ: ಖಾಸಗಿ ವಾಹನಕ್ಕೆ ಸರ್ಕಾರಿ ನಾಮಫಲಕ
ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇಮ್ ಬೋರ್ಡ್‌ಗೆ ಸರ್ಕಾರದ ಅಧಿಕೃತ ಲಾಂಛನವನ್ನೂ ಬಳಸಿರುವುದು ಈಗ ಕ್ಯಾಮರಾ ಕಣ್ಣಿಗೆ ಬಿದ್ದು ವೈರಲ್ ಆಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.08): ‘ಜಿ’ ಸೀರೀಸ್ ಹೊಂದಿರುವ ಸರ್ಕಾರದ ವಾಹನಗಳನ್ನು (Government Vehicle) ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೂ ನೇಮ್ ಬೋರ್ಡ್ (Nameplate) ಹಾಕಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ (High Court) ಆದೇಶವಿದ್ಧರೂ ಈ ರೀತಿ ನೇಮ್ ಬೋರ್ಡ್ ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಇಲ್ಲೋರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇಮ್ ಬೋರ್ಡ್‌ಗೆ ಸರ್ಕಾರದ ಅಧಿಕೃತ ಲಾಂಛನವನ್ನೂ ಬಳಸಿರುವುದು ಈಗ ಕ್ಯಾಮರಾ ಕಣ್ಣಿಗೆ ಬಿದ್ದು ವೈರಲ್ (Viral) ಆಗಿದೆ.
ಹೈಕೋರ್ಟ್ ಆದೇಶ ಉಲ್ಲಂಘಟನೆ ಮಾಡಿ ನಾಮ ಫಲಕ: ಸರ್ಕಾರದ ಲೋಗೋ (Government Logo) ಬಳಸಿ ಪ್ರವಾಸಕ್ಕೆಂದು ಸ್ನೇಹಿತರ ಜೊತೆ ಅಧ್ಯಕ್ಷರೊಬ್ಬರು ಇರುವ ಕಾರಿನಲ್ಲಿ ಬಂದಿರುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದಲ್ಲಿ ಬೆಳಕಿಗೆ ಬಂದಿದೆ. ಹುಣಸೂರು ತಾಲೂಕಿನ ಹಳೇಬೀಡು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹೆಚ್ ಆರ್ ಮಹೇಶ್ (HR Mahesh) ತಮ್ಮ ಕಾರಿಗೆ (KA-09-MF-8976) ‘ಗ್ರಾಮ ಪಂಚಾಯಿತಿ ಅಧ್ಯಕ್ಷರು - ಹಳೇಬೀಡು, ಹುಣಸೂರು ತಾಲೂಕು’ ಎಂದು ಸರ್ಕಾರದ ಅಧಿಕೃತ ಲೋಗೋ ಜೊತೆಗೆ ಬರೆಸಿಕೊಂಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಬೇರಾವುದೇ ವಾಹನಗಳಿಗೂ ಈ ರೀತಿಯ ಸರ್ಕಾರದ ಚಿಹ್ನೆಗಳನ್ನು ಬಳಸುವಂತಿಲ್ಲ. ಈ ರೀತಿ ಫಲಕ ಹಾಕಿಕೊಂಡು ಸ್ನೇಹಿತರ ಜೊತೆಯಲ್ಲಿ ರೆಸಾರ್ಟ್, ಹೋಂ ಸ್ಟೇಗಳಲ್ಲಿ ತಮ್ಮ ಖಾಸಗಿ ಜೀವನ ಎಂಜಾಯ್ ಮಾಡುತ್ತಿರುವ ಇಂತವರ ವಿರುದ್ಧ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಕೆಲ ಸ್ವಯಂ ಘೋಷಿತ ಕನ್ನಡ ಸಂಘಟನೆಗಳ ಮುಖಂಡರಿಗೆ /ರಾಜಕೀಯ ಪುಡಾರಿಗಳಿಗೆ ಈ ಚಾಳಿ ಇದ್ದು ಜಿಲ್ಲೆಯಲ್ಲಿ ಇಂಥ ಅನೇಕ ವಾಹನಗಳು ಸಂಚರಿಸುತ್ತಿದ್ದರೂ ಇಲಾಖೆ ಮೌನವಾಗಿದೆ.
Chikkamagaluru: ಅಂಧ ಮಕ್ಕಳ ಆಶಾಕಿರಣ ಪಾಠ ಶಾಲೆಗೆ ಮತ್ತೊಂದು ಪ್ರಶಸ್ತಿ: ರಾಧಾಗೆ ಏಕಲವ್ಯ ಪ್ರಶಸ್ತಿ
ಹೈಕೋರ್ಟ್ ಆದೇಶವೇನು?: ‘ಜಿ’ ಅಕ್ಷರದೊಂದಿಗೆ ವಿಶೇಷವಾಗಿ (ಗವರ್ನ್ಮೆಂಟ್) ನೋಂದಣಿ ಮಾಡಿದ ಸರ್ಕಾರದ ವಾಹನಗಳು ಹೊರತುಪಡಿಸಿ, ಸರ್ಕಾರದ ಅಧೀನ ಸಂಸ್ಥೆಗಳು/ಏಜೆನ್ಸಿಗಳು ಇತರೆ ಕೆಲ ಶಾಸನಬದ್ಧ ಸಂಸ್ಥೆಗಳ ವಾಹನಗಳ ನಂಬರ್ ಪ್ಲೇಟ್ ಮೇಲೆ ರಾಜ್ಯ ಸರ್ಕಾರದ ಲಾಂಛನ, ಹುದ್ದೆ ಮತ್ತು ಕರ್ನಾಟಕ ಸರ್ಕಾರ ಅಥವಾ ಗವರ್ನ್ಮೆಂಟ್ ಆಫ್ ಕರ್ನಾಟಕ ಎಂಬ ಪದ ಬಳಕೆ ಮಾಡಬಾರದು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದರೂ ಪೊಲೀಸರು ಮತ್ತು ಸಾರಿಗೆ ಇಲಾಖೆ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರಾದ ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.