29 ವರ್ಷ ಇತಿಹಾಸವುಳ್ಳ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ ಬಸ್ ಸ್ಥಗಿತ!

ಸಹಕಾರ ಸಾರಿಗೆ ಮಾರ್ಗದಲ್ಲಿ ಸರ್ಕಾರಿ ಬಸ್‌ ಸೇವೆ ಪ್ರಾರಂಭ| ನಿನ್ನೆಯಿಂದಲೇ ಕೊಪ್ಪದಿಂದ 6 ಕೆಎಸ್ಸಾರ್ಟಿಸಿ ಬಸ್‌| ಉಡುಪಿ, ಶಿವಮೊಗ್ಗದಿಂದಲೂ ಬಸ್‌ ಬಿಡಲು ಸೂಚನೆ

Chikkamagaluru Cooperative Transport Bus Service Stops Due To Economic Crisis

ಚಿಕ್ಕಮಗಳೂರು[ಫೆ.18]: ಮಲೆನಾಡು ಭಾಗದ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಬಸ್‌ಗಳು ಸಂಚಾರ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಈ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡುತ್ತಿವೆ. ಕೊಪ್ಪದಿಂದ ಭಾನುವಾರದಿಂದಲೇ 6 ಸರ್ಕಾರಿ ಬಸ್‌ಗಳು ಸಂಚಾರ ಆರಂಭಿಸಿದ್ದು, ಸೋಮವಾರವೂ ಮುಂದುವರಿದಿದೆ. ಇದೇವೇಳೆ ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳಿಂದಲೂ ಬಸ್‌ಗಳನ್ನು ಬಿಡುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ ಸೂಚನೆ ನೀಡಿದ್ದಾರೆ.

ಈ ಭಾಗದ ಖಾಸಗಿ ಬಸ್‌ ಮಾಲೀಕರು ಆರ್ಥಿಕ ಸಂಕಷ್ಟದಿಂದ 1991ರಲ್ಲಿ ಬಸ್‌ಸೇವೆ ನಿಲ್ಲಿಸುವ ತೀರ್ಮಾನಕ್ಕೆ ಬಂದಾಗ ಕಾರ್ಮಿಕರೇ ಸೇರಿ ಬಸ್‌ ಸಂಸ್ಥೆಯನ್ನು ಸಹಕಾರಿ ಮಾದಿರಿಯಲ್ಲಿ ನಡೆಸಿಕೊಂಡು ಬಂದರು. 1991ರಲ್ಲಿ ಇದ್ದ ಬಸ್ಸುಗಳ ಸಂಖ್ಯೆ 6 ಮಾತ್ರ. ಇದೀಗ 70ಕ್ಕೆ ಏರಿವೆ. ಮಲೆನಾಡಿನ ಕಠಿಣವಾದ ಕಿರಿದಾದ ರಸ್ತೆಗಳು, ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸಲು ಸಾಧ್ಯವಿಲ್ಲದ ಹಲವೆಡೆ ಸಹಕಾರಿ ಸಾರಿಗೆ ಬಸ್‌ಗಳು ಓಡಾಡುತ್ತಿದ್ದವು. ಕಳೆದ ನಾಲ್ಕು ವರ್ಷಗಳಿಂದ ಈ ಸಂಸ್ಥೆಗೆ ಆರ್ಥಿಕ ಸಂಕಷ್ಟಪೆಟ್ಟು ನೀಡುತ್ತಾ ಬಂದಿತು. ಇದರಿಂದ ಚೇತರಿಸಿಕೊಳ್ಳಲಾರದಷ್ಟು ಪರಿಸ್ಥಿತಿ ದಿನೇ ದಿನೇ ಕೈ ಮೀರಿ ಹೋಯಿತು.

ದಿನದಿಂದ ದಿನಕ್ಕೆ ಏರುತ್ತಿರುವ ಡೀಸಲ್‌ ದರ, ನೌಕರರ ವೇತನ, ನಿರ್ವಹಣಾ ವೆಚ್ಚವನ್ನು ಭರಿಸಲು ಸಂಸ್ಥೆಯನ್ನು ನಡೆಸಿಕೊಂಡು ಹೋಗಲು ಕಷ್ಟವಾಗತೊಡಗಿದ್ದರಿಂದ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಸಂಸ್ಥೆ ಮನವಿ ಮಾಡಿತ್ತು. ಆದರೆ, ಸಹಾಯಕ್ಕೆ ಬರದೆ ಇದ್ದರಿಂದ ಭಾನುವಾರದಿಂದ ಬಸ್‌ ಸಂಚಾರವನ್ನು ಕೈಬಿಡಲಾಗಿದೆ.

Latest Videos
Follow Us:
Download App:
  • android
  • ios