Chikkamagaluru ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ
ನಕ್ಸಲ್ ಪೀಡಿತ ಪ್ರದೇಶದ ಪೊಲೀಸ್ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ. ಇಲ್ಲಿದೆ ಟೆನಿಸ್, ಟೆಟಲ್ ಕಾಕ್ ಕೋರ್ಟ್, ಪಾರ್ಕ್. ಇದು ಮಾದರಿ ಪೊಲೀಸ್ ಠಾಣೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.12): ಒಂದು ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಪೊಲೀಸ್ ಠಾಣೆ ನಕ್ಸಲ್ ಪೀಡಿತ ಪ್ರದೇಶದ ಸ್ಟೇಷನ್. ಹಾಗಾಗಿ, ಸಿಬ್ಬಂದಿಗಳು ವರ್ಗಾವಣೆಯಾಗಲು ಹಿಂದೇಟು ಹಾಕುತ್ತಿದ್ದರು. ಇದೀಗ ಪೊಲೀಸರೇ ಇದೀಗ ನಾ ಮುಂದು, ತಾ ಮುಂದು ಅಂತ ಆ ಠಾಣೆಯನ್ನೇ ಬಯಸುತ್ತಿದ್ದಾರೆ. ಇದಕ್ಕೆ ಕಾರಣ ಬಾಳೂರು ಪೊಲೀಸ್ ಠಾಣೆಯ ಪಿ ಎಸ್ ಐ ಪವನ್ ಮಾಡಿರುವ ಕೆಲಸದಿಂದ ಇಡೀ ಪೊಲೀಸ್ ಠಾಣೆಯ ವಾತಾರವಣೆ ಬದಲಾಗಿ ಹೊಸ ರೂಪವನ್ನು ನೀಡಿದ್ದಾರೆ. ಇದು ಪೊಲೀಸ್ ಠಾಣೆಯಾ ಎಂಬಂತೆ ಆಶ್ಚರ್ಯ ಹುಟ್ಟಿಸುವ ಮಟ್ಟಿಗೆ ಹೈಟೆಕ್ ರೂಪ ಕೊಟ್ಟು ಮಾದರಿ ಪೊಲೀಸ್ ಠಾಣೆನ್ನಾಗಿ ಮಾಡಿದ್ದಾರೆ.
ದೂರು ನೀಡಲು ಬಂದ ದೂರುದಾರರಿಗೆ ವಿಶ್ರಾಂತಿ ಪಡೆಯಲು ಮಿನಿ ಪಾರ್ಕ್:
ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಥಟ್ ಅಂತ ನೆನಪಾಗೋದೆ ದಟ್ಟ ಕಾಡು ,ಮುಗಿಲೆತ್ತರದ ಬೆಟ್ಟಗುಡ್ಡಗಳು. ಅರಣ್ಯವನ್ನು ನಾಚಿಸುವಂತಹ ಕಾಫಿ ತೋಟಗಳು. ಅಪ್ಪಟ ಮಲೆನಾಡ. ಸದಾ ತಣ್ಣನೆಯ ಗಾಳಿ. ಮಳೆಗಾಲದಲ್ಲಿ ಮಲೆನಾಡ ಬದುಕು ನಿಜಕ್ಕೂ ಸಾಹಸ. ಅಲ್ಲಿನ ಪೊಲೀಸ್ ಠಾಣೆಗೆ ಸಿಬ್ಬಂದಿಗಳು ವರ್ಗಾವಣೆ ಆಗೋಕೂ ಪೊಲೀಸರು ಹಿಂದೇಟು ಹಾಕ್ತಿದ್ರು. ಯಾಕಂದ್ರೆ, ಒಂದು ಕಾಲದಲ್ಲಿ ಇದು ನಕ್ಸಲ್ ಪೀಡಿತ ಪ್ರದೇಶದ ಠಾಣೆ ಕೂಡ.
ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ, ಟಿಕೆಟ್ ದರ ಮಾಹಿತಿ ಇಲ್ಲಿದೆ
ಆದರೆ, ಈಗ. ಆ ಸ್ಟೇಷನ್ ಫುಲ್ ಲಕ-ಲಕ ಅಂತಿದೆ. ಇದಕ್ಕೆಲ್ಲಾ ಕಾರಣ ಪಿ.ಎಸ್.ಐ. ಪವನ್. ದಾನಿಗಳು ಹಾಗೂ ಸಿಬ್ಬಂದಿಗಳ ನೆರವಿನಿಂದ ಈಗ ಠಾಣೆಗೆ ಹೈಟೆಕ್ ಲುಕ್ ಸಿಕ್ಕಿದೆ. ದೂರು ನೀಡಲು ಬಂದ ದೂರುದಾರರಿಗೆ ವಿಶ್ರಾಂತಿ ಪಡೆಯಲು ಮಿನಿ ಪಾರ್ಕ್. ಠಾಣೆಯ ಒಳಾಂಗಣಕ್ಕೆ ಹೈಟೆಕ್ ಸ್ಪರ್ಶದ ಜೊತೆ ಸಕಲ ವ್ಯವಸ್ಥೆ ಕಲ್ಪಿಸಿದ್ದಾರೆ. ಬಾಳೂರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಠಾಣಾ ವ್ಯಾಪ್ತಿಯ ಜನರಿಗೆ ಠಾಣೆಯ ಮೇಲಿದ್ದ ಭಯದ ಕಲ್ಪನೆಯನ್ನು ದೂರ ಮಾಡಿ ಮೆಚ್ಚುಗೆ ಕಾರಣವಾಗಿದೆ. ಪೊಲೀಸರ ಈ ಜನಸ್ನೇಹಿ ಪೊಲೀಸ್ ಠಾಣೆ ಕನಸಿಗೆ ಸ್ಥಳೀಯರು ಕೈಜೋಡಿಸಿದ್ದರಿಂದ ನಕ್ಸಲ್ ಪೀಡಿತ ಪ್ರದೇಶದ ಪೊಲೀಸ್ ಠಾಣೆಗೆ ಹೈಟೆಕ್ ಸ್ಪರ್ಶ ಸಿಕ್ಕಿದೆ.
ಎಸ್.ಪಿ.ಉಮಾ ಪ್ರಶಾಂತ್ ಎರಡು ಠಾಣೆಯ ಪಿ.ಎಸ್.ಐ.ಗಳ ಕೆಲಸಕ್ಕೆ ಮೆಚ್ಚುಗೆ:
ಇಷ್ಟೇ ಅಲ್ಲ. ಸಿಬ್ಬಂದಿಗಳು ವಿಶ್ರಾಂತಿಯ ವೇಳೆ ಆಟವಾಡಲು ಟೆನಿಸ್ ಹಾಗೂ ಶೆಟಲ್ ಕಾಕ್ ಕೋರ್ಟ್, ಸುಂದರ ಪಾರ್ಕ್, ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪಡೆದಿರುವುದು ಠಾಣೆಯ ವಿಶೇಷ. ಬಾಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪವನ್ ಕುಮಾರ್ ವಿವಿಧ ದಾನಿಗಳಿಂದ ನೆರವು ಪಡೆದು ಸಹ ಸಿಬ್ಬಂದಿಗಳ ನೆರವನಿಂದ ಠಾಣೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಆಕರ್ಷಣೀಯ ಕೇಂದ್ರ ಬಿಂದುವಾಗಿಸಿದ್ದಾರೆ. ಪಿ.ಎಸ್.ಐ ಪವನ್ ಕುಮಾರ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಉಚಿತ ಬಸ್ ಸೇವೆಗೆ ಭರ್ಜರಿ ರೆಸ್ಪಾನ್ಸ್, 10ಸಾವಿರಕ್ಕೂ ಅಧಿಕ ಮಹಿಳೆಯರ ಪ್ರಯಾಣ
ಇತ್ತೀಚಿಗೆ ಮಲ್ಲಂದೂರು ಪೊಲೀಸ್ ಠಾಣೆಗೂ ಕೂಡ ಅಲ್ಲಿನ ಪಿಎಸ್ಐ ರವೀಶ್ ಇದೇ ರೀತಿ ಹೈಟೆಕ್ ಸ್ಪರ್ಶ ನೀಡಿದರು. ಎಸ್.ಪಿ.ಉಮಾ ಪ್ರಶಾಂತ್ ಎರಡು ಠಾಣೆಯ ಪಿ.ಎಸ್.ಐ.ಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಾರೆ ಬಾಳೂರು ಪೊಲೀಸ್ ಠಾಣೆ ಅಂದ್ರೆ ವರ್ಗಾವಣೆಯಾಗಲು ಮಾರುದ್ದ ದೂರ ಸರಿಯುತ್ತಿದ್ದ ಸಿಬ್ಬಂದಿಗಳು ಠಾಣೆಗೆ ಬರಲು ಮನಸ್ಸು ಮಾಡುತ್ತಿದ್ದಾರೆ. ಠಾಣೆಯ ಪರಿಸರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಜನರು ಹಾಗೂ ದೂರದ ಊರುಗಳ ಜನರಿಂದಲೂ ಮೆಚ್ಚುಗೆ ಪಡೆದಿರುವ ಈ ಪೊಲೀಸ್ ಠಾಣೆ ಇದೀಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.