Chikkaballaura : ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಶಾಶ್ವತ ನೀರು
ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಬಯಲು ಸೀಮೆ ಜಿಲ್ಲೆಗಳಿಗೆ ಸಮಗ್ರವಾದ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಜೆಡಿಎಸ್ ಬದ್ದವಾಗಿದ್ದು ರಾಜ್ಯದ ಜನತೆ ಈ ಬಾರಿ ಜೆಡಿಎಸ್‌ಗೆ ಪೂರ್ಣ ಬಹುಮತದ ಸರ್ಕಾರ ರಚನೆಗೆ ಅರ್ಶೀವಾದ ನೀಡಬೇಕೆಂದು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಹೇಳಿದರು.
ಚಿಕ್ಕಬಳ್ಳಾಪುರ : ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಬಯಲು ಸೀಮೆ ಜಿಲ್ಲೆಗಳಿಗೆ ಸಮಗ್ರವಾದ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಜೆಡಿಎಸ್ ಬದ್ದವಾಗಿದ್ದು ರಾಜ್ಯದ ಜನತೆ ಈ ಬಾರಿ ಜೆಡಿಎಸ್‌ಗೆ ಪೂರ್ಣ ಬಹುಮತದ ಸರ್ಕಾರ ರಚನೆಗೆ ಅರ್ಶೀವಾದ ನೀಡಬೇಕೆಂದು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಹೇಳಿದರು.
ಕ್ಷೇತ್ರದ ಮಂಡಿಕಲ್ಲು ಹೋಬಳಿಯಲ್ಲಿ ಬುಧವಾರ ಮನೆ ಮನೆಗೂ ಚುನಾವಣಾ ಪ್ರಚಾರ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ರಾಜ್ಯದಲ್ಲಿರುವ ಬಿಜೆಪಿ ಭ್ರಷ್ಟಾಚಾರ ಜನತಾ ಪಕ್ಷವಾಗಿ ಮಾರ್ಪಟ್ಟಿದೆಯೆಂದು ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ಮೀತಿ ಮಿರಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲಾಗುವುದು. ಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆಗೆ ವೇಗ ನೀಡಲಾಗುವುದು. ಪ್ರೀತಿ ವಿಶ್ವಾಸದಿಂದ ಜನರನ್ನು ಗೆಲ್ಲಬಹುದು ಆದರೆ ಬೆದರಿಕೆಯಿಂದ ಅಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ನಮ್ಮ ಜತೆಯಲ್ಲಿ ಬಂದ ಇಬ್ಬರನ್ನು ಅಜ್ಜವಾರದಲ್ಲಿ ಪೊಲೀಸರು ಬೆದರಿಸಿದ್ದಾರೆ ಎಂದರು.
ಇಡೀ ಜಿಲ್ಲಾಡಳಿತ ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ. ಚುನಾವಣೆಯನ್ನು ನಿಷ್ಷಪಕ್ಷವಾಗಿ ನಡೆಯುವುದು ಅನುಮಾನ. ಬಿಜೆಪಿಯು ಸಮುದಾಯಗಳನ್ನು ಒಡೆದು ಆಳ್ವಿಕೆ ನಡೆಸುತ್ತಿದೆ. ಕ್ಷೇತ್ರದಲ್ಲಿ ಸಂಚರಿಸಿದಾಗ ನೈಜ ಚಿತ್ರಣ ಕಣ್ಣ ಮುಂದೆ ಬಂದಿದೆ. ಚಿಕ್ಕಬಳ್ಳಾಪುರ ಕ್ಷೇತ್ರ ಬಹಳ ವೇಗವಾಗಿ ಅಭಿವೃದ್ಧಿಯಾಗಿದೆ ಎನ್ನುವ ಭಾವನೆ ಇತ್ತು. ಆದರೆ ಅಡ್ಡಗಲ್‌ನಿಂದ ಭೋಗಪರ್ತಿಗೆ ಹೋಗುವ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬಚ್ಚೇನಹಳ್ಳಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಈ ಹಿಂದೆ ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆಯೇ ಇಲ್ಲ. ದೊಡ್ಡಹಳ್ಳಿಯಲ್ಲಿ ಒಂದೂವರೆ ತಿಂಗಳಿನಿಂದ ನೀರಿಲ್ಲ. ಕೆರೆ ನೀರನ್ನು ತಂದು ಕುಡಿಯುತ್ತಿದ್ದಾರೆ ಎಂದರು.
ವೈದ್ಯಕೀಯ ಶಿಕ್ಷಣ ಕಾಲೇಜಿನಿಂದ ಇಡೀ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ. ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಇಲ್ಲಿಗೆ ಕಲಿಯಲು ಬರುತ್ತಾರೆ. ಈ ಕಾಲೇಜನ್ನು ಚಿಕ್ಕಬಳ್ಳಾಪುರ ನಗರದ ಸಮೀಪದಲ್ಲಿ ನಿರ್ಮಿಸಿದ್ದರೆ ಜನರಿಗೆ ಚಿಕಿತ್ಸೆಗೆ ಅನುಕೂಲ ಆಗುತ್ತಿತ್ತು. ಆದರೆ ಈಗ ಇಷ್ಟುದೂರ ಬರುವುದರ ಬದಲು ಬೆಂಗಳೂರಿಗೆ ಹೋಗುತ್ತಾರೆ ಎಂದರು.
ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್, ಅಖಿಲ್‌ರೆಡ್ಡಿ, ಮಂಜು, ಕೃಷ್ಣಾರೆಡ್ಡಿ, ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.
ವಿವಾದಲ್ಲಿರುವ ಜಮೀನು ನೀಡಿದ್ದೀರಿ..!
ತಾಲೂಕಿನಲ್ಲಿ ಬೆಟ್ಟಗಳು ಕರಗುತ್ತಿವೆ. ಅಭಿವೃದ್ಧಿ ಆಗುತ್ತಿಲ್ಲ. ಆರೋಗ್ಯ ಸಚಿವರಿಗೆ ಸ್ವಂತ ಹೋಬಳಿಯ ಜನರ ಆರೋಗ್ಯವನ್ನೂ ಕಾಪಾಡಲು ಆಗುತ್ತಿಲ್ಲ. ಸ್ಟೌ, ಕುಕ್ಕರ್ ನೀಡುವ ಮೂಲಕ ಮಹಿಳೆಯರನ್ನು ಯಾಮಾರಿಸುವ ಕೆಲಸ ಮಾಡಬೇಡಿ. ಕೈವಾರ ತಾತಯ್ಯ ಜಯಂತಿಯ ದಿನ ಬಲಿಜ ಸಮುದಾಯಕ್ಕೆ ನೀಡಿರುವ ಜಮೀನಿನ ವಿವಾದ ನ್ಯಾಯಾಲಯದಲ್ಲಿ ಇದೆ. ಮಂಡಿಕಲ್ ಹೋಬಳಿ ಸಚಿವರ ಸ್ವಂತ ಹೋಬಳಿ. ಆದರೆ ಇಲ್ಲಿ ನನ್ನ ಆಡಳಿತದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಹೊರತಾಗಿ ಯಾವುದೇ ಕೆಲಸಗಳು ಆಗಿಲ್ಲ. ಇವರು ಕೊಡುಗೆಗಳನ್ನು ನೀಡಿ ಮತ ಕೇಳುತ್ತಿಲ್ಲ. ಸೀರೆ, ಪಂಚೆ, ಕುಕ್ಕರ್, ಸ್ಟೌವಿತರಿಸುವ ಮೂಲಕ ಮತ ಕೇಳುತ್ತಿದ್ದಾರೆ ಎಂದು ಕೆ.ಪಿ.ಬಚ್ಚೇಗೌಡ ಟೀಕಿಸಿದರು.