ನಿಗದಿಯಾಗಿದ್ದ ಹಲವು ದಿನಾಂಕಗಳನ್ನ ಮುಂದೂಡಿ ಅಂತೂ ಇಂತೂ ಹಾವೇರಿಯಲ್ಲಿ 2023 ಜನವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮುಹೂರ್ತ ನಿಗದಿಯಾದರೂ ಜಿಲ್ಲೆಯ ಅಕ್ಷರ ಜಾತ್ರೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ.

 ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ನ.08): ನಿಗದಿಯಾಗಿದ್ದ ಹಲವು ದಿನಾಂಕಗಳನ್ನ ಮುಂದೂಡಿ ಅಂತೂ ಇಂತೂ ಹಾವೇರಿಯಲ್ಲಿ 2023 ಜನವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮುಹೂರ್ತ ನಿಗದಿಯಾದರೂ ಜಿಲ್ಲೆಯ ಅಕ್ಷರ ಜಾತ್ರೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ.

ಜಿಲ್ಲಾ ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ 2021ರ ಫೆಬ್ರವರಿ ತಿಂಗಳಲ್ಲಿ ನಡೆದಿತ್ತು. ಸಮ್ಮೇಳನ ಆಗಿ ಈಗ ಎರಡು ವರ್ಷ ಸಮೀಪಿಸುತ್ತಿದೆ. ಆದರೂ ಜಿಲ್ಲಾ ಕಸಾಪ ಮಾತ್ರ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಮೌನ ವಹಿಸಿರುವುದು ಜಿಲ್ಲೆಯ ಸಾರ್ವಜನಿಕ (Public) ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಸಮ್ಮೇಳನಕ್ಕೆ ಲಕ್ಷಾಂತರ ರು.ಗಳ ಅನುದಾನ

ಪ್ರತಿ ವರ್ಷ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ (Kannada) ಸಾಹಿತ್ಯ ಸಮ್ಮೇಳಗಳನ್ನು ನಿಯಮವಾಗಿ ನಡೆಸಬೇಕು. ಇದಕ್ಕಾಗಿಯೆ ಕಸಾಪ ಕೇಂದ್ರ ಕಚೇರಿಯಿಂದ ಜಿಲ್ಲಾ ಹಾಗೂ ತಾಲೂಕು ಕಸಾಪ ಘಟಕಗಳಿಗೆ ಸಮ್ಮೇಳನದ ಖರ್ಚು, ವೆಚ್ಚಗಳಿಗೆ ಲಕ್ಷಾಂತರ ಅನುದಾನ ನೀಡುತ್ತದೆ. ಆದರೆ ಕೋವಿಡ್‌ ತಗ್ಗಿ ವರ್ಷ ಕಳೆದರೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಇನ್ನೂ ಕೂಡಿ ಬಂದಿಲ್ಲ.

ಜಿಲ್ಲಾ ಕಸಾಪ ನಿರಾಸಕ್ತಿ:

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆದು ಈ ನವೆಂಬರ್‌ 21ಕ್ಕೆ ಸರಿಯಾಗಿ ವರ್ಷ ತುಂಬುತ್ತದೆ. ಹೊಸ ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ. ಜಿಲ್ಲಾ ಕಸಾಪ ವಿವಿಧ ಕಾರ್ಯಕ್ರಮಗಳನ್ನು ಸಕ್ರಿಯಾಗಿ ನಡೆಸುತ್ತಿವೆಯಾದರೂ ಕನ್ನಡ ನಾಡು, ನುಡಿ, ಭಾಷೆ, ಕಲೆ, ಸಂಸ್ಕೃತಿಯನ್ನು ಬಿಂಬಿಸಲು ಪೂರಕವಾಗಿ ನಡೆಸಬೇಕಾದ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಬಗ್ಗೆ ಹೆಚ್ಚು ಆಸಕ್ತಿ ತೋರದಿರುವುದು ಎದ್ದು ಕಾಣುತ್ತಿದೆ. ಇದರ ಪರಿಣಾಮ ಸತತ ಎರಡು ವರ್ಷಗಳಿಂದ ತಾಲೂಕು ಮಟ್ಟದ ನಡೆಯಬೇಕಾದ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೂಡ ಆಯೋಜನೆಗೊಳ್ಳದೇ ನೆನಗುದಿಗೆ ಬಿದ್ದಂತಾಗಿದೆ.

8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಸರಿ ಸುಮಾರು ಎರಡು ವರ್ಷ ಸಮೀಪಿಸುತ್ತಿದೆ. ಕಳೆದ 2021ರ ಫೆಬ್ರವರಿ 27, 28 ರಂದು ಎರಡು ದಿನಗಳ ಕಾಲ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿಯು ಜಿಲ್ಲಾಡಳಿತ ಭವನದಲ್ಲಿಯೆ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ರವರ ಸರ್ವಾಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಸಮ್ಮೇಳನ ನಡೆದು 2022 ಫೆಬ್ರವರಿಗೆ ವರ್ಷ ಮುಗಿದಿದೆ.

9ನೇ ಸಮ್ಮೇಳನ ಯಾವಾಗ?

2022ನೇ ವರ್ಷದ ಅಂತ್ಯದಲ್ಲಿ ಇದ್ದರೂ ಜಿಲ್ಲಾ ಕಸಾಪದಿಂದ ಇಲ್ಲಿಯವರೆಗೂ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಬಗ್ಗೆ ಯಾವುದೇ ರೀತಿಯ ಚರ್ಚೆ, ಪೂರ್ವ ತಯಾರಿ ಜೊತೆಗೆ ಸಮ್ಮೇಳನ ನಡೆಸುವ ದಿನಾಂಕ ಕೂಡ ನಿಗದಿಯಾಗಿಲ್ಲ. ಈ ಬಗ್ಗೆ ಜಿಲ್ಲೆಯ ಸಾಹಿತ್ಯಾಸಕ್ತರಲ್ಲಿ ತರಹೇವಾರಿ ಚರ್ಚೆ ನಡೆಯುತ್ತಿದ್ದು ಆದಷ್ಟೇ ಬೇಗ ಜಿಲ್ಲಾ ಕಸಾಪ ಈ ವರ್ಷದಲ್ಲಿಯೆ ಸಮ್ಮೇಳನ ನಡೆಸುವಂತಾಗಲಿ ಎನ್ನುವ ಕೂಗೂ ಕೇಳಿ ಬರುತ್ತಿದೆ.

ಕಸಾಪ ಜಿಲ್ಲಾಧ್ಯಕ್ಷರು ಹೇಳಿದ್ದೇನು?

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್‌ ಕೊನೆ ವಾರ ಅಥವಾ ಜನರಿಗೆ ಮೊದಲ ವಾರದಲ್ಲಿ ನಡೆಸಬೇಕೆಂಬ ಚಿಂತನೆ ಇದೆ. ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿದ ಬಳಿಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸಲಾಗುವುದೆಂದು ಕಸಾಪ ಜಿಲ್ಲಾಧ್ಯಕ್ಷರಾದ ಡಾ.ಕೋಡಿರಂಗಪ್ಪ ಸೋಮವಾರ ಕನ್ನಡಪ್ರಭಗೆ ತಿಳಿಸಿದರು.

ಜಿಲ್ಲಾ ಕಸಾಪ ಅಕ್ಷರ ಜಾತ್ರೆ ಯಾವಾಗ?

ಹಿಂದಿನ ಸಮ್ಮೇಳನ ಮುಗಿದ 2 ವರ್ಷ ಸಮೀಪಿಸಿದರೂ ಸಮ್ಮೇಳನ ನಡೆಸುವ ಬಗ್ಗೆ ಸದ್ದಿಲ್ಲ