ಹುಕ್ಕೇರಿ[ಜ.03]: ಹೊಸ ವರ್ಷದ ಆಚರಣೆಯಲ್ಲಿ ಅಟ್ಟಹಾಸ ಮೆರೆದು ಕುಡಿದು ಕುಪ್ಪಳಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದವರನ್ನು ತಕ್ಷಣವೇ ಒದ್ದು ಜೈಲಿಗೆ ಹಾಕಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಇಂತಹ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ಕೊಟ್ಟಿದ್ದೇ ದೊಡ್ಡ ತಪ್ಪು. ಹೊಸ ವರ್ಷ ಆಚರಣೆ ಕುಡುಕರ ಆಚರಣೆ ಆಗಿದೆ. ಸರ್ಕಾರವೇ ಇಂಥ ಕಾಮುಕರಿಗೆ, ಕುಡುಕರಿಗೆ ಹಾಗೂ ಮಾದಕ ವ್ಯಸನಿಗರಿಗೆ ಅವಕಾಶ ಕೊಟ್ಟು ಈ ರೀತಿ ಗಲಾಟೆ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತಿದೆ. ಇಂತಹ ಆವಾಂತರಗಳಿಗೆ ಸರ್ಕಾರ ನೇರ ಕಾರಣ ಎಂದು ಕಿಡಿಕಾರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮ ದೇಶದಲ್ಲಿ ಹೊಸ ವರ್ಷ ಹಿಂದೂ ಸನಾತನದ ಪ್ರಕಾರ ಯುಗಾದಿ ದಿನ ಜ.1ರಂದು ಹೊಸ ವರ್ಷಾಚರಣೆ ಅವೈಜ್ಞಾನಿಕವಾಗಿದ್ದು, ಹೊಸ ವರ್ಷ ಆಚರಣೆ ಈಗ ಬೂಟಾಟಿಕೆ ಆಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಹೊಸ ವರ್ಷಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ಆಚರಣೆಗೆ ಅವಕಾಶ ಕೊಡಬಾರದು. ಇಂಥ ಕಾರ್ಯಕ್ರಮಗಳು ನಿಂತರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂದು ಅವರು ಹೇಳಿದರು.

ಹೊಸ ವರ್ಷಾಚರಣೆಯನ್ನು ಬೇಕಾದವರು ಅವರವರ ಮನೆಯಲ್ಲಿ ಆಚರಿಸಿಕೊಳ್ಳಬೇಕು. ಈ ರೀತಿ ರಸ್ತೆಗಳ ಮೇಲೆ ಆಚರಣೆ ಮಾಡಲು ಅವಕಾಶ ಕೊಡಬಾರದು. ತಕ್ಷಣವೇ ಇಂತಹ ಕಿಡಿಗೇಡಿಗಳನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.