ಮಳೆಗಾಲ ಆರಂಭವಾಗಿರುವ ಸಮಯದಲ್ಲೇ ಕೋಳಿಮಾಂಸ ಹಾಗೂ ಮೊಟ್ಟೆಯ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

ರಾಂ ಅಜೆಕಾರು

ಕಾರ್ಕಳ (ಜೂ.17) ಮಳೆಗಾಲ ಆರಂಭವಾಗಿರುವ ಸಮಯದಲ್ಲೇ ಕೋಳಿಮಾಂಸ ಹಾಗೂ ಮೊಟ್ಟೆಯ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಬಾಯ್ಲರ್‌ ಕೋಳಿ ಮಾಂಸ ರೀಟೈಲ್‌ ವ್ಯಾಪಾರದಲ್ಲಿ ಕೆಜಿಯೊಂದಕ್ಕೆ 220-240 ರು., ರಖಂ ಕೆಜಿಯೊಂದಕ್ಕೆ 210-230 ರು., ಟೈಸನ್‌ ಕೋಳಿ ಕೆಜಿಯೊಂದಕ್ಕೆ 230-250 ರು., ರಖಂ ಕೆಜಿಯೊಂದಕ್ಕೆ 220-240 ರು. ದರದಲ್ಲಿ ಮಾರಾಟವಾಗುತ್ತಿದೆ. ಇನ್ನು ಕೋಳಿ ಮೊಟ್ಟೆಯೊಂದಕ್ಕೆ 6.50- 7 ರುಪಾಯಿ ವರೆಗೆ ದರವಿದೆ. ಕಳೆದ ವರ್ಷ ಬಾಯ್ಲರ್‌ ಕೋಳಿ ಮಾಂಸ ಬೆಲೆ 160 -180 ರು. ನಡುವೆ ಸ್ಥಿರವಾಗಿತ್ತು. ಟೈಸನ್‌ ಕೋಳಿಮಾಂಸ 190- 200 ರುಪಾಯಿ ಇತ್ತು. 2022ರಲ್ಲಿ ಮೊಟ್ಟೆಒಂದಕ್ಕೆ .5- 5.30 ರುಪಾಯಿ ಇತ್ತು.

ಚಿಕನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟಾನ? ಹಾಗಿದ್ರೆ ಮಾರ್ಕೆಟ್‌ನಿಂದ ಖರೀದಿಸುವಾಗ ಈ ವಿಚಾರ ಗಮನಿಸಿ

ಊರಿನ ಕೋಳಿ ದರ ದುಬಾರಿ: ಮೇ ಕೊನೆ ಹಾಗೂ ಜೂನ್‌ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ತಂಬಿಲ ಸೇರಿದಂತೆ ದೈವದ ಆರಾಧನೆಗೆ ಊರಿನ ಕೋಳಿಗೆ ಬಲು ಬೇಡಿಕೆ ಇರುತ್ತದೆ. ಆದ್ದರಿಂದ ಈ ಊರಿನ ಕೋಳಿಗಳ ಬೆಲೆಯಯ್ಯೂ ಏರಿಕೆ ಯಾಗಿದೆ. ಊರಿನ ಕೋಳಿ ಮಾಂಸ ಕೆಜಿಯೊಂದಕ್ಕೆ 320 -350 ರು., ರಖಂಗಳಲ್ಲಿ 300-310 ರು. ವರೆಗೆ ಮಾರಾಟವಾಗುತ್ತಿದೆ. ಇಡಿ ಕೋಳಿ ಕೆಜಿಯೊಂದಕ್ಕೆ 250- 290 ರುಪಾಯಿ ವರೆಗೆ ಮಾರಾಟವಾಗುತ್ತಿದೆ.

ಕೋಳಿ ಸಾಕಾಣಿಗೂ ನೀರಿನ ಕೊರತೆ: ಈ ಬಾರಿ ಕೋಳಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವೆ ಅಧಿಕ ಉಷ್ಣತೆ. ಕೋಳಿ ಶೆಡ್‌ಗಳಲ್ಲಿ ಈ ಬಾರಿ ನೀರಿನ ಕೊರತೆ ಎದುರಾಗಿದೆ. ಏಪ್ರಿಲ್‌ ಮೇ ಜೂನ್‌ ತಿಂಗಳುಗಳಲ್ಲಿ ಬಾಯ್ಲರ್‌ ಹಾಗು ಟೈಸನ್‌ ಕೋಳಿಗಳ ಶೆಡ್‌ಗಳಲ್ಲಿ ಸಾಮಾನ್ಯ ಉಷ್ಣತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ನೀರು ಪೂರೈಸಬೇಕಾದ ಅನಿವಾರ್ಯತೆ ಇತ್ತು. ಆದರೆ ನೀರಿನ ಕೊರತೆ ಬಹುತೇಕ ಕಡೆಗಳಲ್ಲಿ ಕಾಡಿದ್ದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಪ್ರಸ್ತುತ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಗಳಲ್ಲಿ 315 ಕೋಳಿ ಶೆಡ್‌ಗಳಿವೆ.

ಕೋಳಿ ಆಹಾರ ಬೆಲೆ ಏರಿಕೆ: ಸಾಗಾಟ ವೆಚ್ಚ, ಉತ್ಪಾದನೆ ಕುಂಠಿತ, ಕೋಳಿಗಳಿಗೆ ನೀಡುವ ಆಹಾರದ ಕಚ್ಚಾವಸ್ತುಗಳಾದ ಜೋಳ, ಸೋಯಾ ,ಎಣ್ಣೆಕಾಳು ಬೆಲೆಗಳಲ್ಲಿ ಗಣನೀಯವಾದ ಏರಿಕೆ, ಔಷಧ ಬೆಲೆಗಳು, ಕಾರ್ಮಿಕರ ಕೂಲಿ, ಶೆಡ್‌ಗಳ ನಿರ್ವಹಣಾ ವೆಚ್ಚಗಳು ಏರಿಕೆಯಾಗಿದ್ದ ಕಾರಣ ಬೆಲೆ ಏರಿಕೆಯಾಗುತ್ತಿದೆ.

ಸಂಕುಚಿತ ಮಾರುಕಟ್ಟೆ: 42 ದಿನಗಳ ಕಾಲ ಕೋಳಿ ಮರಿಗಳ ಬೆಳವಣಿಗೆ ಇದ್ದ ಕಾರಣ ಒಂದೂವರೆ ತಿಂಗಳ ಕಾಲ ಮಾರುಕಟ್ಟೆಬದಲಾವಣೆಗಳು ಅಗುತ್ತಿರುತ್ತವೆ. ಬೇಡಿಕೆ ಹೆಚ್ಚಾದಂತೆ ಕೋಳಿಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ವೇಗಗತಿಯಲ್ಲಿ ಸಾಗಿಸಲು ಶೆಡ್‌ಗಳಲ್ಲಿ ಸಾಧ್ಯವಾಗುವುದಿಲ್ಲ. ಕೋಳಿಗಳನ್ನು ಹೆಚ್ಚಾಗಿ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ ಹಾಸನ ಹುಬ್ಬಳ್ಳಿಗಳಿಂದ ಇಲ್ಲಿಗೆ ಪೂರೈಸಲಾಗುತ್ತದೆ. ಪೂರೈಕೆ ಇದ್ದಾಗ ಬೇಡಿಕೆ ಕುಸಿತವಾಗಬಹುದು, ಬೇಡಿಕೆ ಹೆಚ್ಚಿದ್ದಾಗ ಪೂರೈಕೆ ಕುಸಿತವಾಗಬಹುದು. ಅದ್ದರಿಂದ ಮಾರುಕಟ್ಟೆಸಂಕುಚಿತಗೊಳ್ಳಬಹುದು ಎಂದು ಕೋಳಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ಅಧಿಕ ತಾಪಮಾನ, ನೀರಿನ ಅಭಾವವೇ ಕೋಳಿ ಬೆಲೆ ಏರಿಕೆಗೆ ಕಾರಣ. ಕಾರ್ಕಳದ ಹೆಬ್ರಿ ತಾಲೂಕುಗಳಲ್ಲಿ 315 ಫಾರಂಗಳಿದ್ದು ಅದರಲ್ಲಿ ಕಳೆದ ಮೂರು ತಿಂಗಳಲ್ಲಿ ಅರ್ಧದಷ್ಟುಶೆಡ್‌ಗಳಲ್ಲಿ ಕೊಳಿ ಮರಿಗಳನ್ನು ಸಾಕಿಲ್ಲ. ಹಾಗಾಗಿ ಖಾಲಿಬಿದ್ದಿವೆ. ಮಳೆ ಬಂದ ಬಳಿಕ ಕೋಳಿ ಮರಿಗಳ ಸಾಕಾಣೆ ಹೆಚ್ಚಾಗಬಹುದು

- ಶೈಲೇಶ್‌ ಸಾಣೂರು, ಕೋಳಿ ಪೂರೈಕೆದಾರರು

ಕೋಳಿ ಮಾಂಸದ ಬೆಲೆ ದೀಢಿರ್‌ ಏರಿಕೆಯಾಗಿದೆ. ಇದರಿಂದ ಹೋಟೆಲ್‌ಗಳಲ್ಲಿ ಕೋಳಿ ಮಾಂಸ ಖಾದ್ಯಗಳ ಬೆಲೆಯಲ್ಲೂ ಏರಿಕೆಯಾಗಬಹುದು

- ಜಯಾನಂದ ಕುಲಾಲ್‌ ಅಜೆಕಾರು, ಹೋಟೆಲ್‌ ಮಾಲಕರು ಕಾರ್ಕಳ

ಈ ಬಾರಿ ಕೋಳಿ ಮಾಂಸ ಬೆಲೆಗಳ ಏರಿಕೆಗೆ ಅಂಗಡಿ ಬಾಡಿಗೆ, ಸಾಗಾಣಿಕೆ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದೇ ಕಾರಣ

- ನಿತ್ಯಾನಂದ ಸುವರ್ಣ, ಕೋಳಿ ವ್ಯಾಪಾರಸ್ಥರು