ಹುಬ್ಬಳ್ಳಿ[ಜ.15]: ಹಿಂದೆ ರಚನೆಯಾಗಿದ್ದಷ್ಟೇ ವೇಗದಲ್ಲಿ ಸ್ಥಗಿತವಾಗಿದ್ದ ಚೆನ್ನಮ್ಮ ಪಡೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ ಕಮಿಷನರೇಟ್‌ ಮತ್ತೆ ಅಸ್ತಿತ್ವಕ್ಕೆ ತಂದಿದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕ ಚೆನ್ನಮ್ಮನ ಪಡೆ ರಚಿಸಲಾಗಿದೆ. ಜ. 20ರಿಂದ ಈ ಪಡೆಗೆ ಕಮಿಷನರೇಟ್‌ ವತಿಯಿಂದ ತರಬೇತಿ ನೀಡಲಾಗುತ್ತಿದೆ. ಮಹಿಳೆಯರ ರಕ್ಷಣೆಗಾಗಿ ಈ ಪಡೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಕಳೆದ ವರ್ಷವೂ ಇಂತಹದೊಂದು ಚೆನ್ನಮ್ಮ ಪಡೆಯನ್ನು ಅಸ್ತಿತ್ವಕ್ಕೆ ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ನಾಲ್ಕೈದು ಪ್ರಕರಣಗಳನ್ನು ಪತ್ತೆ ಮಾಡಿ ಬೀದಿ ಕಾಮಣ್ಣರಿಗೆ ಬುದ್ಧಿ ಕಲಿಸಿದ್ದ ಪಡೆ ಬಳಿಕ ಶಾಂತವಾಗಿತ್ತು. ರಚನೆಯಾದಷ್ಟೇ ವೇಗದಲ್ಲಿ ಪಡೆಯ ಕೆಲಸ ಸ್ಥಗಿತವಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೀಗ ಮತ್ತೆ ಎರಡು ಪಡೆಗಳನ್ನು ರಚಿಸಲಾಗಿದೆ. ಒಂದು ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸಿದರೆ, ಇನ್ನೊಂದು ಧಾರವಾಡದಲ್ಲಿ ಕಾರ್ಯನಿರ್ವಹಿಸಲಿದೆ. ಇನ್‌ಸ್ಪೆಕ್ಟರ್‌ ಅಶೋಕ ಚವ್ಹಾಣ ಈ ಪಡೆಗಳ ನೇತೃತ್ವ ವಹಿಸಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ವಾಹನದಲ್ಲಿ 1 ಬ್ಯಾಟರಿ, 1 ಡಾರ್ಗನ್‌ ಬ್ಯಾಟರಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಲಾಠಿ, ಪಬ್ಲಿಕ್‌ ಅಡ್ರೇಸಿಂಗ್‌ ಸಿಸ್ಟಂ ವ್ಯವಸ್ಥೆ ಇರುತ್ತದೆ. ಇಬ್ಬರು ಎಎಸ್‌ಐ, ಒಬ್ಬ ಪೇದೆ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿ ಇರಲಿದೆ. ಈ ತಂಡಗಳು ಪಾಳೆಯ ಪ್ರಕಾರ 24/7 ಕಾರ್ಯನಿರ್ವಹಿಸಲಿವೆ.

ಹುಬ್ಬಳ್ಳಿಯಲ್ಲಿಯಲ್ಲಿ ಚೆನ್ನಮ್ಮ ಪಡೆಯು ಬೆಳಗ್ಗೆ ಕಾಡಸಿದ್ದೇಶ್ವರ ಕಾಲೇಜ್‌, ಬಿವಿಬಿ ಕಾಲೇಜ್‌, ತೋಳನಕೇರಿ, ಜೆ.ಜಿ. ಕಾಮರ್ಸ್‌ ಕಾಲೇಜ್‌, ಮಹಿಳಾ ವಿದ್ಯಾಪೀಠದವರೆಗೆ, ಲಾ ಕಾಲೇಜ್‌ನಿಂದ ಎಪಿಎಂಸಿ ವರೆಗೆ, ನೆಹರು ಕಾಲೇಜದಿಂದ ದುರ್ಗದ ಬೈಲ್‌ ವರೆಗೆ, ಮಹಿಳಾ ಕಾಲೇಜ್‌ದಿಂದ ಜೆ.ಸಿ. ನಗರದ ವರೆಗೆ ಮತ್ತು ಆಕ್ಸ್‌ಫರ್ಡ್‌ ಕಾಲೇಜ್‌ದಿಂದ ಕೇಶ್ವಾಪುರದ ಫಾತೀಮಾ ಕಾಲೇಜ್‌ ಕಡೆಗಳಲ್ಲಿ ಸಂಚರಿಸಲಿದೆ. ಮಧ್ಯಾಹ್ನ ನೃಪತುಂಗ ಬೆಟ್ಟದಲ್ಲಿ, ಉಣಕಲ್‌ ಕೆರೆಯ ಗಾರ್ಡನ್‌, ದುರ್ಗದ ಬೈಲ್‌ ಮಾರ್ಕೆಟ್‌, ಶಿವಾಜಿ ಸರ್ಕಲ್‌ ಸಿಬಿಟಿ, ಪ್ರತಿ ಗುರುವಾರ ರಾಜ ನಗರ ಶಿರಡಿ ಮಂದಿರದಲ್ಲಿ, ಸರ್ವೋದಯ ಸರ್ಕಲ್‌ದಿಂದ ರೈಲ್ವೆ ಸ್ಟೇಷನ್‌ ರೋಡ್‌ ಕಡೆಗೆ, ರೈಲ್ವೆ ಸ್ಟೇಷನ್‌ದಿಂದ ಹಳೆ ಬಸ್‌ ನಿಲ್ದಾಣದ ವರೆಗೆ ಪೆಟ್ರೋಲಿಂಗ್‌ ಮಾಡಲಿದೆ.

ಧಾರವಾಡದ ಚೆನ್ನಮ್ಮ ಪಡೆ ಬೆಳಗಿನ ವೇಳೆ ಕಿಟಲ್‌ ಕಾಲೇಜ್‌ ರೋಡ್‌, ಸಂಗಮ್‌ ಥೇಟರ್‌ ರೋಡ್‌, ಶಿವಾಜಿ ಸರ್ಕಲ್‌ದಿಂದ ಹೊಸ ಬಸ್‌ ನಿಲ್ದಾಣದವರೆಗೆ, ಕೆಸಿಡಿ ಕಾಲೇಜ್‌ದಿಂದ ಶ್ರೀನಗರ ಕ್ರಾಸ್‌ವರೆಗೆ, ಎನ್‌ಟಿಟಿಎಫ್‌ದಿಂದ ಜೆಎಸ್‌ಎಸ್‌ ಕಾಲೇಜ್‌ವರೆಗೆ ಹಾಗೂ ಮಧ್ಯಾಹ್ನ ಕೆಸಿಡಿಯಿಂದ ಕೆಸಿ ಪಾರ್ಕ್, ಸಪ್ತಾಪುರ ಭಾವಿ ಕ್ರಾಸ್‌ದಿಂದ ಉದಯ ಹಾಸ್ಟೆಲ್‌, ಡಿಸಿ ಕಾಂಪೌಂಡ್‌ ವರೆಗೆ, ಕೆಲಗೇರಿ ಕೆರೆಯವರೆಗೆ, ಸುಭಾಸನಗರ ಮಾರ್ಕೆಟ್‌ ಹೀಗೆ ವಿವಿಧೆಡೆ ಪೆಟ್ರೋಲಿಂಗ್‌ ಮಾಡಲಿದೆ.

ವಿಶೇಷ ತರಬೇತಿ:

ಜ. 20ರಿಂದ ಈ ತಂಡಕ್ಕೆ ವಿಶೇಷ ತರಬೇತಿ ನೀಡಲಾಗುವುದು. ಆತ್ಮ ವಿಶ್ವಾಸ, ಕರಾಟೆ, ಮಹಿಳೆಯರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು. ರಾತ್ರಿ ವೇಳೆ ಬಸ್‌ ನಿಲ್ದಾಣ, ಸಿಬಿಟಿ, ಕಾಲೇಜು, ಲೇಡಿಸ್‌ ಹಾಸ್ಟೆಲ್‌, ಪಿಜಿ ಹಾಗೂ ಮಹಿಳೆಯರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಚೆನ್ನಮ್ಮ ಪಡೆಯು ನಿಗಾವಹಿಸಲಿದ್ದು, ಮಹಿಳೆಯರಿಗೆ ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಸ್ಥಳಕ್ಕೆ ಧಾವಿಸಲಿದೆ. ಸಮಸ್ಯೆಗೆ ಸಿಲುಕಿರುವ ಮಹಿಳೆಯರು ತುರ್ತು ಸಂದರ್ಭದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಮ್‌ ದೂರವಾಣಿ ಸಂಖ್ಯೆ- 0836-2233555 ಇಲ್ಲಿ ಕರೆ ಮಾಡುವಂತೆ ತಿಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಚೆನ್ನಮ್ಮ ಪಡೆಯನ್ನು ರಚಿಸಲಾಗಿದೆ. ಪಡೆಯಲ್ಲಿನ ಸಿಬ್ಬಂದಿಗೆ ಜ. 20ರಿಂದ ತರಬೇತಿಯನ್ನೂ ನೀಡಲಾಗುವುದು. ಮಹಿಳೆಯರ ರಕ್ಷಣೆ ಉದ್ದೇಶದಿಂದ ಈ ಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.