ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 500 ಮೀಗೆ ಚೆಕ್‌ ಡ್ಯಾಂ: ಎಂ.ಬಿ.ಪಾಟೀಲ

ವಿಜಯಪುರ ಜಿಲ್ಲೆಯಲ್ಲಿ 180 ಹಳ್ಳಗಳಿಗೆ ನೀರು ಹರಿಸಿ, ಪ್ರತಿ 500 ಮೀ ಒಂದರಂತೆ ಚೆಕ್‌ ಡ್ಯಾಂ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ: ಎಂ.ಬಿ.ಪಾಟೀಲ 

Check Dam at 500 Meter After Congress Come to Power in Karnataka Says MB Patil grg

ತಿಕೋಟಾ(ಅ.20): ಜಿಲ್ಲೆಯಲ್ಲಿ 180 ಹಳ್ಳಗಳಿಗೆ ನೀರು ಹರಿಸಿ, ಪ್ರತಿ 500 ಮೀ ಒಂದರಂತೆ ಚೆಕ್‌ ಡ್ಯಾಂ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತ ಸಂಭ್ರಮ ಸಮಾವೇಶದಲ್ಲಿ ಸನ್ಮಾನ, ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಗಳ ಕುರಿತು ಸಮೀಕ್ಷೆ ನಡೆಸಿ, ಡಿಸೆಂಬರ್‌ ಅಥವಾ ಜನವರಿಯಲ್ಲಿ ರೈತರ ಬೃಹತ್‌ ಸಮಾವೇಶ ನಡೆಸಿ ಮಾಹಿತಿ ನೀಡುತ್ತೇವೆ ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ನಮ್ಮವರು, ಬೇರೆಯವರು ಎಂದು ಬೇಧ-ಭಾವ ಮಾಡದೇ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯದವರು ಸೇರಿದಂತೆ 4000 ಕೊಳವೆ ಭಾವಿ ಕೊರೆಯಿಸಿದ್ದೇವೆ. 5 ವರ್ಷದಲ್ಲಿ ರಾಜ್ಯದಲ್ಲಿ ನೀರಾವರಿಗೆ .50 ಸಾವಿರ ಕೋಟಿ ಖರ್ಚು ಮಾಡುವ ಗುರಿ ಇತ್ತು. ಆದರೆ, .58 ಸಾವಿರ ಕೋಟಿ ನೀರಾವರಿಗೆ ವೆಚ್ಚ ಮಾಡಿದ್ದೇವೆ. ರಾಜ್ಯದಲ್ಲಿಯೇ ಹೋಬಳಿಯೊಂದಕ್ಕೆ ಅತ್ಯಧಿಕ .3600 ಕೋಟಿ ವೆಚ್ಚದಲ್ಲಿ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಮೂಲಕ ತಿಕೋಟಾ, ಜಮಖಂಡಿ ಮತ್ತು ಅಥಣಿ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿದ್ದೇವೆ. ಇದರಿಂದ ಒಂದು ಕಾಲದಲ್ಲಿ ಉದ್ಯೋಗವಿಲ್ಲದೆ ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಿದ್ದ ಸಮುದಾಯಗಳು ಈಗ ಜಗಳ ಬಿಟ್ಟು ಕೃಷಿಯಲ್ಲಿ ತೊಡಗಿವೆ. ಈ ವಿಷಯವನ್ನು ಆ ಸಮುದಾಯದವರೇ ನಮಗೆ ಹೇಳಿದ್ದಾರೆ ಎಂದರು.

VIJAYAPURA: ಮಹಾನಗರ ಪಾಲಿಕೆ ಚುನಾವಣೆ ನಡುವೆ ಮಾಟಮಂತ್ರದ ಕಾಟ!

ಈ ಮುಂಚೆ ತಿಕೋಟಾ ತಾಲೂಕಿನ ಎತ್ತರದ ಪ್ರದೇಶಕ್ಕೆ ನೀರಾವರಿ ಯೋಜನೆ ಮೂರ್ಖನ ಕನಸು ಎಂದು ಕೆಲವರು ವ್ಯಂಗ್ಯವಾಡಿದ್ದರು. ಈಗ ಆ ಭಾಗಕ್ಕೆ ನೀರು ಬಂದಿದೆ. ಅಂದು ಮುರ್ಖನ ಕನಸು ಎಂದು ಹೇಳಿದವರೇ ಮೂರ್ಖರಾಗಿದ್ದಾರೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಪರಿಣಾಮ ಕಬ್ಬು ಉತ್ಪಾದನೆ ಪ್ರದೇಶ ಹೆಚ್ಚಾಗಿದ್ದು, ನೆರೆ ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಲಾಭವಾಗಿದೆ. ಕಬ್ಬು ನುರಿಸುವ ಹಂಗಾಮಿನಲ್ಲಿ 2 ತಿಂಗಳು ಹೆಚ್ಚುವರಿಯಾಗಿ ಸಕ್ಕರೆ ಉತ್ಪಾದಿಸಿದ್ದಾರೆ. ಇದನ್ನು ಸಚಿವ ಮುರುಗೇಶ ನಿರಾಣಿ ಮತ್ತು ಶಾಸಕ ಆನಂದ ನ್ಯಾಮಗೌಡ ಸಂತಸದಿಂದ ಹೇಳಿದ್ದಾರೆ. ವಿಜಯಪುರ ಜಿಲ್ಲೆಯನ್ನು ಮಹಾರಾಷ್ಟ್ರದ ಬಾರಾಮತಿಗಿಂತಲೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಎಂ.ಬಿ.ಪಾಟೀಲ ಅವರ ನೀರಾವರಿ ಕೆಲಸವನ್ನು ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಕೊಂಡಾಡಿದ್ದಾರೆ. ಸ್ವಾಮೀಜಿಯವರ ಆಶೀರ್ವಾದ ಅವರ ಮೇಲಿದ್ದು, ಎಂ.ಬಿ.ಪಾಟೀಲರಿಗೆ ಭವಿಷ್ಯದಲ್ಲಿ ಬಾರಿ ಜನಬೆಂಬಲ ಸಿಗಲಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್‌ ತಾಲೂಕಿನ ಸಂಖ ವಿರಕ್ತಮಠದ ಮಹೇಶ ದೇವರು ಮಾತನಾಡಿ, ಎಂ.ಬಿ.ಪಾಟೀಲರು ಕಲ್ಲುಸಕ್ಕರೆಯಂತೆ ಕೆಲಸ ಮಾಡಿದ್ದಾರೆ. ಅವರನ್ನು ನೋಡಿದರೆ ಕೃಷ್ಣಾ ನದಿಯನ್ನು ನೋಡಿದಂತಾಗುತ್ತದೆ ಎಂದು ಶ್ಲಾಘಿಸಿದರು.

ಲೋಹಗಾಂವ ಗ್ರಾಮದ ರೈತ ಗುರುನಾಥ ಯಲಗೊಂಡ ಕೊಣ್ಣೂರ ಹಾಗೂ ಜಾಲಗೇರಿ ಎಸ್‌.ಎಸ್‌.ನಾಡಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಸೋಮನಾಥ ಬಾಗಲಕೋಟ, ಬಸವರಾಜ ದೇಸಾಯಿ ವಿ.ಎಸ್‌.ಪಾಟೀಲ, ಸುಜಾತಾ ಕಳ್ಳಿಮನಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಿದ್ದು ಗೌಡನವರ, ಈರಗೊಂಡ ಬಿರಾದಾರ, ಮುಖಂಡರಾದ ಚನ್ನಪ್ಪ ಕೊಪ್ಪದ, ಸೋಮನಾಥ ಕಳ್ಳಿಮನಿ, ಶ್ರೀಶೈಲಗೌಡ ಪಾಟೀಲ ನೀಡೋಣಿ, ಮಧುಕರ ಜಾಧವ, ರಾಜು ಪವಾರ, ಭಾಗೀರಥಿ ತೇಲಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಟಕ್ಕಳಕಿ ಮತ್ತು ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಶಾಂತ ಜಂಡೆ, ಭಾವುಸಿಂಗ್‌ ಬಡಿಗೇರ ಇದ್ದರು.

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಕತ್ತಿ ಮಸಿಯುತ್ತಿರುವ ಟಿಕೆಟ್ ವಂಚಿತರು..!

ಎಂ.ಬಿ.ಪಾಟೀಲ ಅವರನ್ನು ನಾನಾ ಯೋಜನೆಯ ಫಲಾನುಭವಿಗಳು, ರೈತರು ಮತ್ತು ಟಕ್ಕಳಕಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆದ ಗುತ್ತಿಗೆದಾರ ಶಂಕರ ನಾಯಕ ಅವರನ್ನು ಸನ್ಮಾನಿಸಲಾಯಿತು.

ನಾಗಠಾಣ ಭಾಗದಲ್ಲಿ 16 ಕೆರೆಗಳನ್ನು ತುಂಬಿಸಿದರೆ ಇಡೀ ಜಿಲ್ಲೆಯ ಬಹುತೇಕ ನೀರಾವರಿಯಾಗಲಿದೆ. ಆದರೆ, ಅದಕ್ಕೆ ಕೆಲವರು ಎಂ.ಬಿ.ಪಾಟೀಲರಿಗೆ ಕ್ರೆಡಿಟ್‌ ಸಿಗುತ್ತದೆ ಎಂಬ ಕಾರಣದಿಂದ ಅಡ್ಡಿಪಡಿಸಿದ್ದರು. ಆದರೆ, ಆ ಯೋಜನೆ ಪೂರ್ಣವಾಗುವ ವಿಶ್ವಾಸವಿದೆ. ನಾನು ಸಚಿವನಾಗಿ ಬೇರೆಯವರಂತೆ ಆಸ್ತಿ-ಪಾಸ್ತಿ ಮಾಡುತ್ತ ಆಡಳಿತ ನಡೆಸಲಿಲ್ಲ. ಬದಲಾಗಿ ವಿಜಯಪುರ ಸೇರಿದಂತೆ ಎಲ್ಲಕಡೆ ಸುತ್ತಾಡಿ ನೀರಾವರಿ ಮಾಡಿದ್ದೇನೆ. ಸಿದ್ಧೇಶ್ವರ ಸ್ವಾಮೀಜಿ ನೀಡಿರುವ ನನ್ನನ್ನು ಜಲನಾಯಕ ಎಂದು ಕರೆದಿದ್ದಾರೆ. ಇದು ನನಗೆ ನೊಬೆಲ್‌ ಪಾರಿತೋಷಕಕ್ಕಿಂತ ಹೆಚ್ಚು ಗೌರವ ನೀಡಿದೆ ಅಂತ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios