ದಾವಣಗೆರೆ (ನ.03): ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆ ಮಹಾ ನಗರದ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಸಮಗ್ರವಾಗಿ ಬದಲಾವಣೆ ತರಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದರು.

ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ 5 ರೀತಿಯ ಕ್ಯಾಮೆರಾ ಅಳವಡಿಸುತ್ತಿದ್ದು, ಎಲ್ಲಾ ಕ್ಯಾಮೆರಾಗಳ ನಿಯಂತ್ರಣ ಕಾರ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಮಾಂಡೆಂಟ್‌ ಕಂಟ್ರೋಲ್‌ ಕಚೇರಿಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ದುಬಾರಿ ಫೈನ್ ಕಟ್ಟಗಲಾಗದೇ ಪೊಲೀಸರ ಬಳಿ ಸ್ಕೂಟರ್ ಬಿಟ್ಟು ಹೋದ ಸವಾರ! .

ಎಫ್‌ಟಿವಿಆರ್‌ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್‌ ಪ್ಲೇಟ್‌ಗಳನ್ನು ಗುರುತಿಸಿ, ಅಂತಹವರ ವಿಳಾಸಕ್ಕೆ ಕಳಿಸುವ ಕಾರ್ಯ ಶೀಘ್ರವೇ ಚಾಲನೆಗೊಳ್ಳಲಿದೆ. ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯೂ ಶೀಘ್ರವೇ ಆರಂಭವಾಗಲಿದೆ. ಹೀಗೆ ಜಿಲ್ಲಾ ಕೇಂದ್ರದಲ್ಲಿ ಸಂಚಾರ ವ್ಯವವಸ್ಥೆಯಲ್ಲಿ ಬದಲಾವಣೆಯಾಗಲಿದ್ದು, ಹಂತ ಹಂತವಾಗಿ ಅವುಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

ವಾಹನ ಸಂಚಾರ ವ್ಯವಸ್ಥೆಗೆ ಹೊಸ ಆಯಾಮ ನೀಡಲಾಗುವುದು ಎಂದು ಅವರು ಅಲ್ಲದೇ, ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗ ಮಿತಿಯನ್ನು 40 ಕಿಮೀಗೆ ನಿಗದಿಪಡಿಸಲಾಗುವುದು. ಸಾರ್ವಜನಿಕರು, ವಾಹನ ಚಾಲಕರು, ಸವಾರರು ಸಹ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಪೊಲೀಸ್‌ ಇಲಾಖೆ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಸ್ಪಿ ಸ್ಪಷ್ಟಪಡಿಸಿದರು.