ಶಿವಾನಂದ ಗೊಂಬಿ

ಹುಬ್ಬಳ್ಳಿ[ಜ.15]: ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಬಿಆರ್‌ಟಿಎಸ್‌ ತನ್ನ ವಿನ್ಯಾಸ ಬದಲಿಸಿಕೊಂಡಿದೆ. ಇಲ್ಲಿನ ನವಲೂರು ಬಳಿ ಸೇತುವೆ ಮೇಲೆ ಬಿಆರ್‌ಟಿಎಸ್‌ ಬಸ್‌ ಸಂಚರಿಸುವುದಿಲ್ಲ. ಬದಲಿಗೆ ಕೆಳಗೆಯೇ ಚಲಿಸುತ್ತದೆ. ಬಿಆರ್‌ಟಿಎಸ್‌ಗಾಗಿ ನಿರ್ಮಿಸಿರುವ ಸೇತುವೆ ಮಿಶ್ರ ಪಥವಾಗಿ ಬದಲಾಗಲಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರದ ಮಧ್ಯೆ ತ್ವರಿತ ಸಾರಿಗೆ ಸೇವೆ ಕಲ್ಪಿಸುವ ಉದ್ದೇಶದಿಂದ ಬಿಆರ್‌ಟಿಎಸ್‌ ಕಾರಿಡಾರ್‌ ನಿರ್ಮಿಸಲಾಗಿದೆ. ಬಿಆರ್‌ಟಿಎಸ್‌ಗಾಗಿ ಪ್ರತ್ಯೇಕ ರಸ್ತೆ ನಿರ್ಮಿಸಲಾಗಿದೆ. ಬಿಆರ್‌ಟಿಎಸ್‌ ಪಕ್ಕದಲ್ಲಿನ ರಸ್ತೆಗಳಿಗೆ ಮಿಶ್ರ ಪಥ ಎಂದು ಕರೆಯಲಾಗುತ್ತದೆ. ಇಲ್ಲಿ ಮಾತ್ರ ಬಿಆರ್‌ಟಿಎಸ್‌ ಬಸ್‌ ಹೊರತುಪಡಿಸಿ ಉಳಿದ ವಾಹನಗಳು ಸಂಚರಿಸುತ್ತವೆ.

ಮೇಲ್ಸೇತುವೆಗಳೆಷ್ಟು?:

ಉಣಕಲ್‌-625 ಮೀಟರ್‌, ಉಣಕಲ್‌ ಉದ್ಯಾನವನ-425 ಮೀ., ನವನಗರ-825 ಮೀ., ನವಲೂರು ಬಳಿ ಎರಡು ಮೇಲ್ಸೇತುವೆ-ತಲಾ 1.3 ಕಿಲೋ ಮೀಟರ್‌ ಹೀಗೆ ಒಟ್ಟು 5 ಮೇಲ್ಸೇತುವೆಗಳನ್ನು ಬಿಆರ್‌ಟಿಎಸ್‌ ಬಸ್‌ಗಳಿಗಾಗಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಸೇತುವೆಗಳು ಪೂರ್ಣವಾಗಿದ್ದು, ಬಿಆರ್‌ಟಿಎಸ್‌ ಬಸ್‌ಗಳು ಸಂಚರಿಸುತ್ತಿವೆ. ನವಲೂರು ಬಳಿ ಒಂದು ಸೇತುವೆಯ ಕೆಲಸ ಇನ್ನೂ ಪೂರ್ಣವಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಲ್ಲ ಸೇತುವೆಗಳು ಬಿಆರ್‌ಟಿಎಸ್‌ಗಾಗಿ ಮೀಸಲಾಗಿದ್ದವು. ಅದರಂತೆ ನವಲೂರು ಬಳಿ ನಿರ್ಮಿಸಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಎರಡು ಸೇತುವೆಗಳು ಇಷ್ಟುದಿನ ಬಿಆರ್‌ಟಿಎಸ್‌ ಬಸ್‌ಗಾಗಿಯೇ ಮೀಸಲಾಗಿದ್ದವು. ಆದರೆ, ಇದೀಗ ಬದಲಾಗಿದೆ. ಇಲ್ಲಿನ ಸೇತುವೆ ಮೇಲೆ ಬಿಆರ್‌ಟಿಎಸ್‌ ಬಸ್‌ ಸಂಚರಿಸುವುದಿಲ್ಲ. ಬದಲಿಗೆ ಕೆಳಗೆ ಅಂದರೆ ಮಿಶ್ರಪಥದ ರಸ್ತೆ ಮೇಲೆ ಬಿಆರ್‌ಟಿಎಸ್‌ ಬಸ್‌ಗಳು ಸಂಚರಿಸುತ್ತವೆ. ಇಲ್ಲಿ ನಿರ್ಮಿಸಿದ ಸೇತುವೆ ಮಿಶ್ರಪಥಗಳಾಗಿ ಉಳಿದ ವಾಹನಗಳ ಸಂಚಾರಕ್ಕೆ ಬಳಕೆಯಾಗಲಿವೆ.

ಏಕೀ ಬದಲಾವಣೆ:

ಬಿಆರ್‌ಟಿಎಸ್‌ ನೀಲಿನಕ್ಷೆ ಪ್ರಕಾರ ಇಲ್ಲಿಯೂ ಸೇತುವೆ ಮೇಲೆ ನಿಲ್ದಾಣ ಮಾಡಿ ಸಂಚರಿಸಬೇಕಿತ್ತು. ಆದರೆ, ಇದಕ್ಕೆ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ಬಿಆರ್‌ಟಿಎಸ್‌ ಬಸ್‌ ಸೇತುವೆ ಮೇಲೆ ಸಂಚರಿಸಿದರೆ, ಸೇತುವೆ ಮೇಲೆಯೇ ನಿಲ್ದಾಣ ಮಾಡಿದರೆ ನಾಗರಿಕರಿಗೆ ತೊಂದರೆಯಾಗುತ್ತೆ. ಆದ ಕಾರಣ ನಮಗೆ ಕೆಳಗೆಯೇ ಬಸ್‌ ನಿಲ್ದಾಣ ಬೇಕು. ಜೊತೆಗೆ ಕೆಳಗೆಯೇ ಬಿಆರ್‌ಟಿಎಸ್‌ ಸಂಚರಿಸುವಂತಾಗಬೇಕು. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಮಿಶ್ರ ಪಥವನ್ನುಬೇಕಾದರೆ ಸೇತುವೆ ಮೇಲೆ ಮಾಡುವಂತೆ ಆಗ್ರಹಿಸಿದ್ದಾರೆ.

ಮನ್ನಣೆ:

ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ನೀಡಿರುವ ಬಿಆರ್‌ಟಿಎಸ್‌, ಬಸ್‌ ಸಂಚಾರ ಆರಂಭಿಸಿ ಒಂದೂವರೆ ವರ್ಷದ ಬಳಿಕ ಇದೀಗ ನವಲೂರು ಬಳಿ ತನ್ನ ವಿನ್ಯಾಸವನ್ನೇ ಬದಲಿಸಿಕೊಳ್ಳಲು ನಿರ್ಧರಿಸಿದೆ. ಇಲ್ಲಿ ಬಿಆರ್‌ಟಿಎಸ್‌ ಬಸ್‌ಗಾಗಿ ನಿರ್ಮಿಸಿರುವ ಕಾರಿಡಾರ್‌ನ್ನು ಮಿಶ್ರಪಥಕ್ಕೆ ಬಿಟ್ಟುಕೊಡಲು ಒಪ್ಪಿ, ಕೆಳಗೆ ಸಂಚರಿಸಲಿದೆ. ಜತೆಗೆ ನಿಲ್ದಾಣವನ್ನು ಕೆಳಗೆ ನಿರ್ಮಿಸಲು ನಿರ್ಧರಿಸಿದೆ. ಇದಕ್ಕಾಗಿ . 6.50 ಕೋಟಿ ಹೆಚ್ಚುವರಿ ವೆಚ್ಚ ಮಾಡಲು ನಿರ್ಧರಿಸಿದೆ. ಆದರೆ, ಈ ಎಲ್ಲ ಕೆಲಸಗಳಿಗೆ ಕೆಲ ದಿನ ಬೇಕಾಗಬಹುದು. ಮೊದಲಿಗೆ ಸೇತುವೆ ನಿರ್ಮಾಣ ಕೆಲಸ ಪೂರ್ಣಗೊಳಿಸಿ ನವಲೂರು ಗ್ರಾಮದ ವಿಠ್ಠಲ ಮಂದಿರದ ಬಳಿ ನಿಲ್ದಾಣ ನಿರ್ಮಾಣ ಮಾಡಲಿದೆ. ಬಳಿಕ ಕೆಳಗೆ ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ನವಲೂರು ಗ್ರಾಮಸ್ಥರ ಬೇಡಿಕೆಗೆ ಅಧಿಕಾರಿ ವರ್ಗ ಮನ್ನಣೆ ನೀಡಿದ್ದಕ್ಕೆ ಗ್ರಾಮಸ್ಥರು ಫುಲ್‌ ಖುಷ್‌ ಆಗಿರುವುದಂತೂ ಸತ್ಯ.

ನವಲೂರು ಗ್ರಾಮಸ್ಥರು ತಮ್ಮ ಊರಿಗೆ ಅನುಕೂಲವಾಗುವಂತೆ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ಕೆಳಗೆ ನಿರ್ಮಿಸಬೇಕು. ಕೆಳಗೆ ಬಸ್‌ಗಳು ಸಂಚರಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿ ನವಲೂರಲ್ಲಿ ಮಾತ್ರ ಕೆಳಗೆ ಬಸ್‌ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ಬಿಆರ್‌ಟಿಎಸ್‌ಗಾಗಿ ನಿರ್ಮಿಸಿರುವ ಎರಡು ಸೇತುವೆಗಳು ಮಿಶ್ರಪಥಗಳಾಗಿ ಬದಲಾಗಲಿವೆ ಎಂದು ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ  ರಾಜೇಂದ್ರ ಚೋಳನ್‌ ಅವರು ತಿಳಿಸಿದ್ದಾರೆ. 

ನಮಗೆ ಸೇತುವೆ ಮೇಲೆ ನಿಲ್ದಾಣ ಮಾಡಿದರೆ ಮಹಿಳೆಯರು, ವೃದ್ಧರಿಗೆ ಅನಾನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಳಗೆ ನಿಲ್ದಾಣ ಮಾಡುವಂತೆ ಕೇಳಿಕೊಂಡಿದ್ದೆವು. ಇದಕ್ಕೆ ಅಧಿಕಾರಿ ವರ್ಗ ಸ್ಪಂದಿಸಿದೆ. ಇದು ಸಂತಸಕರ ಎಂದು ಗ್ರಾಮಸ್ಥ ರಾಮಪ್ಪ ಹೇಳಿದ್ದಾರೆ.