ಅಪರ ಜಿಲ್ಲಾಧಿಕಾರಿ ಸಹಿ ಫೋರ್ಜರಿ: ಜಿಲ್ಲಾಡಳಿತಕ್ಕೇ 1 ಕೋಟಿ ರೂ. ಪಂಗನಾಮ ಹಾಕಿದ ಹೊರಗುತ್ತಿಗೆ ನೌಕರ

ವಂಚನೆ ಪ್ರಕರಣ ಬೆನ್ನತ್ತಿದ ಪೊಲೀಸರಿಗೂ ಶಾಕ್!.
ಕೇವಲ 32 ಲಕ್ಷ ರೂ. ವಂಚನೆ ಪ್ರಕರಣ ಎಂದು ದೂರು ದಾಖಲು
ಪೊಲೀಸರ ತನಿಖೆ ವೇಳೆ ಗೊತ್ತಾಗಿದ್ದು ಒಂದು ಕೋಟಿಗೂ ಹೆಚ್ಚು ಹಣ!.

Chamarajanagar DC Office outsourced employee Forgery signature stolen of Rs 1 crore sat

ವರದಿ - ಪುಟ್ಟರಾಜು.ಆರ್. ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಾಮರಾಜನಗರ (ಮಾ.30): ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರ ಎಂಬುದು ಎಲ್ಲ ಕಡೆಯೂ ನುಸುಳಿಬಿಟ್ಟಿದೆ. ಆದ್ರೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ವಿದ್ಯಾವಂತರು ಎನಿಸಿಕೊಂಡ ಅಧಿಕಾರಿಗಳಿಗೆ ಯಾಮಾರಿಸಿ ಹೊರಗುತ್ತಿಗೆ ನೌಕರನೊಬ್ಬ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಹೀಗಾಗಿ ಆಡಳಿತ ಕಚೇರಿಗಳ ಮೇಲೂ ಜನರಿಗೆ ವಿಶ್ವಾಸವಿಲ್ಲದಂತಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ ಅಂತಿರಾ ಈ ಸ್ಟೋರಿ ನೋಡಿ..

ಈ ಫೋಟೋದಲ್ಲಿ ಕಾಣುತ್ತಿರುವವನ ಹೆಸರು ರಾಜೇಶ್. ಚಾಮರಾಜನಗರ ತಾಲೂಕು ದೊಡ್ಡರಾಯಪೇಟೆ ಗ್ರಾಮದ ಈತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೊರಗುತ್ತಿಗೆ ನೌಕರ. ಈ ಮಹಾನುಭಾವ ಗ್ರಾಮೀಣ ರಸಪ್ರಶ್ನೆ ಯೋಜನೆ ಖಾತೆಯಲ್ಲಿನ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ಎಗರಿಸಿ ಚಾಣಾಕ್ಷತೆ ಮೆರೆದಿದ್ದನು. ಆದರೆ, ಈಗ ಪೊಲೀಸರ ಬಲೆಗೆ ಬಿದ್ದು ಕಂಬಿ ಎಣಿಸುತ್ತಿದ್ದಾನೆ. ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಸಹಿಯನ್ನೇ ಫೋರ್ಜರಿ ಮಾಡಿ ತನ್ನ ಗುರಿ ಸಾಧಿಸಿಕೊಂಡಿದ್ದಾನೆ.  ಖಾತೆಯಲ್ಲಿನ 1.20 ಕೋಟಿ  ರೂಪಾಯಿ ಲಪಟಾಯಿಸುವ ಕೃತ್ಯ ಮಾಡಿದ್ದಾನೆ.

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ ಸ್ಥಗಿತ: ರಾಜ್ಯ ಸರ್ಕಾರದಿಂದ ಆದೇಶ

ಹಣಕದ್ದು ಬೆಂಗಳೂರಲ್ಲಿ ಸೆಟಲ್‌ ಆಗಿದ್ದ: ಜಿಲ್ಲಾಡಳಿತದ ಖಾತೆಯಲ್ಲಿದ್ದ ಹಣ ನಾಪತ್ತೆ ಬೆನ್ನಲ್ಲೇ ಪೊಲೀಸ್‌ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್ ಖಾತೆ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಮಾನತು ಮಾಡಿ ಆದೇಶಿಸಿದ್ದರು. ಇನ್ನು ಪ್ರಕರಣ ಹೊರ ಬರುತ್ತಿದ್ದಂತೆ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿ ಬೆಂಗಳೂರಿನಲ್ಲಿ ಹಾಯಾಗಿದ್ದ ರಾಜೇಶ್‌ನನ್ನು ಚಾಮರಾಜನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

ಚೆಕ್‌ ಪುಸ್ತಕದಲ್ಲಿನ ಮಧ್ಯದ ಚೆಕ್‌ ಹರಿದು ಹಣ ಡ್ರಾ: ಈತ ಅಪರ ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದ ಸರ್ಕಾರಿ ಕಚೇರಿ ಕಟ್ಟಡಗಳ ಅನುದಾನ ಸಹ ದುರುಪಯೋಗ ಮಾಡಿದ್ದಾನೆ ಎನ್ನಲಾಗ್ತಿದೆ. ಯಾರಿಗೂ ಗೊತ್ತಾಗದಂತೆ ಪ್ರತಿಸಲ ಚೆಕ್ ಬುಕ್ ನಲ್ಲಿ ಮಧ್ಯದಲ್ಲಿನ ಕೆಲವು ಚೆಕ್‌ಗಳನ್ನು ಕದ್ದು , ತಾನೇ ಅಪರ ಜಿಲ್ಲಾಧಿಕಾರಿಗಳ ಸಹಿ ಪೋರ್ಜರಿ ಮಾಡಿ ಹಣ ಡ್ರಾ ಮಾಡಿದ್ದಾನೆ. ಒಮ್ಮೆ ತನ್ನ ಖಾತೆಗೆ ಹಣ ರವಾನೆ ಮಾಡಿದರೆ, ಕೆಲವೊಮ್ಮೆ ತನ್ನ ಆತ್ಮೀಯರ ಖಾತೆಗೆ ಹಣ ಪಾವತಿಸಿದ್ದಾನೆ. ಇನ್ನು ಜಿಲ್ಲಾಧಿಕಾರಿ ಕಚೇರಿಯಲ್ಲೇ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ತನ್ನ ಗುರಿ ಸಾಧನೆಯ ಅಡ್ಡೆಯನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಬೇಲೂರು ಚನ್ನಕೇಶವ ರಥದ ಮುಂದೆ ಕುರಾನ್ ಪಠಣ ಮಾಡಬೇಕೆಂದು ಹೇಳಿಲ್ಲ!: ಕೈಪಿಡಿಯ ಮಾಹಿತಿ ಹೀಗಿದೆ.!

ಜಿಲ್ಲಾಡಳಿತ ಸಿಬ್ಬಂದಿ ಗಮನಕ್ಕೆ ಬಂದಿಲ್ಲ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬ ಹೊರ ಗುತ್ತಿಗೆ  ಡಿ ಗ್ರೂಪ್‌ ನೌಕರ ಕೋಟಿ ಕುಳವಾಗಿ ಎಲ್ಲರನ್ನು ಯಾಮಾರಿಸಿರುವುದು ಪೊಲೀಸರಿಗೂ ಆಶ್ಚರ್ಯ ಹುಟ್ಟಿಸಿದೆ. ಇಷ್ಟೆಲ್ಲ ಹಣ ಲೂಟಿ ಮಾಡುತ್ತಿದ್ದರು  ಕಛೇರಿಯಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇವನ ಮೇಲೆ ಅನುಮಾನ ಬಾರದಿರುವುದು ವಿರ್ಪಯಾಸವೆ ಸರಿ. ಈಗ ಕೋಟ್ಯಂತರ ರೂ. ಕದ್ದು ಏನೂ ಮಾಡಿಯೇ ಇಲ್ಲವೆಂಬಂತೆ ಬೆಂಗಳೂರಿಗೆ ಬಂದು ಹಾಯಾಗಿ ಸೆಟಲ್‌ ಆಗಿದ್ದ ಆರೋಪಿಗೆ ಇನ್ನುಮುಂದೆ ಜೈಲು ಕಾಯಂ ವಾಸಸ್ಥಾನವಾಗಲಿದೆ. 

ಒಟ್ಟಿನಲ್ಲಿ ಈ ಪ್ರಕರಣ ಗಮನಿಸಿದ್ರೆ ಕೇವಲ ಒಬ್ಬನಿಂದ ಈ ಕೆಲಸ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತೆ. ಪ್ರತಿ ವರ್ಷ ಆಡಿಟ್ ನಡೆದರೂ ಕಳೆದ ಮೂರು ವರ್ಷದಿಂದ ಈ ಬಗ್ಗೆ ಗೊತ್ತಾಗದೆ ಇರುವುದರಿಂದ ಇದಕ್ಕೆ ಇನ್ನು ಸಾಕಷ್ಟು ಜನರ ಕುಮ್ಮಕ್ಕು ಇದೆ ಎಂಬ ಸಂಶಯ ಕಾಡ್ತಿದ್ದು, ಕಸ್ಟಡಿಯಲ್ಲಿರುವ ರಾಜೇಶನೇ ಉತ್ತರ ಹೇಳಬೇಕಿದೆ.

Latest Videos
Follow Us:
Download App:
  • android
  • ios