ಸಿರಿಧಾನ್ಯಗಳಲ್ಲಿ ಆರೋಗ್ಯದ ಸಿರಿಯೇ ಇದೆ
ಸಿರಿಧಾನ್ಯಗಳಲ್ಲಿ ಆರೋಗ್ಯದ ಸಿರಿಯೇ ಇದೆ. ಅವುಗಳ ಹೆಚ್ಚು ಬಳಕೆಯಿಂದ ಹಲವು ರೋಗಗಳಿಂದ ದೂರ ಇರಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಮೈಸೂರು : ಸಿರಿಧಾನ್ಯಗಳಲ್ಲಿ ಆರೋಗ್ಯದ ಸಿರಿಯೇ ಇದೆ. ಅವುಗಳ ಹೆಚ್ಚು ಬಳಕೆಯಿಂದ ಹಲವು ರೋಗಗಳಿಂದ ದೂರ ಇರಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಉತ್ಪಾದಕರ ಮಾರುಕಟ್ಟೆದಾರರ ಕಾರ್ಯಾಗಾರ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಸಿರಿಧಾನ್ಯ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸಿರಿಧಾನ್ಯಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಉತ್ತಮ ಬೆಲೆಯೂ ಸಿಗುತ್ತಿದೆ. ರೈತರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಒಂದು ಕಾಲಕ್ಕೆ ಬಡವರ ಆಹಾರವಾಗಿದ್ದ ಸಿರಿಧಾನ್ಯವು, ಈಗ ಶ್ರೀಮಂತರ ಆಹಾರವಾಗಿದೆ ಎಂದರು.
ಕೃಷಿಯು ಲಾಭದಾಯಕ ಎಂಬುದನ್ನು ಮನವರಿಕೆ ಮಾಡಲು ಪ್ರಗತಿ ಪರ ರೈತರಿಂದ ಮಾಹಿತಿ ಕೊಡಿಸಲಾಗುತ್ತಿದೆ. ವ್ಯವಸ್ಥಿತವಾಗಿ ಕೃಷಿ ಮಾಡಿದರೆ ಲಾಭ ಗಳಿಸಬಹುದು. ಕೃಷಿಯನ್ನು ಖುಷಿಯಿಂದ ಮಾಡಬೇಕು ಎಂದು ಅವರು ಹೇಳಿದರು.
ಈ ವೇಳೆ ಸಿರಿ ಧಾನ್ಯಗಳ ಮಾಹಿತಿಯನ್ನು ಒಳಗೊಂಡ ಕೈಪಿಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪ ಮೇಯರ್ ಡಾ.ಜಿ. ರೂಪಾ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮೊದಲಾದವರು ಇದ್ದರು.
ಸಿರಿಧಾನ್ಯದ ಆರೋಗ್ಯ ವೈಭವ ಅನಾವರಣ
ವಸ್ತು ಪ್ರದರ್ಶನದ ಪಿ. ಕಾಳಿಂಗರಾವ್ ಗಾನ ಮಂಟಪ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಉತ್ಪಾದಕರ ಮಾರುಕಟ್ಟೆದಾರರ ಕಾರ್ಯಗಾರ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದಲ್ಲಿ ಯಶಸ್ವಿ ಕೃಷಿಕರೊಂದಿಗೆ ರೈತರ ಅನುಸಂಧಾನ, ಬೇಸಾಯಗಾರರಿಂದ ನೇರವಾಗಿ ಸಿರಿಧಾನ್ಯ ಮಾರಾಟ, ಸಾವಯವ ಬೆಳೆಗಳಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಆಕರ್ಷಿಸಿತು.
ಪಾಲ್ಗೊಂಡಿದ್ದ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಿರಿಧಾನ್ಯಗಳ ಮಹತ್ವ ಮತ್ತು ಅದರಲ್ಲಿನ ಆರೋಗ್ಯಕರ ಅಂಶಗಳನ್ನು ಪ್ರದರ್ಶನವು ತಿಳಿಸಿಕೊಟ್ಟಿತು. ಮಳಿಗೆಗಳಲ್ಲಿ ಸಾವಯವ ಉತ್ಪನ್ನಗಳ, ಸಿರಿಧಾನ್ಯಗಳಾದ ಕೊರಲೆ, ಹಾರಕ, ಬರಗು, ಸಜ್ಜೆ, ಸಾಮೆ, ಊದಲು, ನವಣೆ ಮಾರಾಟಕ್ಕೆ ಲಭ್ಯವಿತ್ತು.
ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ ತಿನಿಸುಗಳು ಉತ್ತಮವಾಗಿ ಮಾರಾಟವಾಯಿತು. ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯವರು ಸಿರಿಧಾನ್ಯದ ಜತೆಗೆ ಸಾವಯವ ಬೀಜಗಳನ್ನು ಮಾರಿದರು. ಸರಗೂರು ತಾಲೂಕಿನ ಬಿ.ಜಿ. ಪುರ ರಾಗಿ ರೈತ ಉತ್ಪಾದಕರ ಕಂಪನಿ ನಿಯಮಿತ ತಯಾರಿಸಿದ್ದ ಸಾವಯವ ರಾಗಿ ಉತ್ಪನ್ನಗಳು, ಬಯಲು ಸೀಮೆ ರೈತ ಸಂಘದ ಲೋಕೇಶ್, ಭುವಿ ನ್ಯಾಚುರಲ್‌ಸ ಸಂಸ್ಥೆಯವರು ಪಾಲ್ಗೊಂಡಿದ್ದರು.