ಮಂಗಳೂರು(ಸೆ.06): ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ತನ್ನ ಸಾಧನೆ ಎಂದು ಹೇಳಿಕೊಳ್ಳಲು ಏನೂ ಇಲ್ಲ. ನೆರೆ ಪರಿಹಾರ ಕೊಡುವುದರಲ್ಲೂ ರಾಜ್ಯ, ಕೇಂದ್ರ ಸರ್ಕಾರ ವಿಫಲವಾಗಿದೆ. ಮುಂದಿನ ವರ್ಷವೇ 2020ರಲ್ಲಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಮೂಡುಬಿದಿರೆ ಮೂಡಿಗೆರೆಯ ನೆರೆಪೀಡಿತ ಪ್ರದೇಶಗಳಿಗೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಭೇಟಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ತೆರಳುವ ಮುನ್ನ ಶನಿವಾರ ಬೆಳಗ್ಗೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಅವರ ಮನೆಯಲ್ಲಿ ಉಪಾಹಾರಕ್ಕಾಗಿ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಅವರು ಮಾತನಾಡಿದ್ದಾರೆ.

5 ಸಾವಿರ ಕೋಟಿ ರು. ನೆರವು ನೀಡಬೇಕು

ರಾಜ್ಯವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ನೆರೆ ಪೀಡಿತವಾಗಿದೆ. ಎರಡೂವರೆ ಲಕ್ಷ ಮನೆಗಳು ಹಾನಿಗೊಳಗಾಗಿದ್ದು, ಸುಮಾರು 1 ಲಕ್ಷ ಕೋಟಿ ರುಪಾಯಿಗಳಿಗೂ ಅಧಿಕ ನಷ್ಟವಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿಲ್ಲ. ನೀಡಿರುವ ಪರಿಹಾರವೂ ಕಡಿಮೆ. ಕೇಂದ್ರ ಸರ್ಕಾರ ತಕ್ಷಣ 5 ಸಾವಿರ ಕೋಟಿ ರು. ನೆರವು ನೀಡಬೇಕೆಂದು ನಾವು ಒತ್ತಾಯಿಸಿದ್ದೆವು. ಆದರೆ ಕೇವಲ 1,200 ಕೋಟಿ ರು. ಘೋಷಿಸಿದೆ.

ಯಡಿಯೂರಪ್ಪ ಪೆದ್ದು ಹೇಳಿಕೆ:

ಯಡಿಯೂರಪ್ಪ ಖಜಾನೆ ಖಾಲಿಯಾಗಿದೆ ಎಂದು ಪೆದ್ದು ಪೆದ್ದು ಹೇಳಿಕೆ ನೀಡುತ್ತಾರೆ. ಖಜಾನೆ ಖಾಲಿಯಾಗಿದೆ ಅಂದ್ರೆ ಏನು ಅರ್ಥ?. ಪ್ರತಿ ತಿಂಗಳು ತೆರಿಗೆ ಬರುತ್ತಾ ಇರುತ್ತದೆ. ತೆರಿಗೆ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿದರೆ ಸಮಸ್ಯೆ ಬರುವುದಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಐದು ವರ್ಷ ಯಾವುದೇ ಹಣಕಾಸಿನ ಸಮಸ್ಯೆ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಸ್ತೂರಿರಂಗನ್‌ ವರದಿ ಅವೈಜ್ಞಾನಿಕ, ಮರುಪರಿಶೀಲನೆ ಅಗತ್ಯ: ಸಂಸದೆ