ಮಂಡ್ಯ: ಕೆ.ಕೋಡಿಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಅಸ್ತು, ಪ್ರತಾಪ್ ಸಿಂಹ
ಮೈಸೂರು ಸಂಸದರಿಂದ ಸ್ಥಳ ಪರಿಶೀಲನೆ, ಐದಾರು ತಿಂಗಳಲ್ಲಿ ಕಾಮಗಾರಿ ಪೂರ್ಣ: ಹೋರಾಟಕ್ಕೆ ಸಿಕ್ಕ ಫಲ
ಮದ್ದೂರು(ಸೆ.29): ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಶಿಂಷಾ ನದಿಗೆ ಅಡ್ಡಲಾಗಿ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆಗೆ ಕೊನೆಗೂ ಫಲ ಸಿಕ್ಕಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಸರ್ವಿಸ್ ರಸ್ತೆಗೆ ಸೇತುವೆ ನಿರ್ಮಾಣ ಕಾಮಗಾರಿ ಮಾಡುವಂತೆ ಒತ್ತಾಯಿಸಿ ಹತ್ತಾರು ಗ್ರಾಮಗಳ ರೈತರು ಕಳೆದ 8 ತಿಂಗಳುಗಳ ಹಿಂದೆ ಕೆ.ಕೋಡಿಹಳ್ಳಿ ಬಳಿ ಹೆದ್ದಾರಿ ಕಾಮಗಾರಿಗೆ ಅಡ್ಡಿ ಪಡಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು.
ಶಾಸಕರ ವಿರುದ್ಧ ಟೀಕೆ ಬೇಡಮ್ಮ ; ಸಂಸದೆ ಸುಮಲತಾಗೆ ಜೆಡಿಎಸ್ ಬೆಂಬಲಿಗರ ಸಲಹೆ
ಆ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಆಹವಾಲು ಸ್ವೀಕರಿಸಿದ್ದ ಸಂಸದ ಪ್ರತಾಪ್ ಸಿಂಹ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆದಷ್ಟುಬೇಗ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಚಿವರನ್ನು ಭೇಟಿ ಮಾಡಿ ಸೇತುವೆ ಕಾಮಗಾರಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿ, ಇನ್ನು ಐದಾರು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಡಿಬಿಎಲ್ ಸಂಸ್ಥೆಯ ಯೋಗೇಶ್ ಜೈನ್ ಹಾಗೂ ಅಧಿಕಾರಿಗಳು ಇದ್ದರು.