ಧಾರವಾಡ (ಸೆ.08) : ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಧಾರವಾಡದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಧಾರವಾಡ ತಾಲೂಕಿನ ಹಾರೋಬೆಳವಡಿ ಮತ್ತು ಅಮ್ಮಿನಬಾವಿ ಗ್ರಾಮದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು..

ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯದ ಅಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ. ಕಂದಾಯ ಇಲಾಖೆಯ ಕೆಎಸ್‌ಡಿಎಮ್‌ಎ ವಿಭಾಗೀಯ ವ್ಯವಸ್ಥಾಪಕ ಡಾ.ಜಿ.ಎಸ್. ಶ್ರೀನಿವಾಸ ಅವರನ್ನೊಳಗೊಂಡ ಎರಡನೇ ತಂಡವು ಜಿಲ್ಲೆಯ ಮಳೆ ಹಾನಿ ಪರಿಸ್ಥಿತಿಯ ಕುರಿತು ಅಧ್ಯಯನ ಮಾಡಿದರು.

8 ಸಾವಿರ ಕೋಟಿಗೂ ಅಧಿಕ ನೆರೆ ನಷ್ಟವಾಗಿದೆ, ಹೆಚ್ಚಿನ ಪರಿಹಾರ ನೀಡಿ: ಕೇಂದ್ರಕ್ಕೆ ಸಿಎಂ

ಧಾರವಾಡ ಗಡಿ ಭಾಗದ ಹಾರೋಬೆಳವಡಿ ಗ್ರಾಮದ ಕೊಚ್ಚಿ ಹೋಗಿರುವ ತಾತ್ಕಾಲಿಕ ಸೇತುವೆ ಹಾಗೂ ಉಂಟಾಗಿರುವ ಬೆಳೆಹಾನಿ ವೀಕ್ಷಣೆ ಮಾಡಿತು. ತಂಡವು ಹೆಸರು ಕಾಳು ಹಾಗೂ ಸೋಯಾಬಿನ್ ಬೆಳೆಹಾನಿ ಪರಿಶೀಲನೆ ಮಾಡಿದರು. ಅಮ್ಮಿನಭಾವಿ ಗ್ರಾಮದ ವ್ಯಾಪ್ತಿಯ ವಿವಿಧ ರೈತರ ಜಮೀನುಗಳಲ್ಲಿ ಈರುಳ್ಳಿ, ಹೆಸರುಕಾಳು ಬೆಳೆಹಾನಿ ಪರಿಶೀಲಿಸಿ ರೈತರ ಸಂಕಷ್ಟ ಆಲಿಸಿದರು.  ಗ್ರಾಮೀಣ ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತಿಭಟನೆ ಬಿಸಿ 
ಬೆಳಗಾವಿಯಲ್ಲಿ ಕೇಂದ್ರ ಅಧ್ಯಯನ ತಂಡಕ್ಕೆ  ಪ್ರತಿಭಟನೆಯ ಬಿಸಿ ತಟ್ಟಿದೆ.  ಗೋಕಾಕ್‌ನಲ್ಲಿ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ.  ಅತಿವೃಷ್ಟಿ, ನೆರೆಯಿಂದಾದ ಹಾನಿ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದ ವೇಳೆ ಘೇರಾವ್ ಹಾಕಲಾಗಿದೆ. 

ಬೆಳಗಾವಿ ಜಿಲ್ಲೆ ಗೋಕಾಕ್‌ನ ಲೋಳಸೂರ ಸೇತುವೆಗೆ ಭೇಟಿ ನೀಡಿದ್ದ ವೇಳೆ  ಸಮಸ್ಯೆ ಆಲಿಸಲು ಕಾರಿನಿಂದ ಇಳಿಯದಿದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ