Asianet Suvarna News Asianet Suvarna News

ಕಾಂಗ್ರೆಸ್ ಸೇವಾದಳದ ಶತಮಾನೋತ್ಸವ ಸಂಭ್ರಮ- ರಾಷ್ಟ್ರ ಮತ್ತು ರಾಜ್ಯದಿಂದ ಪ್ರತಿನಿಧಿಗಳ ಆಗಮನ

ಕಾಂಗ್ರೆಸ್ ಸೇವಾದಳದ ಶತಮಾನೋತ್ಸವವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸೇವಾದಳದ ರಾಜ್ಯ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ತಿಳಿಸಿದರು.

Centenary celebrations of Congress Seva Dal  snr
Author
First Published Oct 10, 2023, 8:04 AM IST

 ಮೈಸೂರು :  ಕಾಂಗ್ರೆಸ್ ಸೇವಾದಳದ ಶತಮಾನೋತ್ಸವವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸೇವಾದಳದ ರಾಜ್ಯ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸೇವಾದಳಕ್ಕೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಶತಮಾನೋತ್ಸವನ್ನು ಸುಮಾರು ಹತ್ತು ಸಾವಿರರಕ್ಕೂ ಅಧಿಕ ಸೇವಾದಳ ಕಾರ್ಯಕರ್ತರನ್ನು ಸೇರಿಸಿ ಬೆಂಗಳೂರಿನಲ್ಲಿ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ. ಈ ಸೂಚನೆಯ ಅನ್ವಯ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸೇವಾದಳದ ಪದಾಧಿಕಾರಿಗಳನ್ನು ಆಹ್ವಾನಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಯಲ್ಲಿ ಸೇವಾದಳದ ಪಾತ್ರವನ್ನು ತಿಳಿಸಲು ಆಗಮಿಸಿರುವುದಾಗಿ ಹೇಳಿದರು.

ನಾ.ಸು. ಹರ್ಡಿಕರ್ ಅವರನ್ನು ಸ್ಮರಣೆ ಮಾಡಿಕೊಳ್ಳಲು ಹಲವಾರು ಕಾರಣಗಳಿವೆ. ಮೂಲತಃ ಅವರು ನಮ್ಮ ಕರ್ನಾಟಕದವರೇ ಆಗಿದ್ದು ಕಾಂಗ್ರೆಸ್ ಸೇವಾದಳವನ್ನು ಸ್ಥಾಪಿಸಿದರು. ಇದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾತೃ ವಿಭಾಗವಾಗಿದ್ದು ಇದರಿಂದ ಹೊರಹೊಮ್ಮಿದವರು ಅತ್ಯುತ್ತಮ ರಾಜಕರಣಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಸೂಚಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ಅದರಲ್ಲೂ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇ ಬೇಕೆಂಬ ಇಂಗಿತ ವ್ಯಕ್ತಪಡಿಸಿ, ಅಭ್ಯರ್ಥಿ ಯಾರೇ ಆದರೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ಸೇವಾದಳ ಎಂಬುದು ಶಿಸ್ತು ಮತ್ತು ಬದ್ಧತೆಗೆ ಹೆಸರಾದ ಕಾಂಗ್ರೆಸ್ಸಿನ ಒಂದು ಅವಿಭಾಜ್ಯ ಅಂಗ. ಸೇವಾದಳದಲ್ಲಿ ಪಕ್ಷ ನಿಷ್ಠೆಯಿಂದ ದುಡಿದ ಪದಾಧಿಕಾರಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿ ಈ ಹಿಂದೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸೇವಾದಳದಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ 5 ಸೇವಾದಳ ಪದಾಧಿಕಾರಿಗಳಿಗೆ ಸರ್ಕಾರದ ಯಾವುದಾದರೂ ನಿಗಮ / ಮಂಡಳಿಗಳಲ್ಲಿ ಉನ್ನತ ಸ್ಥಾನ ಕೊಡಬೇಕೆಂದು ಸಭಾ ನಿಲುವಳಿ ಕೈಗೊಂಡಿದ್ದಾಗಿ ಪ್ರಸ್ತಾಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಸೇವಾದಳ ವಿಭಾಗವು ಬಲಿಷ್ಠ ತಂಡವನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ ಇದನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ನಗರ ಸೇವಾ ದಳದ ಅಧ್ಯಕ್ಷ ಎಂ.ಕೆ. ಅಶೋಕ್, ಜಿಲ್ಲಾ ಸೇವಾದಳದ ಅಧ್ಯಕ್ಷ ಯೋಗೇಶ್, ರಾಜ್ಯ ಸಮಿತಿ ಪದಾಧಿಕಾರಿಗಳಾದ ಶಿವಶಂಕರ್, ಲಲಿತಾ , ಶಂಕರ್ ಮೂರ್ತಿ, ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸೇವಾದಳದ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Follow Us:
Download App:
  • android
  • ios