ತಲಾ ಇಬ್ಬರನ್ನು ಒಳಗೊಂಡು ಒಟ್ಟು 50 ತಂಡಗಳನ್ನು ಶ್ವಾನ ಗಣತಿಗಾಗಿ ಬಿಬಿಎಂಪಿ ರೂಪಿಸಲಿದ್ದು, ಈ ತಂಡಗಳು ಐವತ್ತು ದ್ವಿಚಕ್ರ ವಾಹನದಲ್ಲಿ ಶ್ವಾನ ಗಣತಿ ನಡೆಸಲಿವೆ. ರಾಜಧಾನಿಯಲ್ಲಿ ಬಿಬಿಎಂಪಿ ನಾಲ್ಕು ವರ್ಷದ ಬಳಿಕ ಮತ್ತೆ ಬೀದಿ ನಾಯಿಗಳ ಗಣತಿ ನಡೆಸುತ್ತಿದೆ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜೂ.24):  ಬಿಬಿಎಂಪಿಯು ಬೀದಿ ನಾಯಿಗಳ ಗಣತಿಗೆ ಮುಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಕಾರ್ಯಕ್ಕಾಗಿಯೇ ನೇಮಕಗೊಳ್ಳುವ ತಂಡವು ಗಣತಿಯನ್ನು ಬೈಕ್‌ (ದ್ವಿಚಕ್ರ ವಾಹನ) ಮೇಲೇರಿ ನಡೆಸಲಿದೆ!
ಹೌದು, ತಲಾ ಇಬ್ಬರನ್ನು ಒಳಗೊಂಡು ಒಟ್ಟು 50 ತಂಡಗಳನ್ನು ಶ್ವಾನ ಗಣತಿಗಾಗಿ ಬಿಬಿಎಂಪಿ ರೂಪಿಸಲಿದ್ದು, ಈ ತಂಡಗಳು ಐವತ್ತು ದ್ವಿಚಕ್ರ ವಾಹನದಲ್ಲಿ ಶ್ವಾನ ಗಣತಿ ನಡೆಸಲಿವೆ. ರಾಜಧಾನಿಯಲ್ಲಿ ಬಿಬಿಎಂಪಿ ನಾಲ್ಕು ವರ್ಷದ ಬಳಿಕ ಮತ್ತೆ ಬೀದಿ ನಾಯಿಗಳ ಗಣತಿ ನಡೆಸುತ್ತಿದೆ. ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 50 ಸಿಬ್ಬಂದಿ ಮತ್ತು ಬಿಬಿಎಂಪಿಯ 50 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿಯನ್ನು ನಿಯೋಜಿಸಲಾಗಿದೆ. ಒಂದು ಬೈಕ್‌ನಲ್ಲಿ ಇಬ್ಬರು ಸಿಬ್ಬಂದಿ ಗಣತಿ ನಡೆಸುವುದಕ್ಕೆ ಹೋಗಲಿದ್ದಾರೆ. ಒಬ್ಬ ಸಿಬ್ಬಂದಿಯು ಬೈಕ್‌ ಚಾಲನೆ ಮಾಡಲಿದ್ದಾರೆ, ಮತ್ತೊಬ್ಬರು ಮೊಬೈಲ್‌ನಲ್ಲಿ ಬೀದಿ ನಾಯಿ ಫೋಟೋ ತೆಗೆದು ಆ್ಯಪ್‌ ಮೂಲಕ ದಾಖಲಿಸಿ ಗಣತಿ ಕಾರ್ಯ ನಡೆಸಲಿದ್ದಾರೆ.

ಒಂದು ಬೈಕಿನ ಪೆಟ್ರೋಲ್‌ಗೆ ಒಟ್ಟು .5 ಸಾವಿರ ನೀಡಲಾಗುವುದು. ಇದರಂತೆ ಗಣತಿಗೆ ಒಟ್ಟು .2.50 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ವೆಚ್ಚವನ್ನು ನಾಯಿ ಗಣತಿಗೆ ಮಾಡುತ್ತಿಲ್ಲ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!

ದಿನಕ್ಕೆ 5 ಕಿ.ಮೀ ಸುತ್ತಾಟ:

‘ಡಬ್ಲ್ಯೂವಿಎಸ್‌’ ಆ್ಯಪ್‌ ಮೂಲಕ ವಾರ್ಡ್‌ವಾರು ನಾಯಿಗಳ ಗಣತಿ ನಡೆಸಲಾಗುತ್ತಿದ್ದು, ಒಂದು ತಂಡವು ದಿನಕ್ಕೆ 5 ಕಿ.ಮೀ. ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಗಣತಿ ಮಾಡಬೇಕು. ಬೀದಿ ನಾಯಿಗಳು ಕಾಣಿಸಿದ ತಕ್ಷಣ ಫೋಟೋ ಹಾಗೂ ಜಿಯೋ ಲೊಕೇಷನ್‌ ಸಹಿತ ಆ್ಯಪ್‌ನಲ್ಲಿ ದಾಖಲಿಸಬೇಕಿದೆ.

ಬೀದಿ ನಾಯಿಗಳು ಒಂದು ವಾರ್ಡ್‌ನಿಂದ ಒಂದು ವಾರ್ಡ್‌ಗೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ನಿಖರವಾಗಿ ನಾಯಿ ಗಣತಿ ಸಂಗ್ರಹಿಸುವ ಉದ್ದೇಶದಿಂದ ಮೂರು ಬಾರಿ ಗಣತಿ ನಡೆಸಲಾಗುತ್ತಿದೆ. ಒಂದು ಸೀಮಿತ ಪ್ರದೇಶದಲ್ಲಿ ಮೊದಲ ದಿನ, ಎರಡನೇ ದಿನ ಹಾಗೂ ಆರನೇ ದಿನ ಬೀದಿ ನಾಯಿಗಳ ಗಣತಿ ನಡೆಸಬೇಕು. ಸರಾಸರಿ ಅಂಕಿ ಅಂಶವನ್ನು ಪಡೆದು ನಾಯಿಗಳ ಸಂಖ್ಯೆ ನಿರ್ಧರಿಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

2019ರಲ್ಲಿ 3.09 ಲಕ್ಷ ಬೀದಿ ನಾಯಿಗಳು

2019ರಲ್ಲಿ ನಡೆಸಲಾದ ಬೀದಿ ನಾಯಿ ಗಣತಿಯಲ್ಲಿ ನಗರದಲ್ಲಿ 3.09 ಲಕ್ಷ ಬೀದಿ ನಾಯಿಗಳು ಇದ್ದವು. ಅದಾದ ಬಳಿಕ ಬಿಬಿಎಂಪಿ ಪಶುಪಾಲನೆ ವಿಭಾಗವು ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ನಾಯಿಗಳ ಸಂತಾನಹರಣ ಹಾಗೂ 1.50 ಲಕ್ಷ ನಾಯಿಗಳಿಗೆ ಆ್ಯಂಟಿ ರೇಬಿಸ್‌ ಲಸಿಕೆ ನೀಡುವುದು ಸೇರಿದಂತೆ ಮೊದಲಾದ ಕ್ರಮಗಳ ಮೂಲಕ ಬೀದಿ ನಾಯಿ ಹಾವಳಿ ನಿಯಂತ್ರಿಸುವ ಕೆಲಸ ಮಾಡಲಾಗಿದೆ. ಇದೀಗ ಮುಂದಿನ ದಿನಗಳಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರದಲ್ಲಿರುವ ಬೀದಿ ನಾಯಿಗಳ ಸಂಖ್ಯೆ ತಿಳಿಯುವುದು ಅತ್ಯಗತ್ಯ ಆಗಿರುವುದರಿಂದ ಬಿಬಿಎಂಪಿ ನಾಯಿ ಗಣತಿ ಮುಂದಾಗಿದೆ.

ಡ್ರೋಣ್‌ನಲ್ಲಿ ನಾಯಿ ಗಣತಿ?

ನಾಯಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವುದರಿಂದ ಗಣತಿ ನಡೆಸುವುದಕ್ಕೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿಯು ಡ್ರೋಣ್‌ ಬಳಕೆ ಮಾಡಿಕೊಂಡು ಬೀದಿ ನಾಯಿಗಳ ಗಣತಿ ನಡೆಸುವುದಕ್ಕೆ ಚಿಂತನೆ ನಡೆಸಲಾಗಿದೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಹೀಗಾಗಿ, ಬೈಕ್‌ನಲ್ಲಿಯೇ ಸಿಬ್ಬಂದಿ ನೇರವಾಗಿ ತೆರಳಿ ಗಣತಿಗೆ ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕ ಡಾ. ಕೆ.ಪಿ.ರವಿಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಬೀದಿ ನಾಯಿ ಗಣತಿಯಲ್ಲಿ ಭಾಗಿಯಾಗುವ 100 ಮಂದಿ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇದೇ ಜುಲೈ 12ರಿಂದ ಗಣತಿ ಆರಂಭಿಸಲಾಗುವುದು. 15ರಿಂದ 20 ದಿನದಲ್ಲಿ ನಾಯಿ ಗಣತಿ ಕಾರ್ಯ ಪೂರ್ಣಗೊಳಿಸಲಾಗುವುದು ಅಂತ ಬಿಬಿಎಂಪಿ ಪಶುಪಾಲನೆ ವಿಭಾಗ ಜಂಟಿ ನಿರ್ದೇಶಕ ಡಾ. ಕೆ.ಪಿ.ರವಿಕುಮಾರ್‌ ತಿಳಿಸಿದ್ದಾರೆ. 

ಜುಲೈ 1ರಿಂದ ಲಸಿಕೆ

ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಜುಲೈ 1ರಿಂದ ಆ್ಯಂಟಿ ರೇಬಿಸ್‌ ಲಸಿಕೆ ಹಾಕುವ ಅಭಿಯಾನ ಆರಂಭಿಸಲಾಗುತ್ತಿದೆ. ಈ ಬಾರಿ ಆ್ಯಂಟಿ ರೇಬಿಸ್‌ ಲಸಿಕೆಯ ಜತೆಗೆ ಕಂಬೈನ್‌ ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆಯು 9 ವಿಧದ ರೋಗಗಳನ್ನು ನಿಯಂತ್ರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಟೆನಾಡಲ್ಲಿ ಬೀದಿನಾಯಿಗಳ ಹಾವಳಿ; ಮನೆಗೆ ನುಗ್ಗಿ ದಾಳಿ ಮಾಡ್ತಿದ್ರೂ ಕಣ್ಮುಚ್ಚಿ ಕುಳಿತ ನಗರಸಭೆ!

ನಾಯಿ ಕಡಿತ ಇಳಿಕೆ

2019ರ ನಂತರ ನಗರದಲ್ಲಿ ಬೀದಿ ನಾಯಿಗಳ ಕಡಿತ ಹಾಗೂ ಹುಚ್ಚು ನಾಯಿಗಳ ಸಂಖ್ಯೆ ಕಡಿಮೆ ಆಗಿದೆ. 2019ರಲ್ಲಿ 42 ಸಾವಿರ ನಾಯಿ ಕಚ್ಚುವ ಪ್ರಕರಣ ದಾಖಲಾಗುತ್ತಿದ್ದವು. ಇದೀಗ 17 ಸಾವಿರಕ್ಕೆ ಇಳಿಕೆಯಾಗಿದೆ. ಇನ್ನು 2020ರಲ್ಲಿ 246 ಬೀದಿ ನಾಯಿಗಳಿಗೆ ಹುಚ್ಚು ಹಿಡಿದಿರುವ ಪ್ರಕರಣ ಕಾಣಿಸಿಕೊಂಡಿದ್ದವು. 2022ರಲ್ಲಿ 37ಕ್ಕೆ ಇಳಿಕೆಯಾಗಿದೆ.

3 ವರ್ಷ ನಾಯಿ ಕಡಿತ, ಪರಿಹಾರ ಪ್ರಕರಣ
ವರ್ಷ ನಾಯಿ ಕಡಿತ ಸಂಖ್ಯೆ ಪರಿಹಾರ ಪಡೆದವರ ಸಂಖ್ಯೆ ಪರಿಹಾರ ಮೊತ್ತ

2019-20 42,818 9 2,04,292
2020-21 18,629 7 2,22,540
2021-22 17,600 4 85,431

3 ವರ್ಷದ ಹುಚ್ಚು ನಾಯಿ ಪ್ರಕರಣ
ವರ್ಷ ಹುಚ್ಚು ನಾಯಿ ಸಂಖ್ಯೆ

2019-20 246
2020-21 190
2021-22 37