ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಸಂಭ್ರಮದ ಶಿಷ್ಯ ಸ್ವೀಕಾರ ಮಹೋತ್ಸವ
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಉತ್ತರಕನ್ನಡ(ಫೆ.23): ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು. ಮಹಾಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾದ 55ನೇ ನೂತನ ಯತಿ ಬ್ರಹ್ಮಚಾರಿ ವಿದ್ವಾನ್ ನಾಗರಾಜ ಭಟ್ಟ ಗಂಗೆಮನೆ ಅವರಿಗೆ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಎಂಬುದಾಗಿ ನಾಮಕರಣ ಹಾಗೂ ಇತರ ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಮೂಲಕ ಶಿಷ್ಯ ಸ್ವೀಕಾರ ಪ್ರಕ್ರಿಯೆ ನಡೆಯಿತು. ಬಳಿಕ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಮಠಗಳ ಯತಿಗಳು ಭಾಗವಹಿಸಿದ್ದರು.
ಕಂಚೀ ಶ್ರೀ ಜಗದ್ಗುರು ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳಿಂದ ಆನ್‌ಲೈನ್ ಮೂಲಕವೇ ಶುಭಾಶಯ ಹಾಗೂ ಆಶೀರ್ವಚನ ನೀಡಿದರು. ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್‌ನ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ, ಬೆಂಗಳೂರು ಅವಿಚ್ಛಿನ್ನಪರಂಪರಾ ಕೂಡ್ಲಶೃಂಗೇರಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮೀಜಿ, ಹೊಳೆನರಸೀಪುರ ಅಧ್ಯಾತ್ಮಪ್ರಕಾಶ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾಸ್ವಾಮೀಜಿ, ಸಿದ್ಧಾಪುರ ನೆಲೆಮಾವು ಶ್ರೀಮನ್ನೆಲೆಮಾವಿನಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿ, ತುರುವೇಕೆರೆಯ ಶ್ರೀ ಪ್ರಣವಾನಂದ ತೀರ್ಥ ಮಹಾಸ್ವಾಮೀಜಿ, ತಮಿಳುನಾಡು ಕಾಂಚೀಪುರಂನ ಶ್ರೀ ಆತ್ಮಬೋಧ ತೀರ್ಥ ಮಹಾಸ್ವಾಮೀಜಿ, ಶ್ರೀ ಸಹಜಾನಂದ ತೀರ್ಥ ಮಹಾಸ್ವಾಮಿ ಹಾಗೂ ಶ್ರೀ ಅಂಜನಾನಂದ ತೀರ್ಥ ಮಹಾಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಉತ್ತರ ಕನ್ನಡ ಲೋಕಸಭೆಗೆ 5 ಕೈ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಐವರಲ್ಲಿ ಗೆಲ್ಲುವವರಿಗಾಗಿ ಸಮೀಕ್ಷೆ: ಹೆಚ್.ಕೆ. ಪಾಟೀಲ್
ಈ ವೇಳೆ ನೂತನ ಶ್ರೀಗಳವರ ಪೂರ್ವಾಶ್ರಮದ ಪೋಷಕರಿಗೆ ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮೀಜಿ, ಮಠದಲ್ಲಿ ಆದ ಶಿಷ್ಯೋತ್ಸವ ಮನೆಯಲ್ಲಿ ಪುತ್ರೋತ್ಸವವಾದಷ್ಟು ಸಂತಸವಾಗಿದೆ. ಸ್ವರ್ಣವಲ್ಲೀ ಗುರು ಪರಂಪರೆಯಲ್ಲಿ ಆನಂದ ಬೋಧೇಂದ್ರ ಬಹು ಪ್ರಸಿದ್ಧ ಹೆಸರು. "ಯೋಗಾ ವಸಿಷ್ಠ" ಎಂಬ ಗ್ರಂಥಕ್ಕೆ ವ್ಯಾಖ್ಯಾನ ಬರೆದಿದ್ದಾರೆ. ಇದು ಅವರ ಹೆಸರಿಡಲು ಕಾರಣವಾಯಿತು.
ನಾವು ಆಧ್ಯಾತ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡುವ ಸಂದೇಶ ಸಮಾಜಕ್ಕೆ ನೀಡಬೇಕಾಗಿದೆ. ಧರ್ಮ ಆಚರಿಸುತ್ತಿರಬೇಕು. ನಂತರ ಬೋಧನೆ ಮಾಡಬೇಕು ಎಂಬುದು ಶಂಕರ ತತ್ವ ಹೇಳುತ್ತದೆ. ಧರ್ಮ ಆಚರಣೆ ಪ್ರಧಾನ, ಪ್ರವಚನ ಪ್ರಧಾನವಲ್ಲ. ನಾವು ಸ್ವತಃ ಧರ್ಮವನ್ನು ಆಚರಿಸಿ ಇತರರಿಗೆ ಭೋಧನೆ ಮಾಡಬೇಕು. ತತ್ವಜ್ಞಾನ ಪಡೆದವನು, ಶಿಷ್ಯ ಹಿತದಲ್ಲಿ ಸತತ ತೊಡಗಿಕೊಳ್ಳುವವರು ಶ್ರೇಷ್ಠ ಯತಿಗಳಾಗುತ್ತಾರೆ. ಸಾಮಾಜಿಕ ವಿಷಯ ಹಾಗೂ ಆಧ್ಯಾತ್ಮಿಕ ವಿಚಾರಗಳ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ದೊಡ್ಡ ಸವಾಲು. ಏಕಾಂತ ಮತ್ತು ಲೋಕಾಂತಕ್ಕೆ ಸಮನ್ವಯ ಸಾಧಿಸಿದವನೇ ಗುರು. ಅದಕ್ಕೆ ಮಾರ್ಗದರ್ಶನ ಬೇಕು. ಅದಕ್ಕಾಗಿಯೇ ಇಷ್ಟು ಬೇಗನೇ ಈ ಶಿಷ್ಯ ಸ್ವೀಕಾರ ಮಾಡಿದ್ದೇವೆ ಎಂದರು.
ನೂತನ ಯತಿಗಳು ತಮ್ಮ ಪೋಷಕರಲ್ಲಿ ಗುರುಗಳು ನಿಮ್ಮಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಅಂದಿದ್ರು. ಗಣಪತಿ ಭಟ್ ದಂಪತಿ ಅಪರಂಜಿಯನ್ನು ನಮಗೆ ಕೊಟ್ಟಿದ್ದೀರಿ. ಅದನ್ನು ಇನ್ನಷ್ಟು ಹೊಳಪು ಮಾಡುವುದು ನಮ್ಮ ಕೆಲಸ ಎಂದು ಹೇಳುತ್ತಾ ಗದ್ಗದಿತರಾದರು.