ತುಮಕೂರು (ಮಾ.17): ಮಾಜಿ ಸಚಿವರೊಬ್ಬರ ರಾಸಲೀಲೆ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮಾಲ ನಾಯಕ್‌ ನೇತೃತ್ವದ ಮೂರು ಮಂದಿ ಎಸ್‌ಐಟಿ ತಂಡ ಮಂಗಳವಾರ ಕಿಂಗ್‌ಪಿನ್‌ ನರೇಶಗೌಡ ಪತ್ನಿಯ ವಿಚಾರಣೆ ನಡೆಸಿತು.

ಸಂಜೆ 4 ಗಂಟೆಗೆ ಶಿರಾ ತಾಲೂಕು ಭುವನಹಳ್ಳಿಗೆ ಆಗಮಿಸಿದ ತಂಡ ಒಂದೂವರೆ ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿತು. ಬಳಿಕ ಅಧಿಕಾರಿಗಳ ತಂಡ ಯಾವುದೇ ಪ್ರತಿಕ್ರಿಯೆ ನೀಡದೆ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲದೇ ಕಿಂಗ್‌ಪಿನ್‌ ನರೇಶಗೌಡ ಪತ್ನಿ ಪೂಜಾಗೂ ಪ್ರತಿಕ್ರಿಯೆ ನೀಡದಂತೆ ಸೂಚಿಸಿದ್ದಾರೆ.

ಕಳೆದ ಶನಿವಾರವಷ್ಟೆಮುಂಜಾನೆ 4 ಗಂಟೆಗೆ ಎಸ್‌ಐಟಿ ಅಧಿಕಾರಿಗಳ ತಂಡ ಭುವನಹಳ್ಳಿಗೆ ಬಂದು ಕುಟುಂಬಸ್ಥರ ವಿಚಾರಣೆ ನಡೆಸಿತ್ತು. ಮಾ.7ರಂದು ಕಿಂಗ್‌ಪಿನ್‌ ನರೇಶಗೌಡ ಗ್ರಾಮಕ್ಕೆ ಬಂದವನು ಈವರೆಗೂ ಕುಟುಂಬದ ಸಂಪರ್ಕದಲ್ಲಿಲ್ಲವೆಂದು ಪತ್ನಿ ಪೂಜಾ ಅಧಿಕಾರಿಗಳಿಗೆ ತಿಳಿಸಿದ್ದರು. ಅಂದು ಎಸ್‌ಐಟಿ ಅಧಿಕಾರಿಗಳು ಕುಟುಂಬಸ್ಥರ ದೂರವಾಣಿ ಸಂಖ್ಯೆ, ಗಣ್ಯರ ಜೊತೆಗಿದ್ದ ಫೋಟೋಗಳನ್ನು ಮಾತ್ರ ಪಡೆದು ವಾಪಸ್‌ ಹೋಗಿದ್ದರು. ಮಂಗಳವಾರ ಕೂಡ ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಹೋಗಿದ್ದಾರೆ.

ಜಾರಕಿಹೊಳಿ ರಾಸಲೀಲೆ CD ಕೇಸ್: ಸಿಡಿ ಲೇಡಿ ಬಗ್ಗೆ ಮತ್ತೊಂದು ಸುದ್ದಿ ಸ್ಫೋಟ ...

ಬೆಂಗಳೂರು ವಿಚಾರಣೆಗೆ ಗೈರು: ನರೇಶ್‌ ಗೌಡನ ಪತ್ನಿ ಬೆಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆಗೆ ಮಂಗಳವಾರ ಗೈರಾಗಿದ್ದಾರೆ. ‘ನಾವು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭುವಹಳ್ಳಿ ಗ್ರಾಮದಲ್ಲಿ ನೆಲೆಸಿದ್ದೇವೆ. ಪುಟ್ಟಮಗು ಹಾಗೂ ವಯಸ್ಸಾದ ಅತ್ತೆ-ಮಾವ ಇದ್ದಾರೆ. ಅವರನ್ನು ಬಿಟ್ಟು ವಿಚಾರಣೆ ಸಲುವಾಗಿ ದೂರದ ಬೆಂಗಳೂರಿಗೆ ಬರಲು ಕಷ್ಟವಾಗುತ್ತದೆ. ಕೆಲ ದಿನಗಳ ಸಮಯ ಕೊಡಬೇಕು’ ಎಂದು ತಮ್ಮ ವಕೀಲರ ಮೂಲಕ ನರೇಶ್‌ ಪತ್ನಿ ವಿನಂತಿಸಿದ್ದಾರೆ. ನರೇಶ್‌ ಗೌಡ ಕುರಿತು ಮಾಹಿತಿ ಸಂಗ್ರಹಕ್ಕೆ ಆತನ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿತ್ತು. ಆದರೆ ತಮ್ಮ ವಕೀಲರ ಮೂಲಕ ಎಸ್‌ಐಟಿಗೆ ವಿಚಾರಣೆಗೆ ಕಾಲಾವಕಾಶ ಕೋರಿ ಅವರು ಮನವಿ ಮಾಡಿದ್ದಾರೆ.