ಬೆಂಗಳೂರು [ಆ.30]: ಕಡಿಮೆ ಬೆಲೆಗೆ ಬೆಂಜ್‌ ಕಾರಿನ ಆಸೆ ತೋರಿಸಿ ಸಾರ್ವಜನಿಕರಿಗೆ ಟೋಪಿ ಹಾಕಿ ಹಣ ದೋಚಲು ಸಜ್ಜಾಗಿದ್ದ ತಮಿಳುನಾಡು ಮೂಲದ ಇಬ್ಬರನ್ನು ಗುರುವಾರ ಸಿಸಿಬಿ ಬಂಧಿಸಿದೆ.

ಕೋಣನಕುಂಟೆ ಸಮೀಪದ ‘ಜಿನಾರಿಯಾ’ ಕಂಪನಿ ಮಾಲಿಕ ತಮಿಳುನಾಡು ಮೂಲದ ಎಸ್‌.ಹರಿಹರನ್‌ ಹಾಗೂ ಕೆ.ಬಾಲಕೃಷ್ಣನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ದುಬಾರಿ ಮೌಲ್ಯದ ಕಾರುಗಳ ಹೆಸರಿನಲ್ಲಿ ಜನರಿಗೆ ವಂಚಿಸಲು ಆರೋಪಿಗಳು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆ ಕಂಪನಿ ಕಚೇರಿ ಮೇಲೆ ನಡೆಸಲಾಯಿತು ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕೋಣನಕುಂಟೆಯ ಬೀರೇಶ್ವರ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ‘ಜಿನಾರಿಯಾ’ ಕಂಪನಿ ಕಚೇರಿ ಸ್ಥಾಪಿಸಿದ ತಮಿಳುನಾಡಿನ ಹರಿಹರನ್‌ ಹಾಗೂ ಬಾಲಕೃಷ್ಣನ್‌, ಬೆಂಜ್‌ ಕಾರಿನ ಆಸೆ ತೋರಿಸಿ ಜನರಿಗೆ ಟೋಪಿ ಹಾಕಲು ಸಿದ್ಧರಾಗಿದ್ದರು. ಈ ಕೃತ್ಯಕ್ಕೆ ಸುಮಾರು ಎಂಟು ಯುವತಿಯರಿಗೆ ತರಬೇತಿ ಸಹ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕಂಪನಿಗೆ ಒಬ್ಬರು ಸದಸ್ಯರಾದ ನಂತರ ಆ ವ್ಯಕ್ತಿ ಮತ್ತಿಬ್ಬರನ್ನು ಸೇರಿಸಬೇಕು. ಹೀಗೆ ಚೈನ್‌ ಲಿಂಕ್‌ ಮೂಲಕ ಆರೋಪಿಗಳು ಹಣ ವಸೂಲಿಗೆ ಯತ್ನಿಸಿದ್ದರು. ಪ್ರತಿ ಹಂತದಲ್ಲೂ ಸದಸ್ಯರಿಗೆ ಅಂಕಗಳನ್ನು ನೀಡಲಾಗುತ್ತದೆ. ಅಂಕಗಳ ಜತೆಗೆ ಬಹುಮಾನ ಮತ್ತು ರಿಯಾಯ್ತಿ ದರದಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಕೊಡಲಾಗುತ್ತದೆ ಎಂದು ಅವರು ಆಮಿಷವೊಡ್ಡಿದ್ದರು. ನಿಗದಿತ ಗುರಿ ಮುಟ್ಟಿದವರಿಗೆ .30 ಲಕ್ಷ ಮೌಲ್ಯದ ಬೆಂಜ್‌ ಕಾರನ್ನು ಕೊಡಲಾಗುತ್ತದೆ ಎಂದು ಪ್ರಚಾರ ಮಾಡಿದ್ದರು. ಈಗಾಗಲೇ ಈ ಜಾಹೀರಾತು ಗಮನಿಸಿದ ಕೆಲವರು, ಜಿನಾರಿಯಾ ಕಂಪನಿ ಸಂಪರ್ಕ ಬಂದಿದ್ದರು. ತಮ್ಮ ಬಲೆಗೆ ಬಿದ್ದ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳು, ಬಟ್ಟೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ನೀಡಿ ಉತ್ತೇಜಿಸುತ್ತಿದ್ದರು. ಈ ಸದಸ್ಯತ್ವ ಶುಲ್ಕ ಮತ್ತು ಮುಂಗಡ ಹಣ ಕಟ್ಟಿಸಿಕೊಳ್ಳುವುದಕ್ಕೆ ಸ್ಕೆಚ್‌ ಸಿದ್ಧಪಡಿಸಿದ್ದರು. ಅಷ್ಟರಲ್ಲಿ ನಮಗೆ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸ ಕೇಳುವ ನೆಪದಲ್ಲಿ ದಾಳಿ!

ಜಿನಾರಿಯಾ ಕಂಪನಿ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಆ ಕಂಪನಿಗೆ ಉದ್ಯೋಗ ಕೇಳುವ ನೆಪದಲ್ಲಿ ತೆರಳಿ ಸಂಪೂರ್ಣ ಮಾಹಿತಿ ಸಂಗ್ರಹಿಸಿತು. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮಾದರಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದ ಆರೋಪಿಗಳು, ಹಳೆ ಸಾಮಾಗ್ರಿಗಳನ್ನು ತೋರಿಸಿದ್ದರು. ಬಳಿಕ ಅವುಗಳ ಪರಿಶೀಲಿಸಿದ ಸಿಸಿಬಿ, ಕೊನೆ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ ಎಂದು ತಿಳಿದು ಬಂದಿದೆ.