Asianet Suvarna News Asianet Suvarna News

ಬೆಂಗಳೂರು: ಈದ್ಗಾ ಮೈದಾನಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು..!

*   ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವಹೇಳನ ಖಂಡಿಸಿ ವಿವಿಧೆಡೆ ಪ್ರತಿಭಟನೆ
*  ಸಿಸಿ ಕ್ಯಾಮೆರಾ ಅಳವಡಿಸಲು ಪೊಲೀಸರಿಂದ ಮನವಿ
*  ಇದರ ಬೆನ್ನಲ್ಲೇ 15 ಸಿಸಿ ಕ್ಯಾಮೆರಾ, ಲೈಟ್‌ ಅಳವಡಿಸಿದ ಬಿಬಿಎಂಪಿ

CC Camera Surveillance To Idgah Maidan in Bengaluru grg
Author
Bengaluru, First Published Jun 12, 2022, 7:34 AM IST

ಬೆಂಗಳೂರು(ಜೂ.12): ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ವಿರುದ್ಧ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಈದ್ಗಾ ಮೈದಾನ ವಿವಾದದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ಚಾಮರಾಜಪೇಟೆಯ ಈದ್ಗಾ ಮೈದಾನದ ಸುತ್ತಮುತ್ತ ಸುಮಾರು 16 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ.

ಕಳೆದೊಂದು ವಾರದ ಹಿಂದೆ ಚಾಮರಾಜಪೇಟೆಯ ಈದ್ಗಾ ಮೈದಾನ ಯಾರ ಸ್ವತ್ತು ಎನ್ನುವ ಕುರಿತು ವಿವಾದ ಹುಟ್ಟಿಕೊಂಡಿತ್ತು. ಈ ನಡುವೆಯೇ ಕೆಲವು ಹಿಂದೂ ಪರ ಸಂಘಟನೆಗಳು ಈದ್ಗಾ ಮೈದಾನ ಕೇವಲ ಮುಸ್ಲಿಂ ಸಮುದಾಯದವರು ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಮಾತ್ರ ಬಳಕೆಯಾಗುತ್ತಿದೆ. ಇದು ಬಿಬಿಎಂಪಿ ಆಟದ ಮೈದಾನವಾಗಿದ್ದು, ಸಾರ್ವಜನಿಕರಿಗೆ ಇತರೆ ಕಾರ್ಯಕ್ರಮಗಳ ಆಚರಣೆಗೂ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದರು. ಅಲ್ಲದೇ ಯೋಗ ದಿನ ಮತ್ತು ಸ್ವಾತಂತ್ರ್ಯೋತ್ಸವ ಆಚರಿಸಲು ಮೈದಾನವನ್ನು ಬಳಸಿಕೊಳ್ಳುವಂತೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ತಾರಕ್ಕೇರಿದ ಈದ್ಗಾ ಮೈದಾನ ಮಾಲಿಕತ್ವ, 14 ವರ್ಷದ ಹಿಂದಿನ ಕಥೆ ಬಿಚ್ಚಿಟ್ಟ ಪ್ರಮೀಳಾ ನೇಸರ್ಗಿ

ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದಾದ ಈ ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು, ಬಿಬಿಎಂಪಿಗೆ ಪತ್ರ ಬರೆದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಹುದಾದ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದರು.

ಇದೀಗ ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ನೂಪುರ್‌ ಶರ್ಮಾ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರತೆ ಪಡೆದುಕೊಂಡಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಈದ್ಗಾ ಮೈದಾನದ ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಸುವಂತೆ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ 16 ಸಿಸಿ ಕ್ಯಾಮೆರಾಗಳನ್ನು ಚಾಮರಾಜಪೇಟೆಯ ಈದ್ಗಾ ಮೈದಾನದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಬಿಬಿಎಂಪಿ ಸಿಬ್ಬಂದಿ ಅಳವಡಿಸಿದರು. ಜೊತೆಗೆ ಯುಪಿಎಸ್‌, ಟಿವಿ, ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಪಾಲಿಕೆ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸಿಸಿ ಕ್ಯಾಮೆರಾಗೆ ಹಿಂದೂಗಳು, ನೆಲ ಅಗೆಯಲು ಮುಸ್ಲಿಮರ ವಿರೋಧ

ಈದ್ಗಾ ಮೈದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಇಷ್ಟುದಿನ ಇಲ್ಲದ ಸಿಸಿ ಕ್ಯಾಮೆರಾ ಈಗ ಯಾಕೆ’ ಎಂದು ಪ್ರಶ್ನಿಸಿದ ಅವರು, ‘ಮುಸ್ಲಿಮರ ರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಲ ಅಗೆಯಲು ಮುಸ್ಲಿಮರ ವಿರೋಧ:

ಅದೇ ರೀತಿ, ಮೈದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಜೆಸಿಬಿ ಸಹಾಯದಿಂದ ನೆಲ ಅಗೆಯುವ ಕಾರ್ಯಕ್ಕೆ ಮುಸ್ಲಿಂ ಸಮುದಾಯದ ಹಲವರು ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಮೈದಾನದಲ್ಲಿ ಬೇಲಿ ಅಳವಡಿಸಬಾರದು. ತಡೆಗೋಡೆ ಕೂಡ ಕಟ್ಟಬಾರದು. ವಿವಾದ ಇತ್ಯರ್ಥವಾಗುವವರೆಗೂ ಯಥಾಸ್ಥಿತಿಯಲ್ಲೇ ಮೈದಾನ ಇರಬೇಕು ಎಂದು ಆಗ್ರಹಿಸಿದರು.

Idgah Maidan ಯಾರ ಸ್ವತ್ತು? ತಾರಕ್ಕೇರಿದ ಮಾಲಿಕತ್ವ ವಿವಾದ

ಸಂಧಾನ:

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಮತ್ತು ಸ್ಥಳೀಯ ಪ್ರತಿಭಟನಾಕಾರರ ನಡುವೆ ಕೆಲವೊತ್ತು ವಾಗ್ವಾದ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಮತ್ತು ಕೆಲ ಹಿರಿಯ ಪೊಲೀಸ್‌ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯವನ್ನು ಮುಂದುವರೆಸಿತು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಉದ್ದೇಶಕ್ಕೆ 16 ಸಿಸಿ ಕ್ಯಾಮೆರಾ, ಲೈಟ್‌ ಅಳವಡಿಸಲಾಗಿದೆ. ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿದ್ದು, ಅವರ ನೇತೃತ್ವದಲ್ಲಿ ಬಿಬಿಎಂಪಿ ಸಿಬ್ಬಂದಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಮೈದಾನದಲ್ಲಿ ನಡೆಯುವ ಚಟುವಟಿಗಳನ್ನು ಪೊಲೀಸರು ಸರ್ವೇಕ್ಷಣೆ ನಡೆಸಲಿದ್ದಾರೆ ಅಂತ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್‌ ತಿಳಿಸಿದ್ದಾರೆ. 

Follow Us:
Download App:
  • android
  • ios