ಬನಶಂಕರಿ ಜಾತ್ರೆ: ವ್ಯಾಪಾರಸ್ಥರು ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು

ಬನಶಂಕರಿ ಜಾತ್ರೆಯ ವೇಳೆ ಅಹಿತಕರ ಘಟನೆಗಳಾಗಲಿ, ಅಪರಾಧಗಳಾಗಲಿ ಜರುಗದಂತೆ ಎಲ್ಲಾ ವ್ಯಾಪಾರಸ್ಥರು ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು|  ಯಾರು ಈ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅಂತಹ ಹೊಟೇಲ್‌, ಪೆಟ್ರೋಲ್‌ ಬಂಕ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಲೈಸೆನ್ಸ್‌ ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಪ್ರಾಸ್ತಾವಣೆ|

CC camera must be installed During Banashankari Fair in Badami

ಬಾದಾಮಿ(ಡಿ.13): ಜನವರಿ ತಿಂಗಳಲ್ಲಿ ಬನಶಂಕರಿ ಜಾತ್ರೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳಾಗಲಿ, ಅಪರಾಧಗಳಾಗಲಿ ಜರುಗದಂತೆ ಎಲ್ಲಾ ವ್ಯಾಪಾರಸ್ಥರು ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಅಪರಾಧಗಳನ್ನು ತಡೆಯಲು ತಪ್ಪಿತಸ್ಥರನ್ನು ಬಂಧಿಸಲು ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್‌ ಎಸ್‌.ಎಸ್‌.ಇಂಗಳೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ಕಾನೂನು ಸುವ್ಯವಸ್ಥೆ ಹಾಗೂ ಬನಶಂಕರಿ ಜಾತ್ರೆ ಮುಂಜಾಗ್ರತಾ ಕ್ರಮದ ಸಭೆಯಲ್ಲಿ ಮಾತನಾಡಿ, ವ್ಯಾಪಾರಸ್ಥರು ಅದರಲ್ಲಿ ಮುಖ್ಯ ರಸ್ತೆಯಲ್ಲಿರುವ ಅಂಗಡಿಗಳಲ್ಲ ಮುಂಭಾಗದಲ್ಲಿ ಮೂವತ್ತು ದಿನದ ಬ್ಯಾಕಪ್‌ ಹೊಂದಿರುವ ಸಿಸಿ ಅಳವಡಿಸಬೇಕು. ಯಾರು ಈ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅಂತಹ ಹೊಟೇಲ್‌, ಪೆಟ್ರೋಲ್‌ ಬಂಕ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಲೈಸೆನ್ಸ್‌ ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಪ್ರಾಸ್ತಾವಣೆ ಸಲ್ಲಿಸಲಾಗುವುದು ಎಂದರು.

ಪಿಎಸ್‌ಐ ಪ್ರಕಾಶ ಬಣಕಾರ ಮಾತನಾಡಿ, ಬನಶಂಕರಿ ಜಾತ್ರೆ ಸಮೀಪಿಸುತ್ತಿದ್ದು, ವಿವಿಧ ರಾಜ್ಯಗಳಿಂದ ಕಳ್ಳರು ಬಂದು ಕಳ್ಳತನ, ದರೋಡೆ ಮಾಡುವ ಶಂಕೆಯಿದ್ದು, ಬ್ಯಾಂಕಿನವರು ರಾತ್ರಿ ಹಣವನ್ನು ಸೇಫ್ಟಿ ಲಾಕರ್‌ನಲ್ಲಿ ಇಡಬೇಕು. ಎಲ್ಲಾ ವ್ಯಾಪಾರಸ್ಥರು ನಿಮ್ಮ ಅಂಗಡಿ ಮುಂದೆ ಸಾರ್ವಜನಿಕರು ಹೋಗುವ ರಸ್ತೆಯ ಸಂಪೂರ್ಣ ಚಿತ್ರ ಸೆರೆಯಾಗುವಂತೆ ಜೋಡಿಸಿ ಜಾತ್ರೆಯನ್ನು ಯಾವುದೇ ಅಪರಾಧಗಳು, ಅಹಿತಕರ ಘಟನೆಗಳು ಜರುಗದಂತೆ ಜೊತೆಗೆ ಆರೋಪಿಯನ್ನು ಹಿಡಿಯಲು ಅನುಕೂಲವಾಗುತ್ತದೆ ಎಂದು ಹೇಳಿದರು

ಪ್ರಾಚಾರ್ಯ ಆರ್‌.ಬಿ.ಸಂಕದಾಳ ಮಾತನಾಡಿ, ತಾಲೂಕಾಡಳಿತ ಹಾಗೂ ಪುರಸಭೆಯವರು ಬಾದಾಮಿ ಹೊಟೇಲ್‌ ಕೋರ್ಟ್‌ನಿಂದ ಹಿಡಿದು ಬನಶಂಕರಿಯವರೆಗೆ ರಾಮದುರ್ಗ ವೃತ್ತದಿಂದ ತಹಸೀಲ್ದಾರ್‌ ಕಚೇರಿಯವರೆಗೆ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಜೊತೆಗೆ ವಿವಿಧ ಬಡಾವಣೆಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಿ ಪೋಲಿಸರು ರಾತ್ರಿ 10 ರಿಂದ ಬೆಳಗ್ಗೆ 3 ಗಂಟೆಯವರೆಗೆ ಗಸ್ತು ತಿರುಗಬೇಕು. ಇದರಿಂದ ಕಳ್ಳತನಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು.

ಪುರಸಭಾ ಸದಸ್ಯ ಆರ್‌.ಎಫ್‌.ಬಾಗವಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ಎಲಿಗಾರ, ಸುವರ್ಣಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಪತ್ತಾರ, ವನಶ್ರೀ ಪೆಟ್ರೋಲಿಯಂ ಮಾಲೀಕ ರಮೇಶ ಹಾದಿಮನಿ, ಎಸ್‌.ಬಿ.ಎಂ ಮಹಾವಿದ್ಯಾಲಯದ ಪ್ರಾಚಾರ್ಯ ರವೀಂದ್ರ ಮೂಲಿಮನಿ, ತಾಲೂಕು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ, ತಾಪಂ ಇಒ ಪುನೀತ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿಪ್ರಕಾಶ, ಪುರಸಭೆ ಸದಸ್ಯೆ ರಾಮವ್ವ ಮಾದರ, ಬಿ.ವಿ.ಹಿರೇಮಠ, ಸೇರಿದಂತೆ ಹೋಟೇಲ್‌ ಮಾಲೀಕರು, ಪೇಟ್ರೋಲ್‌ ಬಂಕ ಮಾಲೀಕರು, ಸುವರ್ಣಕಾರರು, ವೈನ್ಸ್‌ಶಾಪ್‌ ಮಾಲೀಕರು ಸಾರ್ವಜನಿಕರು ಹಾಜರಿದ್ದರು. ಪೊಲೀಸ್‌ ಬಿ.ವಿ.ಹಿರೇಮಠ ನಿರೂಪಿಸಿ, ವಂದಿಸಿದರು.

ಜಾತ್ರೆ ನಿಮಿತ್ತ ಇಂದು ಅಧಿಕಾರಿಗಳ ಸಭೆ

ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಬಾದಾಮಿ-ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಜ. 10 ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ತಾಪಂ ಸಭಾಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಪುನೀತ ತಿಳಿಸಿದ್ದಾರೆ. 

ಈ ಸಭೆಯಲ್ಲಿ ಜಾತ್ರೆ ಯಶಸ್ವಿಗೆ ಕುರಿತಾದ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚಿಸುವುದರ ಜೊತೆಗೆ ಡಿ.16 ರಂದು ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಲಿರುವ ಸಭೆಯ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
 

Latest Videos
Follow Us:
Download App:
  • android
  • ios