ಮೈಸೂರು(ಜೂ.25): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಎಲ್ಲೆಡೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಇದು ಅಷ್ಟೊಂದು ಸುರಕ್ಷಿತವಲ್ಲ ಹಾಗೂ ಸಮಯ ಹೆಚ್ಚುಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮೈಸೂರಿನ ಉದ್ಯಮಿಯೊಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒಂದು ಕೇಂದ್ರದಲ್ಲಿ ಸಿಸಿ ಕ್ಯಾಮರಾ ಮಾದರಿಯ ಉಪಕರಣ ಬಳಸಲು ಮುಂದಾಗಿದ್ದಾರೆ.

ಮೂಲತಃ ಮೈಸೂರಿನವರೇ ಆದ, ಸಿಂಗಾಪುರ್‌, ಆಸ್ಪ್ರೇಲಿಯಾ ಮತ್ತಿತರ ಕಡೆ ವ್ಯವಹಾರ ಸಂಪರ್ಕ ಹೊಂದಿರುವ, ಆಸ್ಪ್ರೇಲಿಯಾ, ಸ್ವಿಜ್ಟರ್‌ಲ್ಯಾಂಡ್‌ನಲ್ಲಿ ಐದಾರು ವರ್ಷ ಇದ್ದು ಬಂದಿರುವ ಸಿಡಿಎಸ್‌ ವಿಷನ್‌ನ ವಿಶ್ವಾಸ್‌ ಈ ಉದ್ಯಮಿ.

ಚಿಕ್ಕಬಳ್ಳಾಪುರದಲ್ಲಿ ಕೋರ್ಟ್‌, 2 ಆಸ್ಪತ್ರೆ ಸೀಲ್‌ಡೌನ್‌..!

ನಗರ¨ ಅಶೋಕ ರಸ್ತೆಯ ಸಿಪಿಸಿ ಪಾಲಿಟೆಕ್ನಿಕ್‌ ಎದುರು ಇರುವ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಸುಮಾರು 250 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅಲ್ಲಿ ಸಿಸಿ ಕ್ಯಾಮರಾ ಮಾದರಿಯ ಈ ಉಪಕರಣವನ್ನು ವಿಶ್ವಾಸ್‌ ಹಾಕಿದ್ದಾರೆ. ಇದಕ್ಕೆ ಉತ್ತರ ವಲಯ ಬಿಇಒ ಡಿ. ಉದಯಕುಮಾರ್‌ ಅವರ ಅನುಮತಿ ಕೂಡ ಪಡೆದಿದ್ದಾರೆ. ಬಿಇಒ ಕೂಡ ಸಮಯ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ವಿನೂತನ ಪ್ರಯೋಗಕ್ಕೆ ಸಮ್ಮತಿಸಿದ್ದಾರೆ.

ಸರತಿ ಸಾಲಿನಲ್ಲಿ ಸಾಗುವ ಪ್ರತಿ ವಿದ್ಯಾರ್ಥಿಯ ಪೋಟೋ ಅಲ್ಲಿ ದಾಖಲಾಗುತ್ತಾ ಹೋಗುತ್ತದೆ. ಯಾವ ವಿದ್ಯಾರ್ಥಿಗೆ ಉಷ್ಣಾಂಶ ಹೆಚ್ಚಿದೆಯೇ ಅಂಥವರ ಫೋಟೋ ಮುಂದೆ ಮಾತ್ರ ಬಜರ್‌ (ಶಬ್ದ) ಬರುತ್ತದೆ. ಅಂಥವರಿಗೆ ಬದಲಿ ವ್ಯವಸ್ಥೆ ಮಾಡಬಹುದು.

ಕೊರೋನಾ ಕಂಟಕ: 'ಮಹಾರಾಷ್ಟ್ರದಿಂದ ಬಂದವರನ್ನು ಪರೀಕ್ಷೆ ಮಾಡಿ'

ವಿದೇಶಗಳಲ್ಲಿ ಈ ರೀತಿಯ ಉಪಕರಣ ಬಳಕೆ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಇನ್ನೂ ತಂತ್ರಜ್ಞಾನ ಅಷ್ಟೊಂದು ಮುಂದುವರಿದಿಲ್ಲ. ಹೀಗಾಗಿ ಕೈಯಲ್ಲಿಯೇ ಉಪಕರಣ ಹಿಡಿದು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಇದಕ್ಕೆ ಸಮಯ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ಸಿಸಿ ಕ್ಯಾಮರಾ ಮಾದರಿಯ ಉಪಕರಣ ಬಳಸಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ ಎನ್ನುತ್ತಾರೆ ವಿಶ್ವಾಸ್‌.

ನಾವು ಕಳೆದ 20 ವರ್ಷಗಳಿಂದ ಸಿಡಿಎಸ್‌ ವಿಷನ್‌ ಮೂಲಕ ಕ್ಯಾಮರಾಗಳು, ಶಾಲೆಗಳಿಗೆ ಬೇಕಾದ ಪರಿಕರಗಳ ಪೂರೈಕೆಯನ್ನು ಮಾಡುತ್ತಿದ್ದೇವೆ. ಖಾಸಗಿ ಸಂಸ್ಥೆಗಳು ಯಾವುದೇ ಪರಿಕರ ಬೇಕಾದರೂ ಖರೀದಿಸಬಹುದು. ಆದರೆ ಸರ್ಕಾರಿ ಶಾಲೆಗಳಿಗೆ ಇಲಾಖೆಯ ಮೂಲಕ ಖರೀದಿ ಮಾಡಬೇಕಾಗುತ್ತದೆ. ಹೀಗಾಗಿ ನಾವು ಮೊದಲ ಬಾರಿಗೆ ಸರ್ಕಾರಿ ಶಾಲೆಯಲ್ಲಿ ಈ ಪ್ರಯೋಗ ಮಾಡುತ್ತಿದ್ದೇವೆ ಎಂದರು.