ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.28): ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಇರುವ ಸರ್ಕಾರಿ ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ, ಅಲ್ಲಿ ರೋಗಿಗಳನ್ನು ವೈದ್ಯರು ತಪಾಸಣೆ ಮಾಡುವುದೇ ಇಲ್ಲ ಎನ್ನುವ ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್‌ ಅವರೇ ಪಿಪಿಇ ಕಿಟ್‌ ಹಾಕಿಕೊಂಡು ತಪಾಸಣೆ ನಡೆಸಿದ್ದರು. ಈಗ ಅಲ್ಲಿಯ ಅವ್ಯವಸ್ಥೆಯ ಮೇಲೆ ಕಣ್ಣಿಡಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ಸುಮಾರು 32 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ರೋಗಿಗಳನ್ನು ತಪಾಸಣೆ ಮಾಡುವುದರಿಂದ ಹಿಡಿದು ಕಾರಿಡಾರ್‌, ಆಸ್ಪತ್ರೆಯ ಅಂಗಳ ಹಾಗೂ ಬೆಡ್‌ ಇರುವ ಪ್ರದೇಶ ಸೇರಿದಂತೆ ವೆಂಟಿಲೇಟರ್‌ ಇರುವ ಸ್ಥಳವನ್ನು ಚಿತ್ರೀಕರಣ ಮಾಡುವಂತೆ ಸಿಸಿ ಕ್ಯಾ​ಮೆರಾ ಅಳವಡಿಸಲಾಗಿದೆ. ಈಗಾಗಲೇ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಇನ್ನೇನು ಕಾರ್ಯಾರಂಭ ಮಾಡುವುದು ಮಾತ್ರ ಬಾಕಿ ಇದೆ. ಈಗಾಗಲೇ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದ್ದು, ಸಣ್ಣ ಪುಟ್ಟ ಸಮಸ್ಯೆಗಳನ್ನು ನೀಗಿಸಿ, ಒಂದೆರಡು ದಿನಗಳಲ್ಲಿಯೇ ಸಿಸಿ ಕ್ಯಾಮೆರಾ ಪ್ರಾರಂಭಿಸಲಿದ್ದಾರೆ.

ಇದರಿಂದ ಕೋವಿಡ್‌ ಆಸ್ಪತ್ರೆಯಲ್ಲಿನ ಅಕ್ರಮ ಮತ್ತು ಅವ್ಯವಸ್ಥೆಗೆ ಬ್ರೇಕ್‌ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ರೋಗಿಗಳು ಇನ್ನು ಏನೇ ಕೂಗಿಕೊಂಡರೂ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗುತ್ತದೆ. ಅಲ್ಲದೆ ಈ ಸಿಸಿ ಕ್ಯಾಮೆರಾಗಳು ಸೆರೆ ಹಿಡಿಯುವುದು ಟಿವಿ ಪರದೆಯ ಮೇಲೆ ಕಾಣುತ್ತಿರುತ್ತದೆ. ಇದರ ಮೇಲೆ ನಿಗಾ ಇಡಲು ವಿಶೇಷ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ.

ಕೊಪ್ಪಳ: ಕೊರೋನಾ ರೋಗಿಗಳಿಗೆ ನೆರೆಹೊರೆಯವರು ಧೈರ್ಯತುಂಬಿ, ಗವಿ​ಶ್ರೀ

ಸಿಸಿ ಕ್ಯಾಮೆರಾದಲ್ಲಿ ಏನಾದರೂ ತೊಂದರೆಯಾಗುತ್ತಿರುವುದು ಕಂಡುಬಂದರೂ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತದೆ. ವೈದ್ಯರ ಸುತ್ತಾಟ, ರೋಗಿಯ ತಪಾಸಣೆ ಸೇರಿದಂತೆ ಎಲ್ಲವೂ ಎಳೆ ಎಳೆಯಾಗಿ ಮಾಹಿತಿ ದಾಖಲಾಗಲಿದೆ.

ಸಿಬ್ಬಂದಿ ಮೇಲೆಯೂ ನಿಗಾ

ಇನ್ನು ಕೇವಲ ವೈದ್ಯರು ಮತ್ತು ನರ್ಸ್‌ಗಳ ಮೇಲೆ ಮಾತ್ರ ನಿಗಾ ಇಡುತ್ತಿಲ್ಲ. ಇದಲ್ಲದೆ ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಇತರೆ ಸಿಬ್ಬಂದಿ ಮೇಲೆಯೂ ನಿಗಾ ಇಡಲಿಕ್ಕಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಮೃತದೇಹವನ್ನು ಹಸ್ತಾಂತರ ಮಾಡುವುದು, ಪ್ಯಾಕ್‌ ಮಾಡುವುದು ಸೇರಿದಂತೆ ಮೊದಲಾದ ಪ್ರಕ್ರಿಯೆ ನಡೆಸುವ ವೇಳೆಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತದೆ ಎನ್ನುವ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಇತರ ಸಿಬ್ಬಂದಿ ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ವಿಚಿತ್ರ ಘಟನೆ...

ಕೋವಿಡ್‌ ಆಸ್ಪತ್ರೆಯ ಅವಾಂತರಕ್ಕೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಇದು ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕೊಪ್ಪಳ ತಾಲೂಕಿನ ಗ್ರಾಮವೊಂದರ ವ್ಯಕ್ತಿ ಕೋವಿಡ್‌ನಿಂದ ಮರಣ ಹೊಂದಿದ್ದರು. ಇದಾದ ಮೇಲೆ ಮೃತದೇಹ ತೆಗೆದುಕೊಂಡು ಹೋಗುವ ಕುರಿತು ದೊಡ್ಡ ರಾದ್ಧಾಂತವಾಗುತ್ತದೆ. ಕುಟುಂಬದವರ ಒತ್ತಾಯದ ಮೇರೆ ಹಸ್ತಾಂತರ ಮಾಡಲಾಗುತ್ತದೆ. ಹೀಗೆ ಹಸ್ತಾಂತರ ಮಾಡಿದ ಮೃತದೇಹವನ್ನು ಅವರ ಕುಟುಂಬದವರೇ ಪಿಪಿಇ ಕಿಟ್‌ ಹಾಕಿಕೊಂಡು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲು ಮುಂದಾಗುತ್ತಾರೆ. ಅಲ್ಲಿಗೆ ಬಂದ ಮೃತನ ಸಂಬಂಧಿಕರ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ವಿರುದ್ಧ ಮೃತದೇಹ ತಂದಿದ್ದವರ ಮೇಲೆ ಹರಿಹಾಯುತ್ತಾರೆ. ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಪಿಪಿಇ ಕಿಟ್‌ ಹಾಕಿಕೊಂಡಿದ್ದ ಅವರ ಸಂಬಂಧಿಕರೇ, ಆಸ್ಪತ್ರೆಯವರು ಯಾರು ಬಂದಿಲ್ಲ, ನಾವೇ ತಂದಿದ್ದು ಎಂದು ಪಿಪಿಇ ಕಿಟ್‌ ತೆರೆದು ತೋರಿಸಿದಾಗಲೇ ಗೊತ್ತಾಗಿದ್ದು.

ಕೋವಿಡ್‌ ಆಸ್ಪತ್ರೆಯ ನಿರ್ವಹಣೆಯ ಕುರಿತು ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಒಳಗೆಯೂ ಸಹ ನಿಗಾ ಇಡಲಾಗುತ್ತದೆ. ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಈ ಕ್ರಮ ಎಂದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ ಸುರಳ್ಕರ್‌ ಅವರು ತಿಳಿಸಿದ್ದಾರೆ.