ಬೆಂಗಳೂರು(ಫೆ.26): ಪಾಲಿಕೆಯ ಎಲ್ಲಾ ಕಚೇರಿ ಒಳ ಹಾಗೂ ಹೊರ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿ ಬಿಬಿಎಂಪಿ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. 

ಬಿಬಿಎಂಪಿಯ ಪ್ರಮುಖ ಮಾಹಿತಿ ಹಾಗೂ ದಾಖಲೆಗಳ ಗೌಪ್ಯತೆ ಕಾಪಾಡುವುದು ಅಧಿಕಾರಿ- ಸಿಬ್ಬಂದಿಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿಯ ಆಡಳಿತ ಶಾಖೆ, ಕಾಮಗಾರಿ, ಕಂದಾಯ, ಲೆಕ್ಕಪತ್ರ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲೆ ಹಾಗೂ ಮಾಹಿತಿಗಳು ಸೋರಿಕೆಯಾಗುತ್ತಿರುವ ಬಗ್ಗೆ ಕನ್ನಡ ದಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರಿಂದ ಬಿಬಿಎಂಪಿಯ ಘನತೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ, ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುವಂತೆ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಆಯುಕ್ತರು ಸೂಚಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರೊಂದಿಗೆ ಸಂಜೆ 7 ಗಂಟೆಯ ನಂತರ ಸಿಬ್ಬಂದಿ ಕಚೇರಿ ಕೆಲಸ ಮಾಡಬಾರದು. ತುರ್ತು ಸಂದರ್ಭ ಅಥವಾ ಅನಿವಾರ್ಯ ಕಾರಣಗಳಿಂದ ಸಂಜೆ 7ರ ಮೇಲೆ ಕೆಲಸ ಮಾಡಬೇಕಾಗಿದ್ದರೆ ಆಯಾ ಇಲಾಖೆಯ ಮುಖ್ಯಸ್ಥರೊಂದಿಗೆ ಲಿಖಿತ ಅನುಮತಿ ಪಡೆಯಬೇಕು. 
ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಜತೆಗೆ ಪಾಲಿಕೆಯ ಅಧಿಕಾರಿಗಳು ನಿಗದಿತ ಅವಧಿಯ ಒಳಗೆ ಕಚೇರಿಗೆ ಹಾಜರಾಗಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. 
ಭದ್ರತಾ ಸಿಬ್ಬಂದಿ ಪಾಲಿಕೆಯ ಕಚೇರಿಯ ಆವರಣ ದಲ್ಲಿ ಸಂಜೆ 7ರ ನಂತರ ಯಾವುದೇ ಅನಧಿಕೃತ (ಪಾಲಿಕೆ ಸದಸ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ) ವಾಹನಗಳು ಹಾಗೂ ಸಾರ್ವಜನಿಕರು ಪಾಲಿಕೆಯ ಆವರಣ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಆಯುಕ್ತ. ಅನಿಲ್‌ಕುಮಾರ್ ನಿರ್ದೇಶನ ನೀಡಿದ್ದಾರೆ. 

ಆಯುಕ್ತರು ನೀಡಿದ ಇನ್ನಿತರ ಸೂಚನೆಗಳು

*ಸಂಜೆ 7ರ ನಂತರ ಸಿಬ್ಬಂದಿಯು ಕಚೇರಿಯಲ್ಲಿ ಕೆಲಸ ಮಾಡುವಂತಿಲ್ಲ 
* ಒಂದು ವೇಳೆ ಕಚೇರಿ ಕೆಲಸ ಇದ್ದರೆ ಅಧಿಕಾರಿಗಳ ಅನುಮತಿ ಕಡ್ಡಾಯ 
* ಸಿಬ್ಬಂದಿಯು ನಿಗದಿತ ಸಮಯಕ್ಕೆ ಕಚೇರಿಗೆ ಬರಬೇಕು 
* ಸಿಬ್ಬಂದಿ ಸಾರ್ವ ಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು