ಫೋನ್ ಕದ್ದಾಲಿಕೆ : ಮತ್ತಷ್ಟು ಅಧಿಕಾರಿಗಳಿಗೆ ಎದುರಾಗಿದೆ ಸಂಕಷ್ಟ
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇದೀಗ ಇನ್ನಷ್ಟು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಹಲವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನಿಡಲಾಗಿದೆ.
ಬೆಂಗಳೂರು [ಅ.04] : ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆ ಮುಂದುವರೆದಂತೆ ತನಿಖೆಯ ಜಾಲವೂ ವಿಸ್ತಾರವಾಗುತ್ತಿದ್ದು, ಈಗ ಸಿಸಿಬಿ ತನಿಖೆಗೆ ವರ್ಗಾವಣೆಗೊಂಡಿದ್ದ ಅಪರಾಧ ಪ್ರಕರಣಗಳ ಹಳೇ ತನಿಖಾಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ಜಾರಿಗೊಳಿಸಿದೆ.
ಕಳೆದ 2018ರ ಜೂನ್ 1ರಿಂದ 2019ರ ಜೂನ್‌ವರೆಗೆ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ, ದರೋಡೆ, ವಂಚನೆ ಹಾಗೂ ಅಪಹರಣ ಸೇರಿದಂತೆ ಕೆಲವು ಪ್ರಮುಖ ಕೃತ್ಯಗಳ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಈ ಪ್ರಕರಣಗಳು ವರ್ಗಾವಣೆಗೆ ಮುನ್ನ ಆಯಾ ಸ್ಥಳೀಯ ಠಾಣೆಗಳ ಪೊಲೀಸರು, ಪ್ರಾಥಮಿಕ ಹಂತದ ತನಿಖೆ ನಡೆಸಿದ್ದರು. ಹೀಗಾಗಿ ಕೃತ್ಯ ನಡೆದ ಪ್ರಾಥಮಿಕ ಹಂತದ ಕರೆಗಳ ಕದ್ದಾಲಿಕೆ ಹಾಗೂ ಆನಂತರದ ಕದ್ದಾಲಿಕೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಹಳೇ ತನಿಖಾಧಿಕಾರಿಗಳಿಗೆ ಸಿಬಿಐ ಬುಲಾವ್ ನೀಡಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಜಿಲ್ಲಾ ಸದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ನೋಟಿಸ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 20ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳಿಗೆ ಆತಂಕ ಉಂಟಾಗಿದ್ದು, ತಾವು ನಡೆಸಿದ್ದ ಪ್ರಾಥಮಿಕ ತನಿಖೆ ಕುರಿತು ವರದಿ ಮಂಡನೆಗೆ ಅವರು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಕದ್ದಾಲಿಕೆ ಪ್ರಕರಣದಲ್ಲಿ ಸಿಸಿಬಿ ಮುಖ್ಯಸ್ಥರಾಗಿ ಅಲೋಕ್ ಕುಮಾರ್, ಎಸಿಪಿಗಳಾದ ಬಿ.ಬಲರಾಜ್, ವೇಣುಗೋಪಾಲ್, ರಾಮಚಂದ್ರಯ್ಯ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಮಿರ್ಜಾ ಅಲಿ, ಬಿ.ಆರ್.ಯತಿರಾಜ್, ಎಂ.ಆರ್.ಹರೀಶ್, ಮಂಜುನಾಥ್ ಹಾಗೂ ಮಾಲತೇಶ್ ಸೇರಿ ಹಲವು ಮಂದಿಗೆ ಸಿಬಿಐ ಹೇಳಿಕೆ ಪಡೆದಿದೆ.
ಸಿಬಿಐ ನೋಟಿಸ್: 2018ರ ಜೂನ್‌ನಲ್ಲಿ ಗೋವಿಂದರಾಜ ನಗರದ ಖಾಸಗಿ ಶಾಲಾ ಮಾಲಿಕ ಭದ್ರಯ್ಯ ಅಪಹರಣದಲ್ಲಿ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಭರತ್ ಅವರಿಗೆ ಸಿಬಿಐ ನೋಟಿಸ್ ನೀಡಿದೆ. ಈ ಕೃತ್ಯದ ಪ್ರಾಥಮಿಕ ತನಿಖೆ ನಡೆಸಿದ್ದ ಭರತ್, ಕುಖ್ಯಾತ ಶಸ್ತ್ರಾಸ್ತ್ರ ಪೂರೈಕೆದಾರ ಲಕ್ಷ್ಮಣ್ ಪೂಜಾರಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. ಬಳಿಕ ಪ್ರಕರಣವು ಸಿಸಿಬಿಗೆ ವರ್ಗಾವಣೆಗೊಂಡಿತ್ತು. ಅದೇ ರೀತಿ ಕುಖ್ಯಾತ ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಮಹಾಲಕ್ಷ್ಮೇ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ಅವರಿಗೆ ಸಿಬಿಐ ತನಿಖೆ ಬಿಸಿ ತಟ್ಟಿದೆ.
ಅದೇ ರೀತಿ ಅನ್ನಪೂಣೇಶ್ವರಿ ನಗರ ಠಾಣೆ ಇನ್‌ಸ್ಪೆಕ್ಟರ್ ಲಿಂಗರಾಜು ಅವರಿಗೆ ರೌಡಿ ರಾಜೇಶ್ ಮೇಲಿನ ಗುಂಡಿನ ದಾಳಿ ಪ್ರಕರಣ ಹಾಗೂ ರಾಜರಾಜೇಶ್ವರಿ ನಗರ ಠಾಣೆ ಇನ್‌ಸ್ಪೆಕ್ಟರ್ ಕೃಷ್ಣ ಲಮಾಣಿ ಅವರಿಗೆ ಕೊಲೆ ಕೃತ್ಯವೊಂದರಲ್ಲಿ ಮೊಬೈಲ್ ಕರೆಗಳ ಕದ್ದಾಲಿಕೆ ನಡೆಸಿದ್ದ ಸಂಬಂಧ ಸಿಬಿಐ ನೋಟಿಸ್ ಜಾರಿಗೊಳಿಸಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಇಂಜಾಜ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ಠಾಣೆಯ ಇನ್‌ಸ್ಪೆಕ್ಟರ್‌ಗೂ ಸಿಬಿಐ ತನಿಖೆಗೆ ಹಾಜರಾಗುವಂತೆ ತಿಳಿಸಿದೆ ಎನ್ನಲಾಗಿದೆ. ಇಂಜಾಜ್ ವಂಚನೆ ಕೃತ್ಯದ ತನಿಖೆ ವೇಳೆಯ ನಡೆಸಿದ್ದ ಕದ್ದಾಲಿಕೆ ಆಡಿಯೋ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು.
ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಡಿ.ಜೆ.ಹಳ್ಳಿ ಹಾಗೂ ಆರ್.ಟಿ.ನಗರ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಅಜ್ಮೇರಾ ಕಂಪನಿಯ ಮೋಸದ ಕೃತ್ಯದಲ್ಲಿ ಜಯನಗರ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಅಮ್ಮಿಸ್ ವೆಂಚರ್ಸ್ ಕಂಪನಿಯ ಮೋಸದ ಕೃತ್ಯದಲ್ಲಿ ತಿಲಕನಗರ ಠಾಣೆ ಇನ್‌ಸ್ಪೆಕ್ಟರ್ ಹಾಗೂ 2017ರಲ್ಲಿ ಯಶವಂತಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಯಲಹಂಕ ಇನ್‌ಸ್ಪೆಕ್ಟರ್ ಮತ್ತು ಎಸಿಪಿ ಅವರಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಆದಿಚುಂಚನಗಿರಿ ಶ್ರೀ ಕರೆ ಕದ್ದಾಲಿಸಿದವರ ವಿಚಾರಣೆ
ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಎಸಿಪಿ ರಾಮಚಂದ್ರಯ್ಯ ಹಾಗೂ ಸಿಸಿಬಿ ಇನ್‌ಸ್ಪೆಕ್ಟರ್ ಎಂ.ಆರ್.ಹರೀಶ್ ಅವರನ್ನು ಸಿಬಿಐ ಗುರುವಾರ ದಿನವೀಡಿ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ. ರೌಡಿ ಲಕ್ಷ್ಮಣ ಕೊಲೆ, ಗೋವಿಂದರಾಜ ನಗರದ ಖಾಸಗಿ ಶಾಲೆ ಮಾಲಿಕ ಭದ್ರಯ್ಯ ಅಪಹರಣ ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಹರೀಶ್ ಕದ್ದಾಲಿಕೆ ನಡೆಸಿದ್ದರು.
ರಕ್ತ ಚಂದನ ಕಳ್ಳ ಸಾಗಾಣಿಕೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ವಿಶೇಷ ವಿಚಾರಣ ದಳದ ಎಸಿಪಿ ಆಗಿದ್ದ ರಾಮಚಂದ್ರಯ್ಯ ಅವರು, ಸುಮಾರು 180 ಮೊಬೈಲ್ ಕರೆಗಳನ್ನು ಕದ್ದಾಲಿಸಿದ್ದರು. ಇದರಲ್ಲಿ ಆದಿಚುಂಚನಗಿರಿ ಮಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಅವರ ಮೊಬೈಲ್ ಸಂಖ್ಯೆಯನ್ನು ಸಹ ರಕ್ತಚಂದನ ಕಳ್ಳ ಸಾಗಣೆ ಪ್ರಕರಣದ ಆರೋಪಿಗಳ ನಂಟು ಹೊಂದಿದ್ದ ವ್ಯಕ್ತಿಗಳ ಪಟ್ಟಿಸೇರಿಸಿ ಕದ್ದಾಲಿಸಲಾಗಿತ್ತು ಎಂಬ ಆರೋಪ ಬಂದಿದೆ.