ಮೈಸೂರು (ಅ.27):  ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ಸೋಮವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಾಂಪ್ರದಾಯಿಕವಾಗಿ ವಿಜಯದಶಮಿ ಪೂಜೆ ಮತ್ತು ಬನ್ನಿಪೂಜೆ ನೆರವೇರಿಸಿದರು.

ಅರಮನೆಯಲ್ಲಿ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‌, ಆಯುಧಪೂಜೆ ಮತ್ತು ವಿಜಯದಶಮಿ ಮೆರವಣಿಗೆಯು ನವರಾತ್ರಿಯ ಪ್ರಮುಖ ಆಚರಣೆ. ಆಯುಧಪೂಜೆ ನೆರವೇರಿಸಿದ ಬಳಿಕ ಸಂಪ್ರದಾಯದಂತೆ ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನೆರವೇರಬೇಕಿತ್ತು. ಆದರೆ ಈ ಬಾರಿ ಕೋವಿಡ್‌ ಕಾರಣದಿಂದ ಮತ್ತು ಹೆಚ್ಚು ಮಂದಿ ಸೇರಬಾರದು ಎಂಬ ಕಾರಣದಿಂದ ವಜ್ರಮುಷ್ಠಿ ಕಾಳಗ ರದ್ದುಪಡಿಸಲಾಗಿದೆ.

ಪಟ್ಟದ ಕತ್ತಿ ಮತ್ತಿತರ ಆಯುಧಗಳೊಂದಿಗೆ ಯದುವೀರ್‌ ಅವರು ಭುವನೇಶ್ವರಿ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದಾಗ ಆಯುಧಗಳನ್ನು ಇರಿಸುವ ಗಾಡಿಯ ಎತ್ತುಗಳು ಬೆದರಿ ಓಡಿದ ಘಟನೆ ನಡೆಯಿತು. ದೇವಾಲಯದ ಮುಂದೆ ನಿಂತಿದ್ದ ಹಸುಗಳು ಬೆದರಿ ಓಡಿದವು. ಈ ವೇಳೆ ಯದುವೀರ್‌ ಅವರು ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸುತ್ತಿದ್ದರು.

ದೇವಸ್ಥಾನದ ಮುಂದೆ ನಿಂತಿದ್ದ ಹಸುಗಳು ಬೆದರಿ ಸ್ವಲ್ಪದೂರ ಓಡಿದ್ದೆ ತಡ, ಸಮೀಪದಲ್ಲಿಯೇ ನಿಂತಿದ್ದ ಆನೆಗಳು ಗೀಳಿಟ್ಟವು. ಕೂಡಲೇ ಹಸುಗಳ ಪಾಲಕರು ಹಸುಗಳನ್ನು ನಿಯಂತ್ರಿಸಿದರು. ಆಯುಧಗಳ ಗಾಡಿಯಿಂದ ಹಸುಗಳನ್ನು ಬಿಡಿಸಿ, ಅವುಗಳು ಶಾಂತಗೊಂಡ ಬಳಿಕವೇ ಮತ್ತೆ ಗಾಡಿಗೆ ಕಟ್ಟಿದರು.