ಹುಬ್ಬಳ್ಳಿ[ಡಿ.26]: ಇಲ್ಲಿನ ತಾರಿಹಾಳ ಟೋಲನಾಕಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ಗ್ಯಾಸ್‌ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮುಂಬೈ ಉದ್ಯಮಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ಮಹೇಂದ್ರ ಕೆಂಗನಗೌಡರ (51) ಎಂಬುವವರೇ ಮೃತಪಟ್ಟ ದುರ್ದೈವಿ. ಇವರ ಪತ್ನಿ ಯಶೋದಾ ತೀವ್ರವಾಗಿ ಗಾಯಗೊಂಡಿದ್ದು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹೇಂದ್ರ ಮೂಲತಃ ಕೆ.ಆರ್‌. ಪೇಟೆ ತಾಲೂಕಿನ ಯಲಾದಹಳ್ಳಿಯವರು. ಮುಂಬೈನಲ್ಲಿ ಜವಳಿ ಹಾಗೂ ಹೋಟೆಲ್‌ ಉದ್ಯಮ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಮುಂಬೈನಿಂದ ಇನ್ನೋವಾ ಕಾರಿನಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ತಮ್ಮ ಊರಿಗೆ ತೆರಳುತ್ತಿದ್ದರು.

ತಾರಿಹಾಳ ಟೋಲನಾಕಾ ಬಳಿ ಎದುರಿಗೆ ಹೋಗುತ್ತಿದ್ದ ಗ್ಯಾಸ್‌ ಟ್ಯಾಂಕರ್‌ಗೆ ಇವರ ಕಾರು ಡಿಕ್ಕಿ ಹೊಡಿದಿದೆ. ಅದರ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಮಹೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ, ಮಕ್ಕಳಿಗೆ ತರಚಿದ ಗಾಯಗಳಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಕುರಿತು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.