Asianet Suvarna News Asianet Suvarna News

ವಿವಾದಿತ ಎಪಿಎಂಸಿ ಸುಗ್ರೀವಾಜ್ಞೆಗೆ ಸಂಪುಟ ಅಸ್ತು

ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಲು ಹಾಗೂ ಖಾಸಗಿಯವರು ಸಹ ಮಾರುಕಟ್ಟೆಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ನೀಡುವ ವಿವಾದಾತ್ಮಕ ಅಂಶಗಳನ್ನು ಒಳಗೊಂಡ ಎಪಿಎಂಸಿ ತಿದ್ದುಪಡಿ ಕಾಯಿದೆ-2020 ಕುರಿತ ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಅನುಮೋದನೆ ದೊರೆತಿದೆ.

Cabinet approves apmc act amendment ordinance
Author
Bangalore, First Published May 15, 2020, 8:51 AM IST

ಬೆಂಗಳೂರು(ಮೇ 15): ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಲು ಹಾಗೂ ಖಾಸಗಿಯವರು ಸಹ ಮಾರುಕಟ್ಟೆಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ನೀಡುವ ವಿವಾದಾತ್ಮಕ ಅಂಶಗಳನ್ನು ಒಳಗೊಂಡ ಎಪಿಎಂಸಿ ತಿದ್ದುಪಡಿ ಕಾಯಿದೆ-2020 ಕುರಿತ ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಅನುಮೋದನೆ ದೊರೆತಿದೆ. ರೈತಪರ ಸಂಘಟನೆಗಳು ಹಾಗೂ ಪ್ರತಿಪಕ್ಷಗಳ ವಿರೋಧ ಲೆಕ್ಕಿಸದೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಮೇ 5ರಂದು ಕೇಂದ್ರ ಸರ್ಕಾರ ಕಳುಹಿಸಿದ್ದ ಮಾದರಿ ಕಾಯಿದೆ ಅನುಸರಿಸಿ ರಾಜ್ಯ ಕಾಯಿದೆಯ ಎರಡು ಪ್ರಮುಖ ಅಂಶಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಸಂಬಂಧಿ ಕಡತವನ್ನು ಭಾನುವಾರ ರಾಜ್ಯಪಾಲ ವಿ.ಆರ್‌. ವಾಲಾ ಅವರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವಂತೆ ಕಡತವನ್ನು ವಾಲಾ ಅವರು ವಾಪಸು ಕಳುಹಿಸಿದ್ದರು. ಹೀಗಾಗಿ ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎರಡು ತಿದ್ದುಪಡಿಗಳೊಂದಿಗೆ ಅನುಮೋದನೆ ನೀಡಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಈಗ ಈ ನಿರ್ಣಯವು ರಾಜ್ಯಪಾಲ ಪುನಃ ಅಂಗಳಕ್ಕೆ ಹೋಗಿದೆ.

ಸುಗ್ರೀವಾಜ್ಞೆಯಲ್ಲೇನಿದೆ?:

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಧುಸ್ವಾಮಿ ಅವರು, ‘ಎಪಿಎಂಸಿ ಮಾರುಕಟ್ಟೆಗಳಲ್ಲೇ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕು ಹಾಗೂ ಖರೀದಿದಾರರು ಅಲ್ಲೇ ಖರೀದಿಸಬೇಕು ಎಂಬ ನಿಯಮಕ್ಕೆ ತಿದ್ದುಪಡಿ ಮಾಡಿದ್ದೇವೆ. ಇದರಿಂದ ರೈತರು ತಮಗೆ ಇಷ್ಟಬಂದವರಿಗೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಯಾರು ಬೇಕಾದರೂ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡಬಹುದು. ತಾಲೂಕು ಮಟ್ಟದ ಕೃಷಿ ಮಾರುಕಟ್ಟೆಸಮಿತಿಗಳು ಇಂತಹ ಖರೀದಿ ಹಾಗೂ ಮಾರಾಟದ ಮೇಲಿನ ನಿಯಂತ್ರಣ ಕಳೆದುಕೊಳ್ಳಲಿವೆ. ಮಾರುಕಟ್ಟೆಆವರಣದಲ್ಲಿನ ವ್ಯವಹಾರಗಳಿಗೆ ಮಾತ್ರ ಅವರ ಅಧಿಕಾರ ಸೀಮಿತವಾಗಲಿದೆ’ ಎಂದು ಹೇಳಿದರು.

 

ಆದರೆ, ‘ರಾಜ್ಯ ಮಟ್ಟದ ಕೃಷಿ ಮಾರುಕಟ್ಟೆಮಂಡಳಿಯ ನಿರ್ದೇಶನಾಲಯವು ಇಡೀ ರಾಜ್ಯದಲ್ಲಿನ ಯಾವುದೇ ಖರೀದಿ ಹಾಗೂ ಮಾರಾಟದ ಮೇಲೆ ನಿಗಾ ವಹಿಸಬಹುದು. ರೈತರಿಂದ ಖಾಸಗಿ ವ್ಯಕ್ತಿಗಳು ಉತ್ಪನ್ನಗಳನ್ನು ಖರೀದಿ ಮಾಡಬೇಕಾದರೂ ಮೊದಲು ಮಂಡಳಿ ಬಳಿ ನಿರ್ದಿಷ್ಟಹಣ ಠೇವಣಿ ಇಟ್ಟು ಪರವಾನಗಿ ಪಡೆಯಬೇಕು. ಇಲ್ಲದಿದ್ದರೆ ಅಂತಹವರಿಗೆ ಖರೀದಿಗೆ ಅವಕಾಶ ನೀಡುವುದಿಲ್ಲ. ಅಲ್ಲದೆ ವಿದ್ಯುನ್ಮಾನ ತೂಕದ ಯಂತ್ರವನ್ನು ಬಳಸಿಯೇ ತೂಕ ಮಾಡಬೇಕು ಎಂದು ಷರತ್ತು ವಿಧಿಸಿದ್ದೇವೆ’ ಎಂದರು.

ಖಾಸಗಿಯವರಿಗೂ ಮಾರುಕಟ್ಟೆಸ್ಥಾಪನೆಗೆ ಅನುಮತಿ:

‘ಎಪಿಎಂಸಿ ಮಾರುಕಟ್ಟೆಗಳ ಮಾದರಿಯಲ್ಲಿ ಖಾಸಗಿಯವರು ಸ್ವಂತ ಮಾರುಕಟ್ಟೆಸ್ಥಾಪಿಸಿ ನಿರ್ವಹಣೆ ಮಾಡಿಕೊಳ್ಳಲು ಸಹ ಅವಕಾಶ ನೀಡಲಾಗುವುದು. ಯಾವುದೇ ಖಾಸಗಿ ವ್ಯಕ್ತಿಗಳಿಗೆ ಅರ್ಹತೆ ಇದ್ದರೆ ಮಾರುಕಟ್ಟೆಗಳನ್ನು ಸ್ಥಾಪಿಸಲು ಅಡ್ಡಿಯಿಲ್ಲ. ಇದರಿಂದ ರೈತರು ಯಾವ ಮಾರುಕಟ್ಟೆಯಲ್ಲಿ ಬೇಕಾದರೂ ಉತ್ಪನ್ನ ಮಾರಾಟ ಮಾಡಲು ಸ್ವತಂತ್ರರಾಗುತ್ತಾರೆ’ ಎಂದರು.

‘ಈಗಾಗಲೇ ರಿಲಯನ್ಸ್‌, ಮೋರ್‌ ಮತ್ತಿತರ ಕಂಪೆನಿಗಳು ರೈತರಿಂದ ನೇರವಾಗಿ ಖರೀದಿ ಮಾಡುವ ಕೆಲಸ ಮಾಡುತ್ತಿವೆ. ಅದು ನಿಯಮ ಬಾಹಿರವಾಗಿದ್ದು ಅದನ್ನು ಸಕ್ರಮಗೊಳಿಸಲಾಗುತ್ತಿದೆ’ ಎಂದರು.

ರೈತರಿಗೆ ಅನುಕೂಲ: ಮಾಧುಸ್ವಾಮಿ

ಉತ್ಪನ್ನ ಮಾರಾಟಕ್ಕೆ ರೈತರು ಸ್ವತಂತ್ರರಾಗಲಿದ್ದು ಆದಾಯ ಹೆಚ್ಚಾಗಲಿದೆ. 2020ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯಕ್ಕೆ ಬೆಂಬಲ ಸಿಕ್ಕಂತಾಗುತ್ತದೆ ಎಂದು ಸುಗ್ರೀವಾಜ್ಞೆ ತೀರ್ಮಾನವನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಸಮರ್ಥಿಸಿಕೊಂಡರು.

ತಿದ್ದುಪಡಿಯಿಂದ ಎಪಿಎಂಸಿ ಮಾರುಕಟ್ಟೆಗಳಿಂದ ಸರ್ಕಾರಕ್ಕೆ ಬರುತ್ತಿದ್ದ ಸುಂಕದ ಆದಾಯ ಕಡಿಮೆಯಾಗಲಿದೆ. ಆದರೆ, ಇದು ರೈತರಿಗೆ ವರ್ಗಾವಣೆ ಮಾಡುವ ಉದ್ದೇಶದಿಂದ ತಿದ್ದುಪಡಿ ಮಾಡಿದ್ದೇವೆ. ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್‌ ತೆಗೆದುಕೊಳ್ಳಬಾರದು ಎಂಬ ನಿಯಮ ಇತ್ತು. ಆದರೆ, ಬಹುತೇಕ ಕಡೆ ತೆಗೆದುಕೊಳ್ಳುತ್ತಿದ್ದರು. ರೈತರಿಗೆ ಶೋಷಣೆ ಆಗುತ್ತಿತ್ತು ಎಂದು ಮಾಧುಸ್ವಾಮಿ ಹೇಳಿದರು.

ಕೇಂದ್ರ ಸರ್ಕಾರ ಮಾದರಿ ಕಾಯಿದೆ ಕಳುಹಿಸಿ ತುರ್ತಾಗಿ ತಿದ್ದುಪಡಿ ಮಾಡುವಂತೆ ಸೂಚಿಸಿತ್ತು. ಹೀಗಾಗಿ ಯಾರ ಅಭಿಪ್ರಾಯವನ್ನೂ ಕೇಳಲಾಗಲಿಲ್ಲ. ಕೇಂದ್ರ ನಮಗೆ ಕಾಲಾವಕಾಶ ನೀಡಿರಲಿಲ್ಲ. ಹೀಗಾಗಿ ತುರ್ತಾಗಿ ಮಾಡಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು.

ಸುಗ್ರೀವಾಜ್ಞೆಯಲ್ಲೇನಿದೆ?

- ಎಪಿಎಂಸಿ ಮಾರುಕಟ್ಟೆಗಳಲ್ಲೇ ರೈತರು ಉತ್ಪನ್ನ ಮಾರಬೇಕೆಂಬ ನಿಯಮಕ್ಕೆ ತಿದ್ದುಪಡಿ

- ಎಪಿಎಂಸಿಯಲ್ಲೇ ಖರೀದಿದಾರರು ಖರೀದಿಸಬೇಕು ಎಂಬ ನಿಯಮವೂ ರದ್ದು

- ರೈತರು ತಮಗೆ ಇಷ್ಟಬಂದವರಿಗೆ ಉತ್ಪನ್ನ ಮಾರಾಟ ಮಾಡಬಹುದು

- ಯಾರು ಬೇಕಾದರೂ ರೈತರಿಂದ ನೇರವಾಗಿ ಉತ್ಪನ್ನ ಖರೀದಿ ಮಾಡಬಹುದು

- ಖರೀದಿ, ಮಾರಾಟದ ಮೇಲೆ ಎಪಿಎಂಸಿಗಳಿಗೆ ನಿಯಂತ್ರಣ ಇಲ್ಲ

- ಖಾಸಗಿಯವರು ಅರ್ಹತೆ ಇದ್ದರೆ ಸ್ವಂತ ಮಾರುಕಟ್ಟೆಸ್ಥಾಪಿಸಿಕೊಳ್ಳಲು ಅವಕಾಶ

- ಖಾಸಗಿಯವರು ಮಾರುಕಟ್ಟೆನಿರ್ದೇಶನಾಲಯದ ಅನುಮತಿ ಪಡೆದು ಖರೀದಿಸಬೇಕು

- ಖರೀದಿಗೆ ವಿದ್ಯುನ್ಮಾನ ತೂಕದ ಯಂತ್ರ ಬಳಕೆ ಆಗಬೇಕು

ಆತಂಕವೇನು?

- ಎಪಿಎಂಸಿ ಮಾರುಕಟ್ಟೆಗಳು ನಿಧಾನವಾಗಿ ಬಾಗಿಲು ಹಾಕುವ ಸ್ಥಿತಿಗೆ ಬರಲಿವೆ

- ಮಾರುಕಟ್ಟೆವ್ಯವಸ್ಥೆ ಕ್ರಮೇಣ ಸರ್ಕಾರದಿಂದ ಖಾಸಗಿಗಳ ಕೈಗಳಿಗೆ ಜಾರಲಿದೆ

- ತಾಲೂಕು ಮಟ್ಟದಲ್ಲಿ ಖಾಸಗಿ ವರ್ತಕರಿಂದ ರೈತರ ಮೇಲೆ ಶೋಷಣೆ ಉಂಟಾಗಬಹುದು

- ಮಧ್ಯವರ್ತಿಗಳ ಮೂಲಕ ಕಾರ್ಪೊರೇಟ್‌ ಕಂಪೆನಿಗಳು ಹಳ್ಳಿಗಳನ್ನು ನಿಯಂತ್ರಿಸುವಂತಾಗಬಹುದು

- ಖಾಸಗಿಯವರೇ ಮಾರುಕಟ್ಟೆನಿರ್ಮಿಸಿಕೊಳ್ಳಲು ಅವಕಾಶವಾಗಲಿದೆ

- ವರ್ತಕರಿಂದ ಹಣ, ತೂಕ ಮತ್ತಿತರ ವಂಚನೆಗಳು ಉಂಟಾಗಬಹುದು

Follow Us:
Download App:
  • android
  • ios