ಅರಭಾವಿ ಕ್ಷೇತ್ರಕ್ಕೆ 860 ಕೋಟಿ ಬಂಪರ್: ಬಾಲಚಂದ್ರ ಜಾರಕಿಹೊಳಿ
ಎರಡು ಯೋಜನೆಗಳಿಗೆ ಸಂಪುಟ ಸಭೆ ಅಸ್ತು ಸಿಎಂ, ಸಚಿವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ
ಗೋಕಾಕ(ಡಿ.23): ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿನಿಧಿಸುವ ಅರಭಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಒಟ್ಟು 860 ಕೋಟಿ ಮೊತ್ತದ ಎರಡು ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ .475 ಕೋಟಿ ಮತ್ತು ಘಟಪ್ರಭಾ ನದಿಯಿಂದ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ .385 ಕೋಟಿ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆಯನ್ನು ಸೂಚಿಸಿದ್ದು, ಇದರಿಂದ ಅರಭಾಂವಿ ಕ್ಷೇತ್ರಕ್ಕೆ .860 ಕೋಟಿ ಕಾಮಗಾರಿಗೆ ಸಚಿವ ಸಂಪುಟ ಅಸ್ತು ನೀಡಿದೆ.
ಅರಭಾವಿ ಕ್ಷೇತ್ರದ ಮೆಳವಂಕಿ ಹಾಗೂ ಇತರೆ 118 ಗ್ರಾಮಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅನುಷ್ಠಾನಗೊಳ್ಳಲಿದೆ. ಈ ಯೋಜನೆಯಿಂದ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರಿನ ಭವಣೆ ನೀಗಿದಂತಾಗಿದೆ. ಗೋಕಾಕ ತಾಲೂಕಿನ 86 ಮತ್ತು ಮೂಡಲಗಿ ತಾಲೂಕಿನ 32 ಗ್ರಾಮಗಳ ಜನವಸತಿಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಿದಂತಾಗಿದೆ.
ಸತೀಶ್ ಜಾರಕಿಹೊಳಿಯವರು ನಮ್ಮ ಸಮಾಜದ ವಿರೋಧಿ ಅಲ್ಲ: ಮರಾಠಾ ಸಮಾಜದ ಮುಖಂಡರ ಬೆಂಬಲ
ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 20 ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ .385 ಕೋಟಿ ಕಾಮಗಾರಿ ನಡೆಯಲಿದ್ದು, ಸುಣಧೋಳಿ ಗ್ರಾಮದ ಹತ್ತಿರ ಪಂಪಹೌಸ್ ಅನ್ನು ನಿರ್ಮಿಸಿ ಘಟಪ್ರಭಾ ನದಿಯಿಂದ 47.60 ಎಂಸಿಎಫ್‌ಟಿ ನೀರನ್ನೆತ್ತಿ ಲಕ್ಷ್ಮೇಶ್ವರ, ತಪಸಿ, ಗೋಸಬಾಳ, ಬಿಲಕುಂದಿ, ಮನ್ನಿಕೇರಿ, ಕಳ್ಳಿಗುದ್ದಿ, ಹೊನಕುಪ್ಪಿ, ಕುಲಗೋಡ, ಢವಳೇಶ್ವರ, ವೆಂಕಟಾಪೂರ, ಹೊಸಯರಗುದ್ರಿ, ರಡ್ಡೇರಟ್ಟಿಮತ್ತು ಕೌಜಲಗಿ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ 20 ಕೆರೆಗಳಿಗೆ ಒಳಹರಿವಿನ ಅಭಾವದಿಂದ ನೀರಿನ ಸಂಗ್ರಹಣೆಯಾಗದೇ ಇರುವುದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟಅಭಿವೃದ್ಧಿಪಡಿಸುವಂತೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದರು.
ಪಂಚಮಸಾಲಿ ಅಹೋರಾತ್ರಿ ಧರಣಿ ವಾಪಸ್: ತಾತ್ಕಾಲಿಕವಾಗಿ ಹಿಂತೆಗೆತ
ಅರಭಾವಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದ್ದಾರೆ.
ಅರಭಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಒಟ್ಟು .860 ಕೋಟಿ ಮೊತ್ತದ ಎರಡು ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟುಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಾಯಕವಾಗಿದೆ. ಕ್ಷೇತ್ರಕ್ಕೆ ಯೋಜನೆ ಜಾರಿಯಾಗಲು ಸಹಕರಿಸಿ, ಕೊಡುಗೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಕೃತಜ್ಞತೆಗಳು ಅಂತ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.