* ಕಾಂಗ್ರೆಸ್‌ ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸ್ಥಾನಮಾನ * ಬಿಜೆಪಿ ಸರ್ಕಾರಕ್ಕೆ ಸಾಮಾಜಿಕ ಕಳಕಳಿ ಇಲ್ಲ* ಖಾಸಗಿ ಕಂಪನಿಗಳೇ ದೇಶವನ್ನಾಳುವ ಪರಿಸ್ಥಿತಿ ನಿರ್ಮಾಣವಾಗುತ್ತೆ   

ಹರಪನಹಳ್ಳಿ(ಆ.23):ಕಾಂಗ್ರೆಸ್‌ ಪಕ್ಷದ್ದು ಪ್ರಚಾರ ಕಡಿಮೆ, ಕೆಲಸ ಜಾಸ್ತಿ, ಆದರೆ, ಬಿಜೆಪಿಯದ್ದು ಕೆಲಸ ಕಡಿಮೆ, ಪ್ರಚಾರ ಜಾಸ್ತಿ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ ಟೀಕಿಸಿದ್ದಾರೆ. 

ಪಟ್ಟಣದ ಬಾಣೕರಿಯ ಬೈಪಾಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ತಾಲೂಕಿನ ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಿ. ಪ್ರೇಮ್‌ ಕುಮಾರ್‌ ಗೌಡ ಅವರಿಗೆ ನೇಮಕಾತಿ ಆದೇಶ ಪ್ರತಿ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮಗೆ ಪಕ್ಷದ ಹೈಕಮಾಂಡ್‌ ಅಂತಿಮವಾಗಿದ್ದು, ಪ್ರೇಮ್‌ ಕುಮಾರ್‌ ಅವರನ್ನು ಪಕ್ಷ ನೇಮಕ ಮಾಡಿದ್ದು ಅವರು ಪಕ್ಷದ ಪರ ಕೆಲಸ ಮಾಡಬೇಕು. ತಾಲೂಕಿನ ಎಲ್ಲ ಮುಖಂಡರ ವಿಶ್ವಾಸಗಳಿಸಿ ಗ್ರಾಮ ಪಂಚಾಯ್ತಿ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದೆ ತೆರೆದಿಡಬೇಕು ಎಂದು ಸೂಚಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ. ರಾಜಶೇಖರ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಸಾಮಾಜಿಕ ಕಳಕಳಿ ಇಲ್ಲ. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಲಿದ್ದು, ರೈತರ, ಮಧ್ಯಮ ವರ್ಗದವರ, ಬಡವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಹೀಗೆ, ಮುಂದುವರಿದರೆ ಖಾಸಗಿ ಕಂಪನಿಗಳೇ ದೇಶವನ್ನಾಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ವಾರ್ಡ್‌ ಸಮಿತಿ ರಚಿಸದಿದ್ರೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಜಾ : ಡಿಕೆಶಿ ಎಚ್ಚರಿಕೆ

ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಪಿ. ಪ್ರೇಮ್‌ ಕುಮಾರ್‌ ಗೌಡ ಮಾತನಾಡಿ, ಪಕ್ಷ ನನಗೆ ನೀಡಿರುವ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಹಿಸುತ್ತೇನೆ. ನಮ್ಮ ತಂದೆ ಕಾಂಗ್ರೆಸ್‌ ಪಕ್ಷವನ್ನು ಅಪ್ಪಿಕೊಂಡು ಕೆಲಸ ಮಾಡಿದ ಹಾಗೆ ನಾನೂ ಅವರ ಹಾದಿಯಲ್ಲೇ ಸಾಗಿ ಎಲ್ಲರ ವಿಶ್ವಾಸ ಗಳಿಸಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದರು.

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಪಿ. ಪೋಮ್ಯಾ ನಾಯ್ಕ್‌ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ ಮತನಾಡಿ, ಕಾಂಗ್ರೆಸ್‌ ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸ್ಥಾನಮಾನ ನೀಡುತ್ತಲಿದ್ದು, ದಲಿತ ಮತ್ತು ದಮನಿತರ ಪಕ್ಷವಾಗಿದೆ. ಎಲ್ಲ ಕೋಮಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಳ್ಳಿ-ಹಳ್ಳಿಗೆ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂದು ಪ್ರೇಮ್‌ ಕುಮಾರ್‌ಗೆ ಕಿವಿಮಾತು ಹೇಳಿದರು.

ಕೆಪಿಸಿಸಿ ಯುವ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಟಿ. ಭರತ್‌, ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ಸದಸ್ಯ ಶಶಿಧರ್‌ ಪೂಜಾರ್‌, ಮುಖಂಡರಾದ ಎಂ.ಟಿ.ಬಿ. ಯಶವಂತಗೌಡ, ಮತ್ತಿಹಳ್ಳಿ ಅಜ್ಜಪ್ಪ, ಟಿಎಪಿಸಿಎಂಎಸ್‌ ನಿರ್ದೇಶಕರಾದ ತಿಮ್ಮಾನಾಯ್ಕ್‌, ಗಿಡ್ಡಳ್ಳಿ ನಾಗರಾಜ್‌, ಲಾಟಿ ಸಲೀಂ, ರಿಯಾಜ್‌ ಅಹ್ಮದ್‌, ಕೆ. ಚಂದ್ರಶೇಖರ, ಸಾಸ್ವಿಹಳ್ಳಿ ನಾಗರಾಜ್‌, ನಂದಿ ಬೇವೂರು ಎನ್‌.ಪ್ರಭು, ಟಿ. ಪ್ರವೀಣ್‌ ಕುಮಾರ್‌, ಎಂ. ಮಾಂತೇಶ್‌ ನಾಯ್ಕ್‌,, ಶ್ರೀಕಾಂತ್‌ ಯಾದವ್‌, ಹರಪನಹಳ್ಳಿ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್‌. ಮಜೀದ್‌, ಚಿಗಟೇರಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನೂರುದ್ದಿನ್‌, ಮತ್ತಿಹಳ್ಳಿ ಸೋಮನಾಥ, ಸಮಿವುಲ್ಲ, ಬಸವರಾಜ್‌ ಬಂಡಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.