ಅಫಜಲ್ಪುರ [ಜ.06]:  ತಾಲೂಕಿನ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಹೈದ್ರಾ ಗ್ರಾಮಕ್ಕೆ ಕೊನೆಗೂ 6 ವರ್ಷಗಳ ನಂತರ ಅಪಜಲ್ಪುರ ಘಟಕದಿಂದ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಪುನಃ ಆರಂಭವಾಗಿದೆ. ಪ್ರಸ್ತುತ ಅಪಜಲ್ಪುರ ಘಟಕದ ಬಸ್ ಊರಿಗೆ ಬಂದಾಗ ಊರ ಮಂದಿ ಏಕಾಏಕಿ ಹಿರಿಹಿರಿ ಹಿಗ್ಗಿದರು. ಗ್ರಾಮಕ್ಕೆ ಆಗಮಿಸಿದ ಬಸ್‌ಗೆ ಗ್ರಾಮಸ್ಥರು ಖುಷಿಯಿಂದ ಹೂವಿನ ಅಲಂಕಾರ ಮಾಡಿ ಸ್ವಾಗತಿಸಿ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು. ಗ್ರಾಮಕ್ಕೆ ಬಸ್ ಪುನಃ ಸಂಚಾರ ಆರಂಭವಾಗಿದ್ದು ಗ್ರಾಮ ದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

 ಈ ಮೊದಲು ಇದೇ ಘಟಕದಿಂದ ಹೈದ್ರಾ ಗ್ರಾಮಕ್ಕೆ ಬಸ್ ಬರುತ್ತಿತ್ತು. ಆದರೆ ಕಾರಣಾಂತರಗಳಿಂದ ಗ್ರಾಮದ ರಸ್ತೆ ಸರಿಯಾಗಿಲ್ಲ ಎಂದು ಹೇಳಿ ಇದ್ದಕ್ಕಿದ್ದಂತೆ ಅಪಜಲ್ಪುರ ಘಟಕದಿಂದ ಬರುತ್ತಿದ್ದ ಬಸ್ ಸೌಲಭ್ಯ, ಕಳೆದ 6 ವರ್ಷಗಳಿಂದ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಏನು ಮಾಡುವುದು ನಿಮ್ಮ ಗ್ರಾಮಕ್ಕೆ ಬಸ್ ಬಿಡಬೇಕೆಂದರೆ ಗ್ರಾಮದ ರಸ್ತೆ ಸರಿಯಾಗಿಲ್ಲ. ಸರಿಯಾದ ರಸ್ತೆ ನಿರ್ಮಾಣ ಮಾಡಿದರೆ ಮಾತ್ರ ನಿಮ್ಮ ಗ್ರಾಮಕ್ಕೆ ಸ್ಥಗಿತಗೊಂಡಿದ್ದ ಬಸ್ ಸೌಲಭ್ಯ ಆರಂಭಿಸಲಾಗುವುದು ಎಂದು ಹಾರಿಕೆ ಉತ್ತರ ಕೊಡುತ್ತಿದ್ದರು. ಕಳೆದ ೬ ವರ್ಷಗಳಿಂದ ಗ್ರಾಮಸ್ಥರು ಬಸ್ ಬಿಡುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ 
ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿದ ಶಾಸಕ: ನಿಯಮ ಉಲ್ಲಂಘಿಸಿದ್ರೂ ಹಾರಿಕೆಯ ಉತ್ತರ!...

ಈ ಕುರಿತು ಶಾಸಕ ಎಂ.ವೈ. ಪಾಟೀಲ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಅರುಣಕುಮಾರ್ ಎಂ. ಪಾಟೀಲ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಹೈದ್ರಾ ಗ್ರಾಮ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಗ್ರಾಮವಾಗಿದ್ದು, ಪವಿತ್ರ ಯಾತ್ರಾ ಸ್ಥಳವಾಗಿದೆ. ಗ್ರಾಮದಲ್ಲಿರುವ ಹಜರತ್ ಖ್ವಾಜಾ ಸೈಪನ್ ಮುಲ್ಕ ಚುಸ್ತಿ ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮಾವಾಸ್ಯೆಯಂದು ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಜಮಖಂಡಿ ಘಟಕದ ಬಸ್ ವಾಪಸ್ ಜಮಖಂಡಿಗೆ ಹೋಗಿ ಮರಳಿ ಹೈದ್ರಾ ಗ್ರಾಮಕ್ಕೆ ಬರುವಷ್ಟರಲ್ಲಿ ತುಂಬಾ ಸಮಯ ಬೇಕಾಗುತ್ತದೆ.

ಇದರಿಂದ ಹಜರತ್ ಖ್ವಾಜಾ ಸೈಪನ್ ಮುಲ್ಕ ದರ್ಗಾಕ್ಕೆ ಬರುವ ಭಕ್ತರಿಗೆ, ಗ್ರಾಮಸ್ಥರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ತುಂಬಾ ತೊಂದರೆ ಯಾಗುತ್ತಿದೆ. ಆದಷ್ಟು ಬೇಗನೆ ಹೈದ್ರಾ ಗ್ರಾಮಕ್ಕೆ ಬಸ್ ಸೌಲಭ್ಯ ಪ್ರಾರಂಭಿಸುವಂತೆ ಅ ಧಿಕಾರಿಗಳಿಗೆ ಹೇಳಿದ್ದರು. ಶಾಸಕರ ಆದೇಶಕ್ಕೆ ಸ್ಪಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಸ್ ಸೇವೆ ಆರಂಭಿಸಿದ್ದಾರೆ. ಗ್ರಾಮಕ್ಕೆ ಬಸ್ ಸೌಲಭ್ಯ ಅವಕಾಶ ಕಲ್ಪಿಸಿದ್ದಕ್ಕಾಗಿ ಶಾಸಕರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.