ಕೂಡ್ಲಿಗಿ(ಆ.27): ರಸ್ತೆಯ ಪಕ್ಕದಲ್ಲಿ ಕಬ್ಬಿಣದ ರಾಡುಗಳಿರುವ ಕಂಟೈನರ್‌ ಲಾರಿಗೆ ಕುಷ್ಟಗಿ ಘಟಕದ ಸಾರಿಗೆ ಸಂಸ್ಥೆಯ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್‌ ಚಾಲಕ, ನಿರ್ವಾಹಕ ಹಾಗೂ ಮೂವರು ಪ್ರಯಾಣಿಕರು ಸೇರಿ 5 ಜನರಿಗೆ ಗಾಯಗಳಾಗಿರುವ ಘಟ​ನೆ ಮಂಗಳವಾರ ಮಧ್ಯರಾತ್ರಿ ಕೂಡ್ಲಿಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಅಪಘಾತದಲ್ಲಿ ಬಸ್‌ ಕಂಡಕ್ಟರ್‌ ಶರಣಪ್ಪ, ಚಾಲಕ ಶೇಖರಗೌಡ, ಪ್ರಯಾಣಿಕರಾದ ಕೂಡ್ಲಿಗಿಯ ನಾಗರಾಜ, ದಾವಣಗೆರೆಯ ಬಸವರಾಜ, ಕುಷ್ಟಗಿ ಬಸವರಾಜ ಅವರಿಗೆ ಗಾಯಗಳಾಗಿವೆ. ಬಸ್‌ ಕಂಡಕ್ಟರ್‌ ಶರಣಪ್ಪ ಅವರಿಗೆ ಮಾತ್ರ ಕಬ್ಬಿಣದ ರಾಡುಗಳು ಹೊಟ್ಟೆ ಭಾಗ ಮತ್ತು ತೊಡೆಗೆ ಸಿಲುಕಿ ತೀವ್ರಗಾಯಗೊಂಡಿದ್ದರಿಂದ ಕಟ್ಟರ್‌ ಯಂತ್ರ ತಂದು ರಾಡುಗಳನ್ನು ಕಟ್‌ ಮಾಡಿ ಶರಣಪ್ಪ ಅವರನ್ನು ಹೊರತೆಗೆಯಲಾಯಿತು. ಆನಂತರ ಕೂಡ್ಲಿಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಯಿತು.

ಬಳ್ಳಾರಿ: ಕಮಲಾಪುರದ ಝೂಗೆ ಬಿಳಿ ಹುಲಿ ಆಗ​ಮ​ನ

ಘಟನೆ ವಿವರ

ಕುಷ್ಟಗಿ ಸಾರಿಗೆ ಘಟಕದ ಬಸ್‌ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಕೂಡ್ಲಿಗಿ ಹೊರವಲದಲ್ಲಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶಿವಕುಮಾರ ಡಾಬಾದ ಹತ್ತಿರ ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ಬಲಗಡೆ ರಸ್ತೆಯಲ್ಲಿ ಹೋಗಬೇಕಿದ್ದ ಕಾರು ಎದುರಿಗೆ ಬಂದಿದೆ. ಬಸ್‌ ಚಾಲಕ ಎಡಕ್ಕೆ ತೆಗೆದುಕೊಂಡಾಗ ಯಾವುದೇ ಸಿಗ್ನಲ್‌ ಇಲ್ಲದೆ ಸಂಚಾರಕ್ಕೆ ಅಡ್ಡಲಾಗಿ ನಿಲ್ಲಿಸಿದ ಕಬ್ಬಿಣದ ರಾಡು ತುಂಬಿರುವ ಲಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿ ಲಾರಿಯಲ್ಲಿದ್ದ ಕಬ್ಬಿಣದ ರಾಡುಗಳು ಬಸ್ಸಿನೊಳಕ್ಕೆ ನುಗ್ಗಿತು. ಬಸ್‌ನ ಮುಂದಿನ ಭಾಗದಲ್ಲಿಯೇ ಕುಳಿತಿದ್ದ ಕಂಡಕ್ಟರ್‌ ದೇಹವನ್ನು ಸಹ ಕಬ್ಬಿಣದ ರಾಡುಗಳು ಹೊಕ್ಕಿದೆ. ಬಸ್‌ ಚಾಲಕ ಹಾಗೂ ಲಾರಿ ಚಾಲಕನ ವಿರುದ್ಧ ಬಸ್ಸಿನಲ್ಲಿದ್ದ  ಪ್ರಯಾಣಿಕ, ಗಾಯಾಳು ಕೂಡ್ಲಿಗಿ ನಾಗರಾಜ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಡಕ್ಟರ್‌ ಹೊರತೆಗೆಯಲು ಸ್ಥಳೀಯರ ಹರಸಾಹಸ

ಬಸ್‌ನ ಎಡಭಾಗದಲ್ಲಿ ಮುಂದೆಯೇ ಕುಳಿತಿದ್ದ ಕಂಡಕ್ಟರ್‌ ದೇಹದೊಳಕ್ಕೆ ಕಬ್ಬಿಣದ ರಾಡ್‌ಗಳು ಹೊಕ್ಕಿವೆ. ಈ ರಾಡುಗಳನ್ನು ಹೊರ ತೆಗೆಯಲು ಮಧ್ಯರಾತ್ರಿ ಹರಸಾಹಸಪಡಬೇಕಾಯಿತು. ದೇಹದಲ್ಲಿದ್ದ ಕಬ್ಬಿಣ ರಾಡ್‌ಗಳನ್ನು ಕಿತ್ತರೆ ಅಪಾಯವಾಗಬಹುದೆಂದು ತಿಳಿದ ಕಾವೇರಿ ನಗರದ ಸ್ಥಳೀಯರು, ಹರಸಾಹಸ ಮಾಡಿ ರಾಡುಗಳನ್ನು ಕಟ್‌ ಮಾಡಿ ರಾಡುಗಳನ್ನು ದೇಹದಲ್ಲಿ ಉಳಿಸಿ ಬಸ್‌ ಕಂಡಕ್ಟರ್‌ನನ್ನು ಹೊರತೆಗೆದರು. ಇತರ ಗಾಯಾಳುಗಳನ್ನು 108ರ ಆ್ಯಂಬುಲೆನ್ಸ್‌ ಮೂಲಕ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಂಡಕ್ಟರ್‌ ದೇಹಹೊಕ್ಕ ರಾಡ್‌ ತೆಗೆಯುವ ಸಂದರ್ಭದಲ್ಲಿ ತೊಡಗಿದ್ದ ಸ್ಥಳೀಯ ಒಂದಿಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.