ದಂಡ ತಪ್ಪಿಸಲು ಬುಲೆಟ್‌ಗೆ ಸ್ಕೂಟಿಯ ನೋಂದಣಿ ಸಂಖ್ಯೆ ಹಾಕಿದ..!
ನಕಲಿ ನೋಂದಣಿ ಸಂಖ್ಯೆ ಇದ್ದ ಬುಲೆಟ್‌ನ್ನು ಮೈಸೂರಿನ ಸಂಚಾರ ಪೊಲೀಸರು ವಶಪಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಮೈಸೂರು(ಡಿ.09): ತನ್ನ ಬುಲೆಟ್‌ಗೆ ನಕಲಿ ನೋಂದಣಿ ಸಂಖ್ಯೆ ಹಾಕಿಕೊಂಡು ಚಾಲನೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಬುಲೆಟ್ ಅನ್ನು ಮೈಸೂರಿನ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆ.ಜಿ. ಕೊಪ್ಪಲು ನಿವಾಸಿ ನಾಗೇಂದ್ರ ಎಂಬವರ ಪುತ್ರ ರವಿ ನಕಲಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬಿದ್ದವರು. ಕುವೆಂಪುನಗರದ ಡಿ. ಚಂದ್ರು ಅವರ ಡಿಯೋ ಸ್ಕೂಟರ್ ನಂ. ಕೆಎ- 09, ಎಚ್‌ಜೆ-0597 ವಿರುದ್ದ ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ 39 ನೋಟಿಸ್ ಬಂದಿದ್ದು, ಈ ಸಂಬಂಧ ಪೊಲೀಸ್ ಆಯುಕ್ತರ ಕಚೇರಿಯ ಟ್ರಾಫಿಕ್ ಮೇನೆಜ್‌ಮೆಂಟ್ ವಿಭಾಗದಲ್ಲಿ ಫೋಟೊ ಪರಿಶೀಲಿಸಿದಾಗ ಬುಲೆಟ್ ಸವಾರನೊಬ್ಬ ಡಿಯೋ ಸ್ಕೂಟರ್‌ನ ನೊಂದಣಿ ಸಂಖ್ಯೆ ಕೆಎ-09, ಎಚ್‌ಜೆ-0597 ಯನ್ನು ತನ್ನ ಬುಲೆಟ್ ಬೈಕ್‌ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿದೆ. ಈ ಬುಲೆಟ್ ಹೆಚ್ಚಾಗಿ ಪಡುವಾರಹಳ್ಳಿ ವೃತ್ತದ ಬಳಿ ಓಡಾಡುತ್ತಿರುವುದು ತಿಳಿದು ಬಂದ ಮೇರೆಗೆ ಬುಲೆಟ್ ಸವಾರನ ಮೇಲೆ ಕ್ರಮ ಕೈಗೊಳ್ಳುವಂತೆ ಚಂದ್ರು ಅವರು ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.
ತಾಳಿ ಕಟ್ಟೋ ಶಾಸ್ತ್ರ ಮುಗಿದ ಮೇಲೆ ಮೇಲೆ ಅಪ್ರಾಪ್ತೆ ಮದುವೆಗೆ ತಡೆದ್ರು
ಈ ದೂರಿನ ಮೇರೆಗೆ ಬುಲೆಟ್ ಪತ್ತೆಗೆ ಎಲ್ಲಾ ಸಂಚಾರ ಪೊಲೀಸರಿಗೆ ತಿಳಿಸಿದ್ದು, ಎನ್.ಆರ್. ಸಂಚಾರ ಠಾಣೆಯ ಪೊಲೀಸರು, ಇರ್ವಿನ್ ರಸ್ತೆಯಲ್ಲಿ ಬುಲೆಟ್ ಪತ್ತೆ ಮಾಡಿ, ವಾಹನದ ಆರ್‌ಸಿ ಪುಸ್ತಕವನ್ನು ಪರೀಶೀಲಿಸಿದಾಗ ಬುಲೆಟ್ ಅಸಲಿ ವಾಹನ ಸಂಖ್ಯೆ ಕೆಎ 09- ಎಚ್‌ಜೆ 3597 ಆಗಿತ್ತು. ಆದರೆ, ಬುಲೆಟ್ ಸವಾರ ರವಿ, ತನ್ನ ಬುಲೆಟ್ ಮುಂಭಾಗ ಮತ್ತು ಹಿಂಭಾಗ ಹೊಂಡಾ ಡಿಯೋ ಸ್ಕೂಟರ್ ಸಂಖ್ಯೆ ಕೆಎ09- ಎಚ್‌ಜೆ 0597ರ ನೊಂದಣಿ ಸಂಖ್ಯೆ ಅಳವಡಿಸಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿ, ಬುಲೆಟ್ ಮತ್ತು ವಾಹನದ ಮಾಲೀಕ ರವಿಯನ್ನು ಮುಂದಿನ ಕ್ರಮಕ್ಕಾಗಿ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು, ಶಿವಮೊಗ್ಗದಲ್ಲಿ ಕಂಬಳ ನಡೆಸಲು ಚಿಂತನೆ: ಡಿಸಿಎಂ
ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ನಗರದ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಡಿಸಿಪಿ ಬಿ.ಟಿ. ಕವಿತಾ, ಸಂಚಾರ ಉಪ ವಿಭಾಗದ ಎಸಿಪಿ ಸಂದೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಎನ್.ಆರ್. ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಆರ್. ದಿವಾಕರ್, ಸಿಬ್ಬಂದಿ ಕಲೀಂ ಪಾಷ, ನಾಗೇಶ್ ಈ ಪತ್ತೆ ಮಾಡಿದ್ದಾರೆ.
ಈ ಸ್ಥಾನಗಳ ಮೇಲೆ ಉಚ್ಚಾಟಿತ ಮುಖಂಡರ ಕಣ್ಣು
ವಾಹನಗಳ ನೊಂದಣಿ ಸಂಖ್ಯೆಯನ್ನು ನಕಲಿಯಾಗಿ ಉಪಯೋಗಿಸುವುದು ಕಾನೂನು ಬಾಹಿರವಾಗಿದ್ದು, ಕ್ರಿಮಿನಲ್ ಸ್ವರೂಪದ ಅಪರಾಧವಾಗಿದೆ. ಈ ರೀತಿಯಾಗಿ ನಕಲಿ ನೊಂದಣಿ ಸಂಖ್ಯೆಯನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ನಕಲಿ ನಂಬರ್ ಉಪಯೋಗಿಸುತ್ತಿರುವುದು ಕಂಡ ಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ.