ಬೆಂಗಳೂರು, (ಜೂನ್.15): ಮಂಡ್ಯ ಜಿಲ್ಲೆಯಲ್ಲಿ ಜಲಸಮಾಧಿಯಾದ ಏಳು ಮಂದಿಗೆ 22 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. 

ಸಿಎಂ ಪರಿಹಾರ ನಿಧಿಯಿಂದ ಒಟ್ಟು 22 ಲಕ್ಷ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿದ್ದಾರೆ. 

ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯ ಗೀತಾ, ಕು.ಸವಿತಾ ಹಾಗೂ ಕು.ಸೌಮ್ಯ ಅವರಿಗೆ ತಲಾ 5 ಲಕ್ಷ ರೂ.ಗಳು ಹಾಗೂ ಇದೇ ತಾಲೂಕಿನ ಚೋಳಸಂದ್ರ ಗ್ರಾಮದ ರಶ್ಮಿ ಮತ್ತು ಇಂಚರಾ, ಕೆ.ಆರ್.ಪೇಟೆ ತಾಲ್ಲೂಕಿನ ಹುಳಿ ಗಂಗನಹಳ್ಳಿಯ ಮಾಸ್ಟರ್ ಅಭಿಷೇಕ್ ಮತ್ತು ಆದಿಹಳ್ಳಿಯ ಕುಮಾರ್ ಅವರುಗಳಿಗೆ ತಲಾ 2 ಲಕ್ಷ ರೂ.ಗಳನ್ನು ಪರಿಹಾರ ನಿಧಿಯಿಂದ ತುರ್ತಾಗಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಮಂಡ್ಯ; ಬಟ್ಟೆ ತೊಳೆಯಲು ತೆರಳಿದ್ದ ತಾಯಿ, ಇಬ್ಬರು ಮಕ್ಕಳು ನೀರು ಪಾಲು

ಜೂನ್ 14ರಂದು ಒಂದೇ ದಿನ ಮಂಡ್ಯ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಬರೋಬ್ಬರಿ ಏಳು ಮಂದಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. 

ನಾಗಮಂಗಲ ತಾಲೂಕಿನ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38) ಮತ್ತು ಮಕ್ಕಳಾದ ಸವಿತಾ (19), ಸೌಮ್ಯ (14) ಎನ್ನುವರು ಕೆರೆ ಬಟ್ಟೆ ತೊಳೆಯಲು ಹೋಗಿ ನೀರುಪಾಲಾಗಿದ್ದರು.

ಅದೇ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೋಳಸಂದ್ರ ಗ್ರಾಮದ ರಶ್ನಿ (23) ಮತ್ತು ಇಂಚರ ( 7) ಬಟ್ಟೆ ಒಗೆಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ರು.

ಮತ್ತೊಂದು ಪ್ರಕರಣದಲ್ಲಿ  ಕೆರೆಯಲ್ಲಿ ಮುಳುಗು ಬಾಲಕ ಅಭಿಷೇಕ್ (15) ಮತ್ತು ಕುಮಾರ್ (27) ಮೃತಪಟ್ಟಿದ್ದರು.

ಒಟ್ಟು ಮೂರು ಪ್ರತ್ಯೇಕ ಘಟನೆಯಲ್ಲಿ ನಿನ್ನೆ (ಭಾನುವಾರ) ಏಳು ಜನರು ಜಲಸಮಾಧಿಯಾಗಿದ್ದರು. ಇದೀಗ ಈ ಏಳು ಜನರ ಕುಟುಂಬಕ್ಕೆ ಸಿಎಂ ಬಿಎಸ್‌ ಯಡಿಯೂರಪ್ಪ ಪರಿಹಾರ ಹಣ ಘೋಷಿಸಿದ್ದಾರೆ.